ಮಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿ ಮಿತ್ರ ಹೆರಾಜೆ ನಗರದಲ್ಲಿ ಭಾನುವಾರ ತಡರಾತ್ರಿ ವಿರುದ್ಧದಿಕ್ಕಿನಲ್ಲಿ ವಾಹನ ಚಾಲನೆ ಮಾಡಿ ಅಪಘಾತ ಮಾಡಿದ್ದಾರೆ. ಮದ್ಯ ಸೇವಿಸಿ ವಾಹನ ಚಾಲನೆ ಮಾಡಿರುವ ಶಂಕೆ ಇದ್ದು, ಮಂಗಳೂರು ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪಗರಕರಣ ದಾಖಲಾಗಿದೆ.
ತಡರಾತ್ರಿ ಕದ್ರಿಯ ಸರ್ಕ್ಯೂಟ್ ಹೌಸ್ ನಿಂದ ಕಾರಿನಲ್ಲಿ ಬಂದ ಮಿತ್ರ ಹೆರಾಜೆ, ಬಟಗುಡ್ಡೆ ಜಂಕ್ಷನ್ ವರೆಗೂ ವಿರುದ್ಧ ದಿಕ್ಕಿನಲ್ಲಿ ಹೋಗಿದ್ದಾರೆ. ಆಗ ಸ್ಕೂಟರ್ ಒಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಸ್ಕೂಟರ್ ಸವಾರ ತೀವ್ರವಾಗಿ ಗಾಯಗೊಂಡಿದ್ದರು. ಕಾರನ್ನು ನಿಲ್ಲಿಸದೇ ಅದೇ ಮಾರ್ಗದಲ್ಲಿ ಮುಂದಕ್ಕೆ ಹೋಗಿದ್ದಾರೆ.
ಇದರಿಂದ ಕೆರಳಿದ ಸಾರ್ವಜನಿಕರು ಕಾರು ಅಡ್ಡಗಟ್ಟಿದ್ದಾರೆ. ಬೃಹತ್ ಪ್ರಮಾಣದಲ್ಲಿ ಜನರು ಸೇರಿದ್ದರು. ತಕ್ಷಣ ಸ್ಥಳಕ್ಕೆ ಬಂದ ಮಂಗಳೂರು ಪೂರ್ವ (ಕದ್ರಿ) ಠಾಣೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿದ್ದಾರೆ.
ಮಿತ್ರ ಹೆರಾಜೆ ಅವರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದರು. ವಿಚಾರಣೆ ಬಳಿಕ ಅವರನ್ನು ಕಳುಹಿಸಲಾಗಿದೆ. ಅವರ ವಿರುದ್ಧ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪಗರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಿತ್ರ ಹೆರಾಜೆ ಹೆಚ್ಚುವರಿ ಎಸ್ಪಿಯಾಗಿ ನಿವೃತ್ತಿ ಹೊಂದಿದ್ದರು. ಭಾನುವಾರ ರಾತ್ರಿ ಮದ್ಯ ಸೇವಿಸಿ ಕಾರು ಚಾಲನೆ ಮಾಡುತ್ತಿದ್ದರು ಎಂದು ಸ್ಥಳದಲ್ಲಿದ್ದ ಜನರು ಆರೋಪ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.