ADVERTISEMENT

ಸಿಎಎಯಿಂದ ಮುಸ್ಲಿಮರಿಗೆ ತೊಂದರೆ ಆಗಲು ಬಿಡುವುದಿಲ್ಲ: ರಾಜನಾಥ್‌ ಸಿಂಗ್‌

ಜನಜಾಗೃತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 15:55 IST
Last Updated 27 ಜನವರಿ 2020, 15:55 IST
ಬಂಗ್ರಕೂಳೂರಿನಲ್ಲಿ ಬಿಜೆಪಿ ವತಿಯಿಂದ ಸೋಮವಾರ ನಡೆದ ಸಿಎಎ ಕುರಿತ ಜನಜಾಗೃತಿ ಸಮಾವೇಶದ ವೇದಿಕೆಗೆ ಬಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರು ಜನರತ್ತ ಕೈಬೀಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಮುಖಂಡರು ಇದ್ದರು.– ಪ್ರಜಾವಾಣಿ ಚಿತ್ರ
ಬಂಗ್ರಕೂಳೂರಿನಲ್ಲಿ ಬಿಜೆಪಿ ವತಿಯಿಂದ ಸೋಮವಾರ ನಡೆದ ಸಿಎಎ ಕುರಿತ ಜನಜಾಗೃತಿ ಸಮಾವೇಶದ ವೇದಿಕೆಗೆ ಬಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರು ಜನರತ್ತ ಕೈಬೀಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಮುಖಂಡರು ಇದ್ದರು.– ಪ್ರಜಾವಾಣಿ ಚಿತ್ರ   

ಮಂಗಳೂರು:‘ದೇಶದಲ್ಲಿ ಹುಟ್ಟಿ ಬೆಳೆದ ಒಬ್ಬ ಮುಸ್ಲಿಮನಿಗೂ ಪೌರತ್ವ (ತಿದ್ದುಪಡಿ) ಕಾಯ್ದೆಯಿಂದ (ಸಿಎಎ) ತೊಂದರೆ ಆಗಲು ಬಿಡುವುದಿಲ್ಲ. ಅಂತಹ ಸಂದರ್ಭದಲ್ಲಿ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಮುಸ್ಲಿಮರ ಬೆಂಬಲಕ್ಕೆ ನಿಲ್ಲುತ್ತವೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭರವಸೆ ನೀಡಿದರು.

ಬಿಜೆಪಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಘಟಕಗಳ ವತಿಯಿಂದ ನಗರದ ಬಂಗ್ರಕೂಳೂರು ಗೋಲ್ಡ್‌ ಫಿಂಚ್‌ ಸಿಟಿಯಲ್ಲಿ ಸೋಮವಾರ ಆಯೋಜಿಸಿದ್ದ ಸಿಎಎ ಕುರಿತ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ಈ ನೆಲದಲ್ಲಿ ಹುಟ್ಟಿ ಬೆಳೆದ ಮುಸ್ಲಿಮರಿಗೂ ಕಾಯ್ದೆಗೂ ಸಂಬಂಧವೇ ಇಲ್ಲ. ವಿರೋಧ ಪಕ್ಷಗಳು ಅನಗತ್ಯ ಗೊಂದಲ ಸೃಷ್ಟಿಸಿ, ಮುಸ್ಲಿಮರಲ್ಲಿ ಭಯ ಹುಟ್ಟಿಸುತ್ತಿವೆ’ ಎಂದು ಆರೋಪಿಸಿದರು.

ಇಸ್ಲಾಂ ಧರ್ಮದ ಅನುಯಾಯಿಗಳಿಗೆ ಭಾರತಕ್ಕಿಂತಲೂ ಸುರಕ್ಷಿತವಾದ ರಾಷ್ಟ್ರ ಬೇರೆ ಇಲ್ಲ. ಭಾರತದಲ್ಲಿ ಇಸ್ಲಾಂ ಧರ್ಮೀಯರ 72 ಉಪ ಪಂಗಡಗಳಿವೆ. ಜಗತ್ತಿನ ಬೇರೆ ಯಾವ ರಾಷ್ಟ್ರದಲ್ಲೂ ಇಷ್ಟೊಂದು ಉಪ ಪಂಗಡಗಳನ್ನು ಕಾಣಲು ಸಾಧ್ಯವೇ ಇಲ್ಲ ಎಂದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರ ಯಾವುದನ್ನೂ ಗುಪ್ತವಾಗಿ ಮಾಡಿಲ್ಲ. ಬಿಜೆಪಿ ಚುನಾವಣಾ ಪ್ರಣಾಳಿಕೆಗಳಲ್ಲಿ ನೀಡಿದ್ದ ಭರವಸೆಯನ್ನೇ ಅನುಷ್ಠಾನಕ್ಕೆ ತರುತ್ತಿದೆ. ಕೊಟ್ಟ ಮಾತಿನಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡಲಾಗಿದೆ. ತ್ರಿವಳಿ ತಲಾಖ್‌ ನಿಷೇಧಿಸಲಾಗಿದೆ. ಸಂವಿಧಾನಾತ್ಮಾಕ ಮಾರ್ಗದಲ್ಲೇ ರಾಮ ಮಂದಿರ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ. ಸಿಎಎ ಜಾರಿಯೂ ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಭಾಗವೇ ಆಗಿದೆ ಎಂದು ಹೇಳಿದರು.

ಸಿಎಎ ಕುರಿತ ಚರ್ಚೆ ಹೊಸದೇನೂ ಅಲ್ಲ. ಆಯಾ ರಾಷ್ಟ್ರಗಳಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವ ಕುರಿತು 1950ರಲ್ಲೇ ಭಾರತದ ಆಗಿನ ಪ್ರಧಾನಿ ಜವಾಹರ ಲಾಲ್‌ ನೆಹರೂ ಮತ್ತು ಪಾಕಿಸ್ತಾನದ ಅಂದಿನ ಪ್ರಧಾನಿ ಲಿಯಾಖತ್‌ ಅಲಿ ಖಾನ್‌ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪ್ಘಾನಿಸ್ತಾನ ರಾಷ್ಟ್ರಗಳು ಈ ಒಪ್ಪಂದವನ್ನು ಪಾಲಿಸಲಿಲ್ಲ. ಅಲ್ಲಿ ದೌರ್ಜನ್ಯಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.

‘ನಿರಾಶ್ರಿತರ ರಕ್ಷಣೆಗಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಸಿಎಎ ಮುಂದಿಟ್ಟುಕೊಂಡು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ವೈಷಮ್ಯ ಸೃಷ್ಟಿಸಬೇಡಿ’ ಎಂದು ವಿರೋಧ ಪಕ್ಷಗಳಿಗೆ ಮನವಿ ಮಾಡಿದರು.

ಎನ್‌ಪಿಆರ್‌ ಕಾಂಗ್ರೆಸ್ ಸೃಷ್ಟಿ:

ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಸುಪ್ರೀಂಕೋರ್ಟ್‌ ಆದೇಶದಂತೆ ಅಸ್ಸಾಂನಲ್ಲಿ ಜಾರಿಗೊಳಿಸಲಾಗಿದೆ. ರಾಜೀವ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರವೇ ಅದನ್ನು ಆರಂಭಿಸಿತ್ತು. ರಾಷ್ಟ್ರೀಯ ಜನಸಂಖ್ಯಾ ದಾಖಲೆಯೂ (ಎನ್‌ಪಿಆರ್‌) 2010ರಲ್ಲಿ ಕಾಂಗ್ರೆಸ್‌ನಿಂದಲೇ ಆರಂಭವಾದ ಯೋಜನೆ. ಎನ್‌ಪಿಆರ್‌ನಲ್ಲಿ ಬಲವಂತದಿಂದ ಯಾವುದೇ ಮಾಹಿತಿ ಸಂಗ್ರಹಿಸುವುದಿಲ್ಲ ಎಂದು ರಾಜನಾಥ್‌ ಸಿಂಗ್‌ ಹೇಳಿದರು.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ವರ್ಚಸ್ಸು ಹೆಚ್ಚಿದೆ. ಶತ್ರು ರಾಷ್ಟ್ರಗಳ ಜೊತೆಗೆ ವಿರೋಧ ಪಕ್ಷಗಳಲ್ಲೂ ಇದು ಹೊಟ್ಟೆ ಉರಿಗೆ ಕಾರಣವಾಗಿದೆ. ಅದಕ್ಕೆ ದೇಶದ ಜನರೇ ಔಷಧಿ ನೀಡಬೇಕು ಎಂದರು.

ನಾಗಾಲ್ಯಾಂಡ್‌ನ ಮಾಜಿ ರಾಜ್ಯಪಾಲ ಪಿ.ಬಿ.ಆಚಾರ್ಯ, ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕ ವಿ.ಸುನೀಲ್‌ ಕುಮಾರ್‌, ಶಾಸಕರಾದ ಎಸ್‌.ಅಂಗಾರ, ಸಂಜೀವ ಮಠಂದೂರು, ಡಿ.ವೇದವ್ಯಾಸ ಕಾಮತ್‌, ಡಾ.ವೈ.ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾಯ್ಕ್‌ ಉಳಿಪಾಡಿಗುತ್ತು, ಹರೀಶ್‌ ಪೂಂಜ, ರಘುಪತಿ ಭಟ್‌, ಬಿ.ಎಂ.ಸುಕುಮಾರ ಶೆಟ್ಟಿ, ಲಾಲಾಜಿ ಆರ್‌. ಮೆಂಡನ್‌, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪ್ರಭಾರಿ ಉದಯಕುಮಾರ್‌ ಶೆಟ್ಟಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.