ಪುತ್ತೂರು: ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ ಪುತ್ತೂರಾಯ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆಗೆ ಯತ್ನಿಸಿದ ಆರೋಪಿಯ ಬಂಧನಕ್ಕೆ ಆಗ್ರಹಿಸಿ ವೈದ್ಯರು ನಡೆಸುತ್ತಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ವೈದ್ಯರ ಸಂಘಟನೆಗಳು ನಿರ್ಧರಿಸಿವೆ.
ಎಸ್‌ಪಿ ಯತೀಶ್ ಅವರು ಡಿವೈಎಸ್‌ಪಿ ಅರುಣ್ ನಾಗೇಗೌಡ ಉಪಸ್ಥಿತಿಯಲ್ಲಿ ಪುತ್ತೂರಿನ ಡಿವೈಎಸ್‌ಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಮತ್ತು ಡಾಕ್ಟರ್ಸ್ ಫೋರಂ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಎಫ್ಐಆರ್‌ನಲ್ಲಿ ದೂರಿಗೆ ಸಂಬಂಧಿಸಿದ ಗಂಭೀರ ಅಂಶಗಳನ್ನು ಸೇರಿಸಲಾಗಿದೆ. ಆರೋಪಿಯ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಯನ್ನು ಶೀಘ್ರವಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಕಾರಣದಿಂದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ಘಟಕದ ಕಾರ್ಯದರ್ಶಿ ಡಾ.ಗಣೇಶ್ ಪ್ರಸಾದ್ ಮುದ್ರಾಜೆ ತಿಳಿಸಿದ್ದಾರೆ.
ಪ್ರತಿಭಟನೆಯು ಧಾರ್ಮಿಕ ರೂಪ ಪಡೆದುಕೊಳ್ಳುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿರುವ ಎಸ್‌ಪಿ, ಪುತ್ತೂರು ಪಟ್ಟಣದ ಯಾವುದೇ ಸ್ಥಳದಲ್ಲಿ ಧರಣಿ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ನಾವು ಧಾರ್ಮಿಕ ಅಥವಾ ರಾಜಕೀಯ ಪ್ರಭಾವದಿಂದ ಮುಕ್ತವಾಗಿದ್ದು, ಕೇವಲ ನ್ಯಾಯಕ್ಕಾಗಿ ಶಾಂತಿಯುತವಾಗಿ ಹೋರಾಡುತ್ತಿರುವುದಾಗಿ ಎಸ್‌ಪಿಗೆ ತಿಳಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲು: ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಶನಿವಾರ ಬೆಳಿಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿ ಮುಖ್ಯರಸ್ತೆಯ ಮಧ್ಯದಲ್ಲಿ ಕುಳಿತು ವಾಹನ ಸಂಚಾರ, ಇತರ ತುರ್ತು ಸೇವೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪದಲ್ಲಿ ಪ್ರತಿಭಟನಾಕಾರರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈದ್ಯೆಯ ಕರ್ತವ್ಯಕ್ಕೆ ಅಡ್ಡಿ ಪಡಿಸಿದ, ಹಲ್ಲೆಗೆ ಯತ್ನಿಸಿದ ಪ್ರಕರಣದ ಆರೋಪಿಯನ್ನು ಬಂಧಿಸಿಲ್ಲ ಎಂದು ಮಹಿಳಾ ಪೊಲೀಸ್ ಠಾಣೆ ಮುಂಭಾಗ ಕೆಲವು ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರು ಮಹಿಳಾ ಪೊಲೀಸ್ ಠಾಣೆಯ ಬಳಿ ಬೊಳುವಾರು- ದರ್ಬೆ ಮುಖ್ಯ ರಸ್ತೆಗೆ ಏಕಾಏಕಿ ಬಂದು ಕುಳಿತು ವಾಹನ ಸಂಚಾರಕ್ಕೆ ಅಡ್ಡಿ ಮಾಡಿದ್ದರು. ರಸ್ತೆಯಲ್ಲಿ ಕುಳಿತು ಪೊಲೀಸರಿಗೆ ದಿಕ್ಕಾರ ಕೂಗಿದ್ದರು. ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರೂ ಸುಮಾರು ಒಂದು ಗಂಟೆ ರಸ್ತೆ ತಡೆ ಮಾಡಿದ್ದರು. ಕರ್ತವ್ಯದಲ್ಲಿದ್ದ ಪೊಲೀಸರನ್ನು ಪ್ರತಿಭಟನಾಕಾರರಲ್ಲಿ ಕೆಲವರು ತಳ್ಳಿ ಸಮವಸ್ತ್ರಕ್ಕೆ ಕೈಹಾಕಿ ಸೂಕ್ತವಾಗಿ ಕರ್ತವ್ಯ ನಿರ್ವಹಿಸಲು ಅಡ್ಡಿ ಮಾಡಿದ್ದಾರೆ ಎಂಬ ಆರೋಪದಲ್ಲಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೇಷ ಸೃಷ್ಟಿಸುವ ಸಂದೇಶ– ಆರೋಪಿ ವಿರುದ್ಧ ಪ್ರಕರಣ: ಕೋಮು ದ್ವೇಷ ಸೃಷ್ಷ್ಟಿಸುವ ಸಂದೇಶವನ್ನು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ರವಾನಿಸಿದ ಆರೋಪದಲ್ಲಿ ವ್ಯಕ್ತಿ ವಿರುದ್ಧ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪುತ್ತೂರು ನಗರ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ ಅವರು ಸಿಬ್ಬಂದಿಯೊಂದಿಗೆ ಕರ್ತವ್ಯದಲ್ಲಿದ್ದಾಗ ಕೆಲವು ಕಡೆ ಗುಂಪಾಗಿ ಸಾರ್ವಜನಿಕರು ವಾಟ್ಸ್‌ಆ್ಯಪ್ ಸಂದೇಶ ನೋಡುತ್ತಿದ್ದುದು ಕಂಡು ಬಂದಿತ್ತು. ಈ ಕುರಿತು ವಿಚಾರಿಸಿದಾಗ ‘ಅನು ಪುತ್ತೂರು’ ಎಂಬುವರು ಸರ್ಕಾರಿ ಆಸ್ಪತ್ರೆಯ ಮಹಿಳಾ ವೈದ್ಯಾಧಿಕಾರಿ ಮೇಲೆ ಹಲ್ಲೆಗೆ ಯತ್ನಿಸಿ ಅನುಚಿತ ವರ್ತನೆ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸುವ ವಿಚಾರ ಮುಂದಿಟ್ಟುಕೊಂಡು, ಒಂದು ಧರ್ಮದ ವಿರುದ್ಧ ಕೋಮು ದ್ವೇಷ ಭಾವನೆ ಸೃಷ್ಟಿಸುವ ಸಂದೇಶಗಳನ್ನು ವಿವಿಧ ಗ್ರೂಪ್‌ಗಳಿಗೆ ಕಳುಹಿಸಿರುವುದು ಕಂಡುಬಂದಿತ್ತು.
ಈ ಸಂದೇಶದಿಂದ ಸಮುದಾಯಗಳ ನಡುವೆ ವೈಮನಸ್ಸು, ವೈರತ್ವ, ದ್ವೇಷ ಹಾಗೂ ಕೋಮು ಭಾವನೆ ಉಂಟು ಮಾಡಿ ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಸಾಧ್ಯತೆ ಇರುವುದರಿಂದ, ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಂಭವ ಇರುವುದರಿಂದ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.