ADVERTISEMENT

ನಕಲಿ ಕೋವಿಗೆ ಭಾರಿ ಬೇಡಿಕೆ

ಮಂಗಗಳ ಕಾಟಕ್ಕೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 10:39 IST
Last Updated 30 ಅಕ್ಟೋಬರ್ 2020, 10:39 IST
ಮಂಗಗಳನ್ನು ಓಡಿಸಲು ತಯಾರಿಸಿರುವ ನಕಲಿ ಕೋವಿಯನ್ನು ನಾರಾಯಣ ಪೂಜಾರಿ ತೋರಿಸಿದರು
ಮಂಗಗಳನ್ನು ಓಡಿಸಲು ತಯಾರಿಸಿರುವ ನಕಲಿ ಕೋವಿಯನ್ನು ನಾರಾಯಣ ಪೂಜಾರಿ ತೋರಿಸಿದರು   

ಬೆಳ್ತಂಗಡಿ: ತಾಲ್ಲೂಕಿನ ಸುಲ್ಕೇರಿಯ ನಾರಾಯಣ ಪೂಜಾರಿ ಅವರು ಮಂಗಗಳು ಕೃಷಿಭೂಮಿಯ ಮೇಲೆ ದಾಳಿ ಮಾಡದಂತೆ ತಡೆಯಲು ನಕಲಿ ಕೋವಿಯೊಂದನ್ನು ತಯಾರಿಸಿ ಕೃಷಿಕರ ಮನಗೆದ್ದಿದ್ದಾರೆ. ಕೇವಲ ₹ 800ಕ್ಕೆ ಸಿಗುವ ಈ ಕೋವಿಗೆ ಈಗ ಭಾರಿ ಬೇಡಿಕೆ ಕಂಡಿದೆ.

ತಾಲ್ಲೂಕು ಮಾತ್ರವಲ್ಲದೆ ಶೃಂಗೇರಿ, ಉಡುಪಿ, ಸುಳ್ಯ, ಪುತ್ತೂರು, ಸುಬ್ರಹ್ಮಣ್ಯ, ಬೆಳ್ಳಾರೆಯ ಭಾಗದಿಂದಲೂ ಬೇಡಿಕೆ ಬರುತ್ತಿದೆ. ಲಾಕ್‍ಡೌನ್ ಪೂರ್ವ ಸುಮಾರು 300 ಕೋವಿಗಳನ್ನು ಮಾರಾಟ ಮಾಡಿರುವ ಇವರು, ಬಳಿಕ ಕಳೆದ ಒಂದು ತಿಂಗಳಲ್ಲಿ ನೂರಕ್ಕೂ ಹೆಚ್ಚು ಕೋವಿಗಳನ್ನು ಕೃಷಿಕ ಗ್ರಾಹಕರಿಗೆ ನೀಡಿದ್ದಾರೆ.

ತಾಲ್ಲೂಕಿನ ಅಳದಂಗಡಿಯಿಂದ ಸುಮಾರು 4 ಕಿ.ಮೀ ಅಂತರದಲ್ಲಿರುವ ಸುಲ್ಕೇರಿಯಲ್ಲಿ ರಾಜ್ಯ ಹೆದ್ದಾರಿ ಸನಿಹ ‘ಸುವರ್ಣ ಎಂಜಿನಿಯರಿಂಗ್ ವರ್ಕ್ಸ್‌’ ಉದ್ಯಮವನ್ನು ನಡೆಸುತ್ತಿರುವ ಇವರು ಮಂಗಗಳನ್ನು ಓಡಿಸುವ ಅನೇಕ ಕೋವಿಗಳು ವಿಫಲವಾದದ್ದನ್ನು ನೋಡಿ, ತಾವೇ ಹೊಸ ಮಾದರಿಯ ಕೋವಿ ಸಿದ್ಧಪಡಿಸಿದ್ದಾರೆ.

ADVERTISEMENT

ಗುರು ರಮೇಶ್‍ರ ಮಾರ್ಗದರ್ಶನದಲ್ಲಿ ದಪ್ಪದ ಎರಡೂವರೆ ಅಡಿಯ ಕಬ್ಬಿಣದ ಕೊಳವೆ(ನಳಿಗೆ)ಗೆ ಒಂದು ತುದಿಯಲ್ಲಿ ಥ್ರೆಡ್‌ ಮಾಡಿ, ಅದನ್ನು ಎಂಎಸ್ ಕಪ್ಲಿಂಗ್‍ಗೆ ಜೋಡಿಸಿದ್ದಾರೆ. ಜೋಡಿಸುವ ಮೊದಲು ದೀಪಾವಳಿಯ ಆಟಂಬಾಂಬ್‍ ಅನ್ನು ಅದರೊಳಗೆ ಇಡಲಾಗುತ್ತದೆ. ಅದರ ಬತ್ತಿ ಹೊರಗೆ ಬರಲು ಕಪ್ಲಿಂಗ್‍ನಲ್ಲಿ ಬತ್ತಿಯಷ್ಟೇ ಸಪೂರವಾದ ತೂತನ್ನು ಮಾಡಲಾಗಿರುತ್ತದೆ. ಬಳಿಕ ಇನ್ನೊಂದು ತುದಿಯಲ್ಲಿ ಒಂದು ಮುಷ್ಟಿಯಷ್ಟು ದೊಡ್ಡಕಡ್ಲೆ ಗಾತ್ರದ ಕಲ್ಲುಗಳನ್ನು ಹಾಕಬೇಕಾಗುತ್ತದೆ. ಬತ್ತಿಗೆ ಬೆಂಕಿಕೊಟ್ಟು ಕ್ಷಣದಲ್ಲೇ ಮಂಗಗಳ ಹಿಂಡಿನ ಕಡೆಗೆ ಕೋವಿಯನ್ನು ಹಿಡಿಯಬೇಕು. ಬಾಂಬ್‍ನ ಆರ್ಭಟಕ್ಕೆ ಕಲ್ಲುಗಳೆಲ್ಲ ಸುಮಾರು 100ರಿಂದ 150 ಅಡಿ ಎತ್ತರದ ತನಕ ಸಿಡಿಯುತ್ತವೆ ಎಂಬುದು ಅವರು ನೀಡುವ ವಿವರಣೆ.

ನಳಿಗೆಯ ಒಂದು ತುದಿಗೆ ಜಿಐಪೈಪ್‍ನ್ನು ಜೋಡಿಸಿ ಅದಕ್ಕೆ ಟ್ರಿಗರ್ ಇಟ್ಟಿದ್ದಾರೆ. ಇದರ ಉಪಯೋಗ ಇಲ್ಲದಿದ್ದರೂ ಕೋವಿಯಂತೆ ಕಾಣಲು ಮಾತ್ರ ರಚಿಸಲಾಗಿದೆ. ನಕಲಿ ಕೋವಿ ಒಟ್ಟು ಮೂರುವರೆ ಅಡಿ ಉದ್ದ ಇದ್ದು ಸುಮಾರು ಒಂದೂವರೆ ಕೆ.ಜಿ.ಯಷ್ಟು ಭಾರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.