ಮಂಗಳೂರು: ನಗರದ ಪಡುಶೆಡ್ಡೆ ಗ್ರಾಮದ ಹಾಲಾಡಿ ಎಂಬಲ್ಲಿ ಮಾದಕ ವಸ್ತು ಮಾರಾಟಕ್ಕೆ ತಯಾರಿ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 5.759 ಕೆ.ಜಿ ಗಾಂಜಾ, ಕೃತ್ಯಕ್ಕೆ ಬಳಸಿದ್ದ 6 ಮೊಬೈಲ್ ಫೋನ್ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆದ ಗಾಂಜಾದ ಮೌಲ್ಯ ₹ 5.20 ಲಕ್ಷ ಎಂದು ಅಂದಾಜಿಸಲಾಗಿದೆ.
ನಗರದ ಬಿಕರ್ನಕಟ್ಟೆಯ ಅಡು ಮರೋಳಿಯ ತುಷಾರ್ ಅಲಿಯಾಸ್ ಸೋನು (21), ನಾಗುರಿಯ ಧನ್ವಿ ಶೆಟ್ಟಿ (20), ಜಲ್ಲಿಗುಡ್ಡೆಯ ಸಾಗರ್ ಕರ್ಕೇರ (19), ಶಕ್ತಿನಗರ ವಿಕಾಸ್ ಥಾಪ ಅಲಿಯಾಸ್ ಪುಚ್ಚಿ (23), ಅಳಕೆ, ಕಂಡೆಟ್ಟುವಿನ ವಿಘ್ನೇಶ್ ಕಾಮತ್ (24) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
'ಗಾಂಜಾ ತುಂಬಿದ ಚಿಕ್ಕ ಚಿಕ್ಕ ಪೊಟ್ಟಣ ತಯಾರಿಸಿ, ಪ್ರತಿ ಗಾಂಜಾ ಪೊಟ್ಟಣಕ್ಕೆ ₹ 1ಸಾವಿರದಂತೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ಸೆನ್ ಅಪರಾಧ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ. ಆರೋಪಿಗಳಿಗೆ ಎಲ್ಲಿಂದ ಗಾಂಜಾ ಪೂರೈಕೆಯಾಗುತ್ತಿದೆ ಎಂದು ಶೀಘ್ರದಲ್ಲಿ ಪತ್ತೆ ಹಚ್ಚಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
‘ಎರಡು ದಿನಗಳ ಹಿಂದೆ ಇಬ್ಬರು ಪೋಷಕರು ಬಂದು ತಮ್ಮ ಮಗ ಮಾದಕ ವ್ಯಸನಿಯಾಗಿರುವ ಕುರಿತು ಮಾಹಿತಿ ನೀಡಿದರು. ಏನಾಗಿದೆ ಎಂದು ತಿಳಿದುಕೊಳ್ಳಲು ಸೆನ್ ಅಪರಾಧ ಠಾಣೆಯ ಸಿಬ್ಬಂದಿಯ ತಂಡ ರಚಿಸಿದೆವು. ಆ ತಂಡದ ಪೊಲೀಸರು ಹಂತ ಹಂತವಾಗಿ ತನಿಖೆ ಮಾಡಿ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾದಕ ಪದಾರ್ಥ ಪೂರೈಸುತ್ತಿದ್ದ ಐವರ ತಂಡವನ್ನು ಪತ್ತೆಮಾಡಿದ್ದಾರೆ. ಒಬ್ಬ ವ್ಯಸನಿಯ ಪೋಷಕರು ನೀಡಿದ ಮಾಹಿತಿಯಿಂದ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿದೆ. ಸುಮಾರು 200 ಮಂದಿಗೆ ಮಾದಕ ಪದಾರ್ಥ ಪೂರೈಕೆ ಆಗದಂತೆ ತಡೆದಿದ್ದೇವೆ. ಅದೇ ರೀತಿ ಹತ್ತು ಮಾದಕ ವ್ಯಸನಿಗಳ ಪೋಷಕರು ಈ ರೀತಿ ಮಾಹಿತಿ ನೀಡಿದರೆ ಸುಮಾರು 2 ಸಾವಿರ ಮಂದಿಗೆ ಮಾದಕ ಪದಾರ್ಥ ಪೂರೈಕೆ ಆಗುವುದನ್ನು ತಡೆಯಬಹುದು. ನೂರು ವ್ಯಸನಿಗಳ ಬಗ್ಗೆ ಮಂದಿ ಸರಿಯಾಗಿ ಮಾಹಿತಿ ನೀಡಿದರೆ ನಗರದಲ್ಲಿ ಎಲ್ಲೂ ಮಾದಕ ಪದಾರ್ಥ ತಲುಪದಂತೆ ಮಾಡಬಹುದು’ ಎಂದು ಅವರು ತಿಳಿಸಿದರು.
‘ಯಾವುದೇ ಮಾದಕ ವ್ಯಸನಿಯನ್ನು ನಾವು ಸಂತ್ರಸ್ತ ಎಂದೇ ಪರಿಗಣಿಸುತ್ತೇವೆ. ಅವರಿಗೆ ಮಾದಕ ಪದಾರ್ಥ ಪೂರೈಸುವವರ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸುತ್ತೇವೆ. ಮಾದಕ ವ್ಯಸನ ತಡೆಗಟ್ಟಲು ಸಾರ್ವಜನಿಕರು ದಯವಿಟ್ಟು ಪೊಲೀಸರ ಜೊತೆ ಸಹಕರಿಸಬೇಕು’ ಎಂದು ಅವರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.