ADVERTISEMENT

ಮಂಗಳೂರು: ಮಂಗಳೂರಿನಲ್ಲಿ ಹೆಚ್ಚಿದ ಸ್ತನ ಕ್ಯಾನ್ಸರ್‌

ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಆಂಕಾಲಜಿಯ ಡಾ. ಸುರೇಶ್‌ ರಾವ್‌ ಕಳವಳ

ಮಹೇಶ ಕನ್ನೇಶ್ವರ
Published 31 ಅಕ್ಟೋಬರ್ 2021, 4:23 IST
Last Updated 31 ಅಕ್ಟೋಬರ್ 2021, 4:23 IST
ಡಾ. ಸುರೇಶ್‌ ರಾವ್‌
ಡಾ. ಸುರೇಶ್‌ ರಾವ್‌   

ಮಂಗಳೂರು: ‘ಮಹಿಳೆಯರ ಕ್ಯಾನ್ಸರ್‌ ಪ್ರಕರಣಗಳಲ್ಲಿ ಸುಮಾರು ಶೇ40 ರಷ್ಟು ಸ್ತನ ಕ್ಯಾನ್ಸರ್‌ ಪ್ರಕರಣಗಳು ಮಂಗಳೂರಿನಲ್ಲಿ ವರದಿ ಆಗುತ್ತಿದ್ದು, ಈ ಮೂಲಕ ಮೊದಲ ಸ್ಥಾನದಲ್ಲಿ ಇರುವುದು ಆತಂಕಕಾರಿ. ಎರಡನೇ ಸ್ಥಾನದಲ್ಲಿ ಗರ್ಭಕೋಶ (ಶೇ 20), 3 ನೇ ಸ್ಥಾನದಲ್ಲಿ ಕರುಳಿನ ಕ್ಯಾನ್ಸರ್‌ (ಶೇ 20) ಸ್ಥಾನ ಪಡೆದಿವೆ’ ಎಂದು ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಆಂಕಾಲಜಿ (ಎಂಐಒ)ಯ ರೇಡಿಯೇಶನ್‌ ವಿಭಾಗದ ಮುಖ್ಯಸ್ಥ ಡಾ. ಸುರೇಶ್‌ ರಾವ್‌ ಕಳವಳ ವ್ಯಕ್ತಪಡಿಸಿದರು.

‘ಇತ್ತೀಚಿನ ದಿನಗಳಲ್ಲಿ ಮಂಗಳೂರಿನಲ್ಲಿ ಸ್ತನ ಕ್ಯಾನ್ಸರ್‌ ಸಂಖ್ಯೆ ದ್ವಿಗುಣವಾಗುತ್ತಿದ್ದು, ನಿರ್ಲಕ್ಷ್ಯ, ಮಡಿವಂತಿಕೆ ಮಾಡಿಕೊಳ್ಳದೆ ಚಿಕಿತ್ಸೆಗೆ ಒಳಗಾಗಬೇಕು. ಬದಲಾದ ಜೀವನ ಶೈಲಿ, ಆಹಾರ ಕ್ರಮ, ಮದ್ಯಸೇವನೆ, ಧೂಮಪಾನ, ಗರ್ಭನಿರೋಧಕ ಮಾತ್ರೆ ಸೇವನೆಯೂ ಸ್ತನ ಕ್ಯಾನ್ಸರ್‌ ಸಂಖ್ಯೆ ಏರಿಕೆಗೆ ಕಾರಣ. ಸ್ತನ ಕ್ಯಾನರ್‌ ಪ್ರಕರಣಗಳು ಏರಿದಂತೆ ಮರಣ ಪ್ರಮಾಣವೂ ದ್ವಿಗುಣಗೊಂಡಿದೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯದೆ ಇರುವುದು ಸಾವಿನ ಪ್ರಮಾಣ ಹೆಚ್ಚಳಕ್ಕೆ ಕಾರಣ’ ಎನ್ನುತ್ತಾರೆ ಡಾ. ರಾವ್‌.

‘ಕಳೆದ ವರ್ಷಗಳಿಂದೀಚೆಗೆ ಸ್ತನ ಕ್ಯಾನ್ಸರ್‌ ರೋಗಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡು ಬರುತ್ತಿದೆ. ಸ್ತನ ಕ್ಯಾನ್ಸರ್‌ಗೆ ಸೂಕ್ತ ಚಿಕಿತ್ಸೆ ಇದೆ. ಸ್ತನ ಕ್ಯಾನ್ಸರ್‌ ಬಾಧಿತ ಮಹಿಳೆಯರು ರೋಗ ಲಕ್ಷಣ ಕಂಡ ಕೂಡಲೇ ಚಿಕಿತ್ಸೆಗೆ ಮುಂದಾಗಬೇಕು. ಆರಂಭಿಕ ಹಂತದಲ್ಲಿ ಪಡೆಯುವ ಚಿಕಿತ್ಸೆಯಿಂದಾಗಿ ಕ್ಯಾನ್ಸರ್‌ ತೀವ್ರತೆ ಕಡಿಮೆ ಮಾಡಬಹುದು. ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಕೂಡ ಸಾಧ್ಯ’ ಎಂದು ಡಾ. ಸುರೇಶ್‌ ರಾವ್‌ಹೇಳಿದರು.

ADVERTISEMENT

‘ಸ್ತನ ಹಾಗೂ ಸುತ್ತಮುತ್ತಲಿನ ಜಾಗದಲ್ಲಿ ಗಡ್ಡೆ ಕಾಣಿಸಿಕೊಳ್ಳುವುದು ಹಾಗೂ ಸ್ತನ ಸುತ್ತಲಿನ ಅಂಗಾಂಶವು ದಪ್ಪವಾಗುವುದು, ಸ್ತನದ ಗಾತ್ರ, ಆಕಾರ ಹಾಗೂ ನೋಟದಲ್ಲಿ ಬದಲಾವಣೆಯಾಗುವುದು, ಎದೆಯ ಚರ್ಮದಲ್ಲಿ ಬದಲಾವಣೆಗಳಾಗುವುದು, ಸ್ತನದ ಚರ್ಮ ಸುಲಿಯುವಿಕೆ, ಎದೆಭಾಗದ ಸುತ್ತಲೂ ಕೆಂಪಾಗುವುದು ಸೇರಿದಂತೆ ಇನ್ನಿತರ ಲಕ್ಷಣಗಳು ಅನುಭವಕ್ಕೆ ಬಂದಾಗ ತಕ್ಷಣಕ್ಕೆ ವೈದ್ಯರ ಬಳಿ ಪರೀಕ್ಷಿಸಿಕೊಂಡು ಮುಂದಿನ ಚಿಕಿತ್ಸಾ ಹಂತವನ್ನು ಮುಂದುವರಿಸಬೇಕು’ ಎನ್ನುತ್ತಾರೆ ಅವರು.

‘45 ವರ್ಷಕ್ಕಿಂತ ಮೇಲಿನ ಮಹಿಳೆಯರು ಪ್ರತಿ ವರ್ಷ ಮ್ಯಾಮೊಗ್ರಫಿ ಸೇರಿದಂತೆ ವಿವಿಧ ರೀತಿ ವೈದ್ಯಕೀಯ ವಿಧಾನಗಳ ಮೂಲಕ ಸ್ತನ ತಪಾಸಣೆ ಮಾಡಿಸಿಕೊಳ್ಳಬೇಕು. ಕುಟುಂಬಸ್ಥರಲ್ಲಿ ಕ್ಯಾನ್ಸರ್ ಪ್ರಕರಣಗಳಿದ್ದಲ್ಲಿ, ಸ್ತನದಲ್ಲಿ ಗಡ್ಡೆ ಇದೆ ಎಂಬ ಅನುಮಾನ ಬಂದರೆ ತಪಾಸಣೆ ಮಾಡಿಕೊಳ್ಳುವುದು ಸೂಕ್ತ’ ಎಂದು ಹೇಳಿದರು.

‘ಕ್ಯಾನ್ಸರ್‌ ಪತ್ತೆಗಾಗಿ ಅತ್ಯಾಧುನಿಕ ತಪಾಸಣಾ ಯಂತ್ರ, ಚಿಕಿತ್ಸಾ ವಿಧಾನಗಳೂ ಈಗ ಲಭ್ಯ ಇವೆ. ಮಾನಸಿಕ ಕಾರಣ, ಸಾಮಾಜಿಕ ಅಡೆತಡೆಗಳು, ಸ್ತನ ಕ್ಯಾನ್ಸರ್‌ ಬಗ್ಗೆ ಹಿಂಜರಿಕೆ, ಮ್ಯಾಮೊಗ್ರಾಮ್‌ಗೆ ಒಳಗಾಗುವ ವೇಳೆ ಆಗುವ ನೋವು, ಆರ್ಥಿಕ ಒತ್ತಡಗಳಿಂದಾಗಿ ಸ್ತನ ತಪಾಸಣೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ, ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ನೋವು ರಹಿತ ತಪಾಸಣೆ ವ್ಯವಸ್ಥೆಗಳು ಇವೆ’ ಎಂದು ತಿಳಿಸಿದರು.

‘ಮಂಗಳೂರಿನ ಇನ್‌ಸ್ಟಿಟ್ಯೂಟ್‌ ಆಫ್‌ ಆಂಕಾಲಜಿಯಲ್ಲಿ ಆಧುನಿಕ ಚಿಕಿತ್ಸೆ ಸೌಲಭ್ಯಗಳ ಲಭ್ಯತೆ ಇದೆ. ಶಸ್ತ್ರ ಚಿಕಿತ್ಸೆ, ರೆಡಿಯೇಶನ್‌, ಕಿಮೋಥೇರಪಿ ಇಂಜೆಕ್ಷನ್‌ ಮೂಲಕ ಸ್ತನ ಕ್ಯಾನ್ಸರ್‌ ಗುಣಪಡಿಸಬಹುದು. ಆರಂಭಿಕ ಹಂತದಲ್ಲಿ ಗಡ್ಡೆ ಭಾಗವನ್ನು ಸರಳ ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಬಹುದು’ ಎಂದು ಡಾ. ರಾವ್‌ ಹೇಳಿದರು.

‘ಎಂಐಒನಿಂದ ಸ್ತನ ಕ್ಯಾನ್ಸರ್‌ ಜಾಗೃತಿ’
‘ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಅಂಕಾಲಜಿ ಆಸ್ಪತ್ರೆ ವತಿಯಿಂದ ಅಕ್ಟೋಬರ್‌ ತಿಂಗಳಿನಲ್ಲಿ ಸ್ತನ ಕ್ಯಾನ್ಸರ್‌ ಮಾಸಾಚರಣೆಗೆ ಒತ್ತು ನೀಡಲಾಗುತ್ತಿದೆ. ಸ್ತನ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಜನರನ್ನು ತಲುಪುವ ಕೆಲಸ ಮಾಡಲಾಗುತ್ತಿದೆ. ಪೆಟ್‌ ಸ್ಕ್ಯಾನ್‌ ಸೌಲಭ್ಯ, ಮ್ಯಾಮೊಗ್ರಫಿ, 120 ಹಾಸಿಗೆ ಸೌಲಭ್ಯ, 11 ವರ್ಷದಲ್ಲಿ 40 ಸಾವಿರಕ್ಕೂ ಹೆಚ್ಚು ವಿವಿಧ ಕ್ಯಾನ್ಸರ್‌ ಪ್ರಕಾರಗಳಿಗೆ ಚಿಕಿತ್ಸೆ ನೀಡಲಾಗಿದೆ. ಸರ್ಕಾರ ಕ್ಯಾನ್ಸರ್‌ ಚಿಕಿತ್ಸೆಗೆ ಸೌಲಭ್ಯ ನೀಡಿದೆ. ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಆಂಕಾಲಜಿ ಆಸ್ಪತ್ರೆಯಲ್ಲಿ ಶೇ 70 ರಷ್ಟು ಮಂದಿ ಬಿ‍ಪಿಎಲ್‌ ಕಾರ್ಡ್‌ ಇರುವವರು ಬರುತ್ತಾರೆ. ಇಂತಹವರಿಗೆ ಉಚಿತ ಚಿಕಿತ್ಸೆ ನೀಡುವ ಸೌಲಭ್ಯವಿದೆ. ಆರಂಭಿಕ ಹಂತದ ಚಿಕಿತ್ಸೆಗೆ ಹೆಚ್ಚು ಖರ್ಚು ಬರಲ್ಲ. ರೋಗಿಗಳಿಗೆ ರೆಡಿಯೇಶನ್‌, ಕಿಮೋಥೆರೆಪಿ ಸೇರಿದಂತೆ ಊಟ ಉಚಿತವಾಗಿ ನೀಡುವ ವ್ಯವಸ್ಥೆ ಇದೆ’ ಎಂದು ಡಾ. ಸುರೇಶ್‌ ರಾವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.