ADVERTISEMENT

ಸುರತ್ಕಲ್-ಕಾನ-ಎಂಆರ್‌ಪಿಎಲ್‌ ರಸ್ತೆ ದುರಸ್ತಿಗೆ ಡಿವೈಎಫ್‌ಐ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 4:26 IST
Last Updated 19 ಜುಲೈ 2022, 4:26 IST
ಸುರತ್ಕಲ್– ಕಾನ– ಎಂಆರ್‌ಪಿಎಲ್‌ ರಸ್ತೆಯ ದುಃಸ್ಥಿತಿ
ಸುರತ್ಕಲ್– ಕಾನ– ಎಂಆರ್‌ಪಿಎಲ್‌ ರಸ್ತೆಯ ದುಃಸ್ಥಿತಿ   

ಮಂಗಳೂರು: ಸುರತ್ಕಲ್- ಕಾನ ಎಂಆರ್‌ಪಿಎಲ್‌ವರೆಗಿನ 4.5 ಕಿ.ಮೀ ಉದ್ದದ ಮುಖ್ಯ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೆ ಒಳಗಾಗುವ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ. ಕಾರು ಮತ್ತಿತರ ಲಘು ವಾಹನಗಳು ಹಾನಿಗೊಳಗಾಗುತ್ತಿವೆ. ಕೆಸರು ದೂಳಿನಿಂದಾಗಿ ಪಾದಚಾರಿಗಳು ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂದು ಡಿವೈಎಫ್‌ಐ ದೂರಿದೆ.

‘ಎಂಆರ್‌ಪಿಎಲ್‌, ಬಿಎಎಸ್‌ಎಫ್‌, ಎಚ್‌ಪಿಸಿಎಲ್‌ನಂತಹ ದೊಡ್ಡ ಕೈಗಾರಿಗಳಿಗೆ ಹಾಗೂ ಎಸ್‌ಇಜೆಡ್‌ ಪ್ರದೇಶಕ್ಕೆ ಸಂಚರಿಸುವ ಭಾರಿ ವಾಹನಗಳು ಈ ರಸ್ತೆಯನ್ನು ಬೇಕಾಬಿಟ್ಟಿ ಬಳಸುತ್ತಿರುವುದೇ ಈ ರಸ್ತೆ ಹದಗೆಡಲು ಕಾರಣ. 2016ರಲ್ಲಿ ಡಿವೈಎಫ್‌ಐ ನೇತೃತ್ವದ ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಾರ್ವಜನಿಕರು ಹೋರಾಟ ಮಾಡಿದ ಪ್ರತಿಫಲವಾಗಿ ‌ಸುರತ್ಕಲ್‌ನಿಂದ ಎಂಆರ್‌ಪಿಎಲ್‌ವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ₹ 60 ಕೋಟಿ ಬಿಡುಗಡೆ ಮಾಡಿತ್ತು. ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿತ್ತು. ಆದರೆ, ರಾಜಕೀಯ ಕಾರಣಕ್ಕಾಗಿ ಟೆಂಡರ್ ರದ್ದುಗೊಳಿಸಲಾಯಿತು. ಮಹಾ ನಗರಪಾಲಿಕೆ ಇದುವರೆಗೂ ಈ ರಸ್ತೆಯ ಅಭಿವೃದ್ಧಿ ಮಾಡಿಲ್ಲ. ಕೇವಲ ತೇಪೆ ಕೆಲಸಕ್ಕೆ ಕೋಟ್ಯಂತರ ರೂಪಾಯಿ ವ್ಯರ್ಥ ಮಾಡಿದೆ’ ಎಂದು ಡಿವೈಎಫ್‌ಐ ಆರೋಪಿಸಿದೆ.

ಸುರತ್ಕಲ್ ಕಾನ-ಬಾಳ-ಎಂಆರ್‌ಪಿಎಲ್‌ ರಸ್ತೆಯನ್ನು ಅಭಿವೃದ್ಧಿಪಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಹಾ ನಗರ ಪಾಲಿಕೆಯ ಸುರತ್ಕಲ್ ವಲಯ ಆಯುಕ್ತರಿಗೆ ಡಿವೈಎಫ್‌ಐ ನಿಯೋಗವು ಸೋಮವಾರ ಮನವಿ ಸಲ್ಲಿಸಿತು.

ADVERTISEMENT

ಈ ರಸ್ತೆಯನ್ನು ತಕ್ಷಣ ದುರಸ್ತಿಪಡಿಸದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಡಿವೈಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ ಇಮ್ತಿಯಾಜ್‌ ಹೇಳಿದರು. ನಿಯೋಗದಲ್ಲಿ ಡಿವೈಎಫ್‌ಐ ನಗರ ಘಟಕದ ಉಪಾಧ್ಯಕ್ಷ ಶ್ರೀನಾಥ್ ಕುಲಾಲ್, ಸುರತ್ಕಲ್ ಘಟಕ ಅಧ್ಯಕ್ಷ ಬಿ.ಕೆ ಮಕ್ಸೂದ್, ಪ್ರಮುಖರಾದ ಸಲೀಂ ಶಾಡೋ ಕಾಟಿಪಳ್ಳ, ಸೈಫರ್ ಆಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.