ಉಜಿರೆ: ಧರ್ಮಸ್ಥಳ ಗ್ರಾಮದ ಬೊಳಿಯಾರು ಎಂಬಲ್ಲಿ ಶುಕ್ರವಾರ ಮುಂಜಾನೆ ಕಾಡಾನೆ ದಾಳಿಯಿಂದ ಆಟೊರಿಕ್ಷಾ ನಜ್ಜುಗುಜ್ಜಾಗಿದೆ.
ಬೊಳಿಯಾರು ನಿವಾಸಿ ದಿನೇಶ್ ಅವರು ಮನೆಯಿಂದ ಧರ್ಮಸ್ಥಳದ ಕಡೆಗೆ ಹೋಗುತ್ತಿದ್ದಾಗ ರಸ್ತೆ ಮಧ್ಯದಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ದಿನೇಶ್ ಭಯದಿಂದ ಆಟೊ ಬಿಟ್ಟು ಓಡಿ ತಪ್ಪಿಸಿಕೊಂಡರು. ಆಗ ಕಾಡಾನೆ ಆಟೊವನ್ನು ನಜ್ಜುಗುಜ್ಜು ಮಾಡಿ ಚರಂಡಿಗೆ ದೂಡಿ ಹಾಕಿದೆ. ಭೀಕರ ಶಬ್ದ ಕೇಳಿ ದಿನೇಶ್ ಪತ್ನಿ ಅವರ ಹಾಗೂ ಸುತ್ತಮುಲ್ಲಿನವರು ಸ್ಥಳಕ್ಕೆ ಬಂದಾಗ ಕಾಡಾನೆ ಕಾಡಿನತ್ತ ಓಡಿದೆ. ರಿಕ್ಷಾದ ಸ್ಥಿತಿ ನೋಡಿ ಕುಸಿದು ಬಿದ್ದ ದಿನೇಶ್ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಶುಶ್ರೂಷೆ ನೀಡಲಾಯಿತು.
ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.
ಗಿಡಗಳ ವಿತರಣೆ ಆರಂಭ:
ನಿಡಿಗಲ್ ಸಸ್ಯಕ್ಷೇತ್ರದಲ್ಲಿ ಅರಣ್ಯ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಗಿಡಗಳ ವಿತರಣೆ ಆರಂಭಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ತಿಳಿಸಿದ್ದಾರೆ.
ಅಳಿವಿನಂಚಿನಲ್ಲಿರುವ ಸುಮಾರು 20 ಜಾತಿಯ 90 ಸಾವಿರ ಗಿಡಗಳು ಸಿದ್ಧವಾಗಿದ್ದು, ಸಾರ್ವಜನಿಕರು ಕಚೇರಿ ಸಮಯದಲ್ಲಿ ಪಡೆದುಕೊಳ್ಳಬಹುದು. ಗಿಡಗಳ ಬೆಳವಣಿಗೆ ಆಧಾರದಲ್ಲಿ ಇಲಾಖೆ ವತಿಯಿಂದ ಮೂರು ವರ್ಷಗಳ ವರೆಗೆ ಪ್ರೋತ್ಸಾಹಧನ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.