ADVERTISEMENT

ಪೊಲೀಸ್‌ ಇಲಾಖೆಯಲ್ಲಿ ಹಲವು ಬದಲಾವಣೆ: ಡಿಜಿಪಿ ಪ್ರವೀಣ್ ಸೂದ್‌

ವಿಡಿಯೊ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 2:38 IST
Last Updated 9 ಸೆಪ್ಟೆಂಬರ್ 2020, 2:38 IST
ಡಿಜಿಪಿ ಪ್ರವೀಣ್ ಸೂದ್‌
ಡಿಜಿಪಿ ಪ್ರವೀಣ್ ಸೂದ್‌   

ಮಂಗಳೂರು: ’ಕೋವಿಡ್‌ನಿಂದಾಗಿ ಪೊಲೀಸ್ ಇಲಾಖೆಯಲ್ಲೂ ಹಲವು ಬದಲಾವಣೆಗಳಾಗಿದ್ದು, ಈ ಮೊದಲು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿತ್ತು. ಸದ್ಯ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲು ಆರಂಭಿಸಿದ್ದೇವೆ’ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ತಿಳಿಸಿದರು.

ಮಂಗಳೂರು ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಂಗಳವಾರ ಸಂಜೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ವಿಡಿಯೊ ಕಾನ್ಫರೆನ್ಸ್ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಆರು ತಿಂಗಳಲ್ಲಿ 20ಕ್ಕೂ ಹೆಚ್ಚು ಬಾರಿ ಪೊಲೀಸ್ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಲಾಗಿದೆ. ಮುಂದಿನ ದಿನಗಳಲ್ಲೂ ಪ್ರಕರಣದ ಸಾಕ್ಷಗಳು ಕೂಡ ವಿಡಿಯೊ ಕಾನ್ಫರೆನ್ಸ್ ಮೂಲಕವೇ ದಾಖಲಾಗುವ ಸಾಧ್ಯತೆ ಇದೆ ಎಂದರು.

‘ಕೋವಿಡ್ ಸೋಂಕೂ ಇದೆ. ಪೊಲೀಸ್ ಕೆಲಸವೂ ನಡೆಯುತ್ತಿದೆ. ಪೊಲೀಸರು ಸಂಪೂರ್ಣ ಅಲರ್ಟ್ ಆಗಿದ್ದಾರೆ. ಪೊಲೀಸ್ ಕಾನ್‌ಸ್ಟೆಬಲ್‌ನಿಂದ ಹಿರಿಯ ಅಧಿಕಾರಿಗಳು ಆರು ತಿಂಗಳು ಅವಿರತವಾಗಿ ಕರ್ತವ್ಯದಲ್ಲಿ ತೊಡಗಿದ್ದಾರೆ. ಪೊಲೀಸರು ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿದೆ’ ಎಂದು ಹೇಳಿದರು.

ADVERTISEMENT

ಬೆಂಗಳೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿರುವವರು ಗಣ್ಯರು ಎಂಬುದು ಮಾಧ್ಯಮಗಳ ಕಲ್ಪನೆ. ಅಪರಾಧ ಕೃತ್ಯದಲ್ಲಿ ಭಾಗಿ ಆಗುವವರೆಲ್ಲರೂ ತಪ್ಪಿತಸ್ಥರೇ. ಕಾನೂನಿಗೆ ಎಲ್ಲರೂ ಸಮಾನರು ಎಂದು ಪ್ರವೀಣ್ ಸೂದ್ ಹೇಳಿದರು.

ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದವರನ್ನು ಬಂಧಿಸುವ ಪ್ರಕ್ರಿಯೆ ರಾಜ್ಯದಾದ್ಯಂತ ಮುಂದುವರಿದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗಾಂಜಾ ಕೆ.ಜಿ.ಗಟ್ಟಲೇ ಬಂದರೆ, ಸಿಂಥೆಟಿಕ್ ಮಾದಕ ದ್ರವ್ಯವು ಗ್ರಾಂನಲ್ಲಿ ಬರುತ್ತದೆ. ಸಿಂಥೆಟಿಕ್ ಮಾದಕ ದಾಳಿ ಕಷ್ಟಕರ. ಎನ್‌ಡಿಪಿಎಸ್ ಕಠಿಣ ಕಾಯ್ದೆಯಾಗಿದ್ದು, ದಾಳಿ ನಡೆಸುವುದು, ತನಿಖೆ, ವಿಚಾರಣೆ ಕುರಿತು ಪೊಲೀಸರಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.