ಧರ್ಮಸ್ಥಳ ಸ್ನಾನಘಟ್ಟದ ಸಮೀಪ ಸಾಕ್ಷಿ ದೂರುದಾರ ತೋರಿಸಿದ್ದ ಜಾಗ
ಮಂಗಳೂರು: ಧರ್ಮಸ್ಥಳ ಬೆಳವಣಿಗೆಗೆ ಸಂಬಂಧಿಸಿದಂತೆ ಈಗ ಬಂಧಿಸಲಾಗಿರುವ, ಸಾಕ್ಷಿ ದೂರುದಾರನನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಸೋಮವಾರವೂ ವಿಚಾರಣೆಗೆ ಒಳಪಡಿಸಿದರು.
ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕ ಆತ ತಂದೊಪ್ಪಿಸಿದ್ದ ತಲೆ ಬುರುಡೆಗೆ ಸಂಬಂಧಿಸಿ ಅಧಿಕಾರಿಗಳು ಮಾಹಿತಿ ಕಲೆಹಾಕಿದರು. ಧರ್ಮಸ್ಥಳ ಗ್ರಾಮದಲ್ಲಿ ಸಾಕ್ಷಿ ದೂರುದಾರ ತೋರಿಸಿದ್ದ ಜಾಗಗಳಲ್ಲಿ ನಡೆದ ಶೋಧಕಾರ್ಯದ ದಾಖಲೀಕರಣ ಪ್ರಕ್ರಿಯೆಯೂ ಮುಂದುವರಿಯಿತು.
ಬಂಧಿತನನ್ನು ದೂರುದಾರನನ್ನು ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯ ಸೆ.3ರವರೆಗೆ ಎಸ್‌ಐಟಿ ಕಸ್ಟಡಿಗೆ ಒಪ್ಪಿಸಿದೆ.
ಯೂಟ್ಯೂಬರ್ ವಿಚಾರಣೆ:
ಧರ್ಮಸ್ಥಳದ ಬೆಳವಣಿಗೆ ಕುರಿತು ವಿಡಿಯೊವನ್ನು ಪ್ರಸಾರ ಮಾಡಿದ್ದ ಪ್ರಕರಣ ಸೇರಿ ‘ದೂತ’ ಯೂಟ್ಯೂಬ್ ಚಾನೆಲ್‌ನ ಎಂ.ಡಿ. ಸಮೀರ್ ವಿಚಾರಣೆ ಸೋಮವಾರವೂ ಮುಂದುವರಿಯಿತು. ಈತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಠಾಣೆಗಳಲ್ಲಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಠಾಣೆಗೆ ವಕೀಲರ ಜೊತೆ ಹಾಜರಾದ ಸಮೀರ್ ರಾತ್ರಿವರೆಗೂ ಅಲ್ಲೇ ಇದ್ದರು. ವಿಡಿಯೊ ಪ್ರಸಾರ ಮಾಡಿದ ಎರಡು ಪ್ರಕರಣಗಳ ವಿಚಾರಣೆಯನ್ನು ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿಯವರು ಹಾಗೂ ಉಜಿರೆ ಬೆನಕ ಆಸ್ಪತ್ರೆ ಬಳಿ ನಡೆದ ಗಲಾಟೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಬೆಳ್ತಂಗಡಿ ಇನ್‌ಸ್ಪೆಕ್ಟರ್ ಸುಬ್ಬಾಪುರ ಮಠ ಅವರು ನಡೆಸುತ್ತಿದ್ದಾರೆ.
ಜಯಂತ್ ವಿಚಾರಣೆಗೆ ಹಾಜರು: ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಪ್ರಕರಣದ ವಿಚಾರಣೆಗೆ ಜಯಂತ್ ಟಿ ಬೆಳ್ತಂಗಡಿ ಠಾಣೆಗೆ ಸೋಮವಾರ ಹಾಜರಾದರು.
‘ಮಹೇಶ್ ಶೆಟ್ಟಿ ವಿರುದ್ಧ ದಾಖಲಾದ ಪ್ರಕರಣ ಸಂಬಂಧ ವಿಚಾರಣೆಗೆ ಗುರುವಾರ 9 ಗಂಟೆಗೆ ಹಾಜರಾಗಲು ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣೆಯವರು ನೋಟಿಸ್ ನೀಡಿದ್ದರು. ನಾವು ಠಾಣೆಗೆ ಹೋಗಿದ್ದೇವೆ. ಸೌಜನ್ಯಾಗೆ ಜೈಕಾರ ಹಾಕಿ, ಒಳ್ಳೆ ರೀತಿಯಲ್ಲೇ ತೆರಳಿದ್ದೇವೆ. ಆದರೂ ನಮ್ಮ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಅದರ ಉದ್ದೇಶ ಗೊತ್ತಿಲ್ಲ’ ಎಂದು ಜಯಂತ್ ಟಿ. ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.