ADVERTISEMENT

ಎಲ್ಲದರಲ್ಲೂ ನಮ್ಮನ್ನೇ ಯಾಕೆ ಸಿಕ್ಕಿಸಿ ಹಾಕ್ತೀರಾ: ಡಾ.ಕೆ.ಸುಧಾಕರ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 12:15 IST
Last Updated 31 ಮಾರ್ಚ್ 2021, 12:15 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಮಂಗಳೂರು: ‘ಎಲ್ಲದರಲ್ಲೂ ನಮ್ಮನ್ನೇ ಯಾಕೆ ಸಿಕ್ಕಿಸಿ ಹಾಕ್ತೀರಾ?’

-ಇಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರಶ್ನಿಸಿದ್ದು ಹೀಗೆ.

ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಆದರೆ, ಸಚಿವ ಕೋಟ ಶ್ರೀನಿವಾಸ ಪೂಜಾರಿ , ‘ಈಗಾಗಲೇ ನಿಗದಿಯಾಗಿದ್ದ ಕಾರ್ಯಕ್ರಮಗಳನ್ನು ನಡೆಸಬಹುದು’ ಎಂದು ಹೇಳಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಸಚಿವ ಸುಧಾಕರ್ ಮೇಲಿನ ಉತ್ತರ ನೀಡಿ ಮುಗುಳ್ನಕ್ಕರು.

ADVERTISEMENT

‘ಕೋವಿಡ್ ನಿಯಮಾವಳಿ ಕುರಿತು ಮುಖ್ಯಮಂತ್ರಿಗಳ ಆದೇಶವೇ ಅಂತಿಮ. ಅದನ್ನು ಎಲ್ಲರೂ ಪಾಲಿಸಬೇಕು’ ಎಂದರು.

‘ದಕ್ಷಿಣ ಕನ್ನಡ ಜಿಲ್ಲೆಯ 10 ಸೇರಿದಂತೆ ರಾಜ್ಯದ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಕಾಂಪೌಂಡ್‌ ನಿರ್ಮಾಣ ಇತ್ಯಾದಿಗೆ ‘ನರೇಗಾ’ ನೆರವನ್ನೂ ಪಡೆಯಲಾಗುವುದು. ಆಂಬ್ಯುಲೆನ್ಸ್‌ಗಳ ಕೊರತೆ ನೀಗಿಸಲು ಶೀಘ್ರವೇ ಟೆಂಡರ್ ಕರೆಯಲಾಗುವುದು’ ಎಂದರು.

‘ರಾಜ್ಯದಲ್ಲಿ ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಹಾಕುತ್ತಿದ್ದು, ಪ್ರಸ್ತುತ 2 ಸಾವಿರ ಪ್ರಾಥಮಿಕ ಹಾಗೂ ಉಪ ಆರೋಗ್ಯ ಕೇಂದ್ರಗಳ ಜೊತೆ ಹೊಸ 3 ಸಾವಿರ ಲಸಿಕಾ ಕೇಂದ್ರ ಸ್ಥಾಪಿಸಲಾಗುವುದು. ಒಟ್ಟು 5 ಸಾವಿರ ಕೇಂದ್ರಗಳಲ್ಲಿ ಪ್ರತಿನಿತ್ಯ ಕನಿಷ್ಠ 2.5 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.