ADVERTISEMENT

ಕ್ರೀಡಾ ಸಾಧಕರಿಗೆ ಉದ್ಯೋಗದಲ್ಲಿ ನೇರ ನೇಮಕಾತಿ: ಈಶ್ವರಪ್ಪ

ಅಖಿಲ ಭಾರತ ಅಂತರವಿಶ್ವವಿದ್ಯಾಲಯ ಕ್ರೀಡಾ ಕೂಟದ ಕಾರ್ಯಾಲಯಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 14:24 IST
Last Updated 8 ನವೆಂಬರ್ 2019, 14:24 IST
ಮೂಡುಬಿದಿರೆಯಲ್ಲಿ ಶುಕ್ರವಾರ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟದ ಕಾರ್ಯಾಲಯವನ್ನು ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಎಸ್ ಈಶ್ವರಪ್ಪ ಉದ್ಘಾಟಿಸಿದರು. ಡಾ.ಎಂ. ಮೋಹನ ಆಳ್ವ, ಶಾಸಕ ಉಮಾನಾಥ ಕೋಟ್ಯಾನ್ ಇದ್ದರು
ಮೂಡುಬಿದಿರೆಯಲ್ಲಿ ಶುಕ್ರವಾರ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟದ ಕಾರ್ಯಾಲಯವನ್ನು ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಎಸ್ ಈಶ್ವರಪ್ಪ ಉದ್ಘಾಟಿಸಿದರು. ಡಾ.ಎಂ. ಮೋಹನ ಆಳ್ವ, ಶಾಸಕ ಉಮಾನಾಥ ಕೋಟ್ಯಾನ್ ಇದ್ದರು   

ಮೂಡುಬಿದಿರೆ:`ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಇದುವರೆಗೆ ಕ್ರೀಡೆಗೆ ಸಿಗುತ್ತಿದ್ದ ಪ್ರೋತ್ಸಾಹ ಸ್ವಲ್ಪ ಕಡಿಮೆ ಎಂದು ಅನಿಸುತ್ತಿದೆ. ಸಾಧನೆ ಮಾಡಿದ ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಕ್ರೀಡಾ ಅಧಿಕಾರಿಗಳ ವಿಶೇಷ ಸಭೆಯನ್ನು ನಡೆಸಿ, ಅಭಿಪ್ರಾಯಗಳನ್ನು ಕ್ರೋಡೀಕರಿಸಿ, ಬಜೆಟ್‌ ಮೂಲಕ ಅನುದಾನ ಕಾಯ್ದಿರಿಸಲು ಪ್ರಯತ್ನಿಸಲಾಗುವುದು. ಸಾಧಕ ಕ್ರೀಡಾಪಟುಗಳಿಗೆ ಸರ್ಕಾರಿ ಹುದ್ದೆಗೆನೇರ ನೇಮಕಾತಿಗೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ' ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿರಾಜ್ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

80ನೇ ಅಖಿಲ ಭಾರತ ಅಂತರವಿಶ್ವವಿದ್ಯಾಲಯ ಕ್ರೀಡಾ ಕೂಟದ ಕಾರ್ಯಾಲಯವನ್ನು ಆಳ್ವಾಸ್ ಆಡಳಿತ ಕಚೇರಿ ಕಟ್ಟಡದಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕಲಿಕೆಗೆ ಮೊದಲ ಆದ್ಯತೆ ನೀಡುವುದರ ಜತೆಗೆ ಕ್ರೀಡೆಯಲ್ಲೂ ಆಸಕ್ತಿ ತೋರಬೇಕು’ ಎಂದರು. ‘ತುಮಕೂರಿನಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಆರಂಭವಾಗಲಿದೆ’ ಎಂದರು.

‘ಆಳ್ವಾಸ್ ಶಿಕ್ಷಣ ಸಂಸ್ಥೆ 800 ಕ್ರೀಡಾಪಟುಗಳಿಗೆ ಉಚಿತ ತರಬೇತಿಯನ್ನು ನೀಡುತ್ತಿರುವುದು ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ. ಡಾ. ಮೋಹನ ಆಳ್ವ ಶಿಕ್ಷಣ ರಂಗದ ಬ್ರಹ್ಮ ಇದ್ದಂತೆ’ ಎಂದರು.

ADVERTISEMENT

‘ನೆರೆ ಸಂತ್ರಸ್ತರಿಗೆ ಸ್ಪಂದಿಸಲು ಸಾಕಷ್ಟು ಅನುದಾನದ ಅಗತ್ಯ ಇದೆ. ಆದರೂ ಜನವರಿಯಲ್ಲಿ ಮೂಡುಬಿದಿರೆಯಲ್ಲಿ ನಡೆಯುವ ಅಖಿಲ ಭಾರತ ಅಂತರವಿಶ್ವವಿದ್ಯಾಲಯ ಕ್ರೀಡಾ ಕೂಟಕ್ಕೆ ₹50 ಲಕ್ಷ ಅನುದಾನ ಹಾಗೂ ಅಗತ್ಯ ಕ್ರೀಡಾ ಸಾಮಾಗ್ರಿಗಳನ್ನು ಒದಗಿಸಲಾಗುವುದು’ ಎಂದು ಅಚಿವ ಈಶ್ವರಪ್ಪ ಭರವಸೆ ನೀಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ, ‘ಕ್ರೀಡೆಯನ್ನು ಶಿಕ್ಷಣದ ಅವಿಭಾಜ್ಯ ಅಂಗವಾಗಿ ಸರ್ಕಾರ ಪರಿಗಣಿಸಬೇಕು, ಸಾಧಕ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಉದ್ಯೋಗದಲ್ಲಿ ಮೀಸಲಾತಿ, ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುವ ಕ್ರೀಡಾ ಕೂಟಗಳಿಗೆ ಸರ್ಕಾರದ ಪ್ರೋತ್ಸಾಹ ನೀಡಬೇಕು’ ಎಂಬ ಬೇಡಿಕೆಗಳನ್ನು ಸಚಿವರ ಮುಂದಿಟ್ಟರು.

ಶಾಸಕ ಉಮಾನಾಥ ಕೋಟ್ಯಾನ್, ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತೇಶ್, ಕ್ರೀಡಾ ಆಯುಕ್ತ ಶ್ರೀನಿವಾಸ ಮತ್ತು ಜಿಲ್ಲಾ ಪಂಚಾಯಿತಿ ಮುಖರ್ಯಕಾರ್ಯಬಿರ್ವಹಣಾಧಿಕಾರಿ ಸೆಲ್ವಮಣಿ, ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.