ಮಂಗಳೂರು: ನಾರಾಯಣಗುರುಗಳು ನಡೆದಾಡಿದ ರಾಜ್ಯದ ಕರಾವಳಿಯ ನೆಲವು ಇಂದು ದ್ವೇಷ, ಅಸೂಯೆ, ಅಸಹಕಾರದ ಕೇಂದ್ರ ಬಿಂದುವಾಗಿದ್ದು ನೋವಿನ ಸಂಗತಿ. ನಾರಾಯಣಗುರುಗಳ ನಿಜವಾದ ಸಂದೇಶವನ್ನು ಯುವಜನರು ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಒಂದು ಕಾಲದಲ್ಲಿ ಹುಚ್ಚಾಸತ್ರೆಯಂತಾಗಿದ್ದ ಕೇರಳದಂತೆಯೇ ಈ ಕರಾವಳಿಯೂ ಹುಚ್ಚಾಸ್ಪತ್ರೆಯಂತಾಗಲು ಬಿಡಬಾರದು’ ಎಂದು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ, ಇಲ್ಲಿನ ಶ್ರೀಗೋಕರ್ಣನಾಥ ಶಿಕ್ಷಣ ಸಂಸ್ಥೆಗಳು ಹಾಗೂ ಶ್ರೀನಾರಾಯಣಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ ಆಶ್ರಯದಲ್ಲಿ ‘ವರ್ತಮಾನ ಕಾಲಘಟ್ಟದಲ್ಲಿ ಶ್ರೀನಾರಾಯಣ ಗುರುಗಳ ಸಂದೇಶ - ಪ್ರಸ್ತುತತೆ’ ಎಂಬ ಕುರಿತು ಗೋಕರ್ಣನಾಥ ಕಾಲೇಜಿನಲ್ಲಿ ಭಾನುವಾರ ಆಯೋಜಿಸಲಾದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಹಿಂದೂ ಧರ್ಮದ ಸಾಮಾಜಿಕ ವ್ಯವಸ್ಥೆ ಬದಲಾಯಿಸಲು ಮುಂದಾಗಿದ್ದ ಸ್ವಾಮಿ ವಿವೇಕಾನಂದರೇ ‘ಕೇರಳ ಒಂದು ಹುಚ್ಚಾಸ್ಪತ್ರೆ’ ಎಂಬ ತೀರ್ಮಾನಕ್ಕೆ ಬಂದಿದ್ದರು. ಅಲ್ಲಿನ ಜಾತಿ ವ್ಯವಸ್ಥೆ, ಪುರೋಗಾಮಿತನದಿಂದಾಗಿ ವಿವೇಕಾನಂದರೇ ಅಲ್ಲಿ ತಮ್ಮ ಹಿಂದೂ ಧರ್ಮದ ಸುಧಾರಣಾ ಹೋರಾಟದಿಂದ ಹಿಂದೆ ಸರಿದರು. ಅಂತಹ ಹುಚ್ಚಾಸ್ಪತ್ರೆಯನ್ನು ಮಾದರಿಯಾದ ರಾಜ್ಯವನ್ನಾಗಿ ಮಾಡಿದ್ದು ನಾರಾಯಣಗುರುಗಳ ಸಾಮಾಜಿಕ ಚಳವಳಿ. ಕರಾವಳಿಯ ಜಿಲ್ಲೆಗಳನ್ನು ಕೋಮುವಾದದಿಂದ ಬಿಡುಗಡೆಗೊಳಿಸಿ ಸಹಬಾಳ್ವೆ, ಸೋದರತೆಯಿಂದ ಬದುಕುವಂತೆ ಮಾಡಲು ನಾರಾಯಣ ಗುರುಗಳ ಸಂದೇಶ ಒಂದೇ ಮಾರ್ಗ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್. ಧರ್ಮ, ‘ಬಹುತ್ವದ ಸಮಾಜದಲ್ಲಿ, ಶ್ರೀಮಂತ, ಬಡವ, ಮೇಲು–ಕೀಳಿನ ಸಮಾಜದಲ್ಲಿ, ಎಲ್ಲರೂ ‘ಒಂದೇ’ ಎನ್ನುವ ವಿಚಾರವನ್ನು ಹೃದಯದಲ್ಲಿ ಅಳವಡಿಸುವುದು ಕಷ್ಟ. ಮಠ- ಮಂದಿರಗಳೇ ಜಾತಿ ಮೀಸಲಾತಿ ಕೊಡಿ ಎಂದು ಕೇಳುವಾಗ ಗುರುಗಳನ್ನು ಕರೆ ತರುವ ಧೈರ್ಯ ತೋರುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.
ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಜಯರಾಜ್, ಖಜಾಂಚಿ ಪದ್ಮರಾಜ್ ಆರ್.ಪೂಜಾರಿ, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ಶ್ರೀವೆಂಕಟೇಶ್ವರ ಶಿವಭಕ್ತಿ ಯೋಗ ಸಂಘದ ಉಪಾಧ್ಯಕ್ಷರಾದ ಶೇಖರ್ ಪೂಜಾರಿ, ಬಿ.ಜಿ.ಸುವರ್ಣ, ನಾರಾಯಣಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್ ಕೆ.ಪೂಜಾರಿ ಭಾಗವಹಿಸಿದ್ದರು.
ಅಧ್ಯಯನ ಪೀಠದ ನಿರ್ದೇಶಕ ಜಯರಾಜ್ ಎನ್. ಸ್ವಾಗತಿಸಿದರು. ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಯ ಸಂಚಾಲಕ ವಸಂತ ಕಾರಂದೂರು ಧನ್ಯವಾದ ಸಲ್ಲಿಸಿದರು. ಉಪನ್ಯಾಸಕಿ ದಿವ್ಯಾ ಕಾರ್ಯಕ್ರಮ ನಿರೂಪಿಸಿದರು.
‘ಸರಳ ಧಾರ್ಮಿಕ ಅನುಷ್ಠಾನದಲ್ಲಿ ದೈವದಶಕಂ ಪ್ರಭಾವ’ ವಿಷಯದ ಕುರಿತು ನಿವೃತ್ತ ಪ್ರಾಧ್ಯಾಪಕಿ ಮೀನಾಕ್ಷಿ ರಾಮಚಂದ್ರ ಮಾತನಾಡಿದರು. ‘ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು’ ವಿಷಯದ ಕುರಿತು ಮುಕ್ತ ಸಂವಾದದಲ್ಲಿ ಮೂಲ್ಕಿ ಸರ್ಕಾರಿ ಪದವಿ ಪೂರ್ವ. ಕಾಲೇಜಿನ ಪ್ರಾಂಶುಪಾಲ ವಾಸುದೇವ ಬೆಳ್ಳೆ, ಚೇಳಾಯ್ರು ಸರ್ಕಾರಿ ಪ.ಪೂ. ಕಾಲೇಜು ಪ್ರಾಂಶುಪಾಲರಾದ ಜ್ಯೋತಿ ಚೇಳಾಯ್ರು ಮತ್ತು ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಯ ನಿವೃತ್ತ ಡೀನ್ ಉಮ್ಮಪ್ಪ ಪೂಜಾರಿ ಪಿ. ಪಾಲ್ಗೊಂಡರು.
‘ಹೃದಯ ಕೇಂದ್ರಿತ ಚಿಂತನೆ’
‘ನಾರಾಯಣಗುರು ಅವರದು ಹೃದಯ ಕೇಂದ್ರಿತ ಚಿಂತನೆಯ ಹೊರತು ಬುದ್ಧಿಕೇಂದ್ರಿತ ಚಿಂತನೆ ಅಲ್ಲ. ಅವರ ತತ್ವಗಳು ಪರಿಣಾಮಕಾರಿ ಆಗಿರುವುದಕ್ಕೆ ಕಾರಣ ಅವು ಅನುಕರಣೀಯವಾಗಿದ್ದವು. ಅದರ ಫಲವಾಗಿಯೇ ಕೇರಳ ಆಧುನಿಕತೆಯತ್ತ ತೆರೆದುಕೊಂಡಿತು’ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟರು. ಅವರು ‘ಶೈಕ್ಷಣಿಕ ಪುನರುತ್ಥಾನ ಮತ್ತು ಶ್ರೀ ನಾರಾಯಣಗುರು’ ವಿಷಯದ ಕುರಿತು ಮಾತನಾಡಿದರು. ‘ಸಾಮಾಜಿಕ ಸಾಮರಸ್ಯಕ್ಕೆ ಶ್ರೀ ನಾರಾಯಣ ಗುರು ಸೂತ್ರ’ ವಿಷಯದ ಕುರಿತು ಮಾತನಾಡಿದ ಎನ್.ಎಂ.ಎ.ಇಸ್ಮಾಯಿಲ್ ‘ಹೊಸಮತದ ಸ್ಥಾಪನೆಗಿಂತ ಹಳ್ಳಿಯ ಬಡವನ ಹಸಿವೆಯೇ ನಾರಾಯಣಗುರುಗಳಿಗೆ ಮುಖ್ಯವಾಗಿ ಕಂಡಿದೆ. ಹಾಗಾಗಿಯೇ ಅವರು ಜ್ಞಾನೋದಯದ ಬಳಿಕವೂ ಜನಮುಖಿಯಾದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.