
ನಶೆಮುಕ್ತ ಮಂಗಳೂರು ಅಭಿಯಾನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾತನಾಡಿದರು
ಮಂಗಳೂರು: ‘ಈಚೆಗೆ ನಮ್ಮ ಕಚೇರಿಗೆ ತಮ್ಮ ನೋವು ಹೇಳಿಕೊಂಡು ಮಹಿಳೆಯೊಬ್ಬರು ಬಂದಿದ್ದರು. ‘ನನ್ನ ಮಗಳು ಚೆನ್ನಾಗಿ ಓದುತ್ತಿದ್ದಳು. ಯಾವುದೇ ಕೆಟ್ಟ ಅಭ್ಯಾಸವಿಲ್ಲ, ತರಗತಿಯಲ್ಲಿ ಮೊದಲಿಗಳಾಗಿದ್ದಳು. ಇತ್ತೀಚೆಗೆ ಅವಳಿಗೆ ಎಲ್ಲದಕ್ಕೂ ಕೋಪ. ಬಾಯ್ ಫ್ರೆಂಡ್ ಮಾಡಿಕೊಂಡಿದ್ದಾಳೆ, ಅವನ ಜೊತೆ ಹೋಗುತ್ತಿರುತಾಳೆ. ಒಮ್ಮೆ ಅವಳ ಬ್ಯಾಗ್ ಪರೀಕ್ಷಿಸಿದಾಗ ಸಣ್ಣ ಪ್ಯಾಕೆಟ್ ಸಿಕ್ಕಿತು’ ಎಂದು ಆ ಪ್ಯಾಕೆಟ್ ಹಿಡಿದುಕೊಂಡು ಅವರು ಬಂದಿದ್ದರು. ಆ ಯುವಕನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ...’
ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಇಂತಹ ಹಲವಾರು ಉದಾಹರಣೆಗಳೊಂದಿಗೆ ವಿದ್ಯಾರ್ಥಿಗಳು ಮಾದಕವಸ್ತು ಜಾಲಕ್ಕೆ ಸಿಲುಕಿಕೊಳ್ಳುತ್ತಿರುವ ಅಪಾಯವನ್ನು ವಿದ್ಯಾರ್ಥಿಗಳೆದುರು ತೆರೆದಿಟ್ಟರು.
ಮೇಕ್ ಎ ಚೇಂಜ್ ಫೌಂಡೇಷನ್ ಸಂಘಟನೆಯು ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ನಶೆಮುಕ್ತ ಮಂಗಳೂರು ಅಭಿಯಾನದದ ಭಾಗವಾಗಿ ಶನಿವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಈಚೆಗೆ ಜೈಲಿಗೆ ಭೇಟಿ ನೀಡಿದ್ದೆ. ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದ ನೈಜೀರಿಯಾ ವಿದ್ಯಾರ್ಥಿ ಜೊತೆ ಚೆನ್ನೈ ಐಐಟಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೂ ಇದ್ದ. ಏನೋ ಸಾಧನೆ ಮಾಡಬೇಕು ಎಂದು ಐಐಟಿ ಸೇರಿದ್ದೆ. ಪರಿಸ್ಥಿತಿ ಹೀಗಾಗಿದೆ ಎಂದು ಆ ವಿದ್ಯಾರ್ಥಿ ಹೇಳಿಕೊಂಡ. ಆತನಿಗೆ ಅಪರಾಧಮುಕ್ತನಾಗಿ ಜೈಲಿನಿಂದ ಹೊರಬಂದು ಉದ್ಯೋಗ ಮಾಡಬೇಕೆಂಬ ಆಸೆ ಇದೆ. ಆದರೆ, ಡ್ರಗ್ ಪೆಡ್ಲಿಂಗ್‌ನಲ್ಲಿ ಸಿಲುಕಿ ಪ್ರಕರಣ ದಾಖಲಾದರೆ, ಕನಿಷ್ಠ 10 ವರ್ಷ ಶಿಕ್ಷೆ ಅನುಭವಿಸಬೇಕು’ ಎಂದು ಅವರು ಮನಮುಟ್ಟುವಂತೆ ವಿವರಿಸಿದರು.
ಮಂಗಳೂರು ಜೈಲಿನಲ್ಲಿ ಇರುವ ಆರೋಪಿಗಳಲ್ಲಿ 120 ಜನರು ಡ್ರಗ್ ಪೆಡ್ಲಿಂಗ್ ಪ್ರಕರಣದಲ್ಲಿ ಸಿಲುಕಿ ಜೈಲು ಸೇರಿದವರು. ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ಸುಮಾರು 50 ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರು ಶೀಘ್ರವೇ ಜೈಲು ಸೇರಲಿದ್ದಾರೆ. ಜೈಲಿನಲ್ಲಿರುವ ಶೇ 80ರಷ್ಟು ಆರೋಪಿಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮಾದಕವಸ್ತು ಜಾಲದಲ್ಲಿ ಸಿಲುಕಿ ಅಪರಾಧ ಮಾಡಿದವರು. ಮಾದಕವಸ್ತು ಮನುಷ್ಯನ ಯೋಚನಾ ಶಕ್ತಿಯನ್ನು ಕೊಲ್ಲುತ್ತದೆ. ಅಂತಹ ಸಂದರ್ಭದಲ್ಲಿ ಅರಿವಿಲ್ಲದೆ ಅಪರಾಧ ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.
ಮಂಗಳೂರು ರಾಮಕೃಷ್ಣ ಮಠದ ಯುಗೇಶಾನಂದಜೀ, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ, ಎಸ್‌ಕೆಎಸ್‌ಎಸ್ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್.ಧರ್ಮ, ಡಿಸಿಪಿಗಳಾದ ರವಿಶಂಕರ್, ಮಿಥುನ್, ಮೇಕ್ ಎ ಚೇಂಜ್ ಫೌಂಡೇಷನ್ ಸ್ಥಾಪಕ ಸುಹೇಲ್ ಕಂದಕ್, ನಟ ರೂಪೇಶ್ ಶೆಟ್ಟಿ, ಪ್ರಮುಖರಾದ ಹಫೀಸ್ ಸೂಫಿಯಾನ, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಡಿಯೋನ್ ಮೊಂತೆರೊ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.