ADVERTISEMENT

ಲಾಲ್‌ಬಾಗ್‌: ಇ–ಸಿಗರೇಟ್‌ ವಶ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 5:27 IST
Last Updated 30 ಮಾರ್ಚ್ 2023, 5:27 IST

ಮಂಗಳೂರು: ನಿಷೇಧಿತ ಇ–ಸಿಗರೇಟ್‌ ಮಾರಾಟ ಮಾಡುತ್ತಿದ್ದ ಮಳಿಗೆಗೆ ದಾಳಿ ನಡೆಸಿದ ಬರ್ಕೆ ಠಾಣೆಯ ಪೊಲೀಸರು ಇ–ಸಿಗರೇಟ್‌ಗಳನ್ನು ಹಾಗೂ ಶಾಸನಬದ್ಧ ಎಚ್ಚರಿಕೆಯ ಸಂದೇಶ ಮುದ್ರಿಸದೇ ಇರುವ ಸಿಗರೇಟ್‌ ಪೊಟ್ಟಣಗಳನ್ನು ಬುಧವಾರ ವಶಕ್ಕೆ ಪಡೆದಿದ್ದಾರೆ.

‘ಲಾಲ್‌ಬಾಗ್‌ನ ಸಾಯಿಬಿನ್‌ ವಾಣಿಜ್ಯ ಸಂಕೀರ್ಣದ ನೆಲ ಅಂತಸ್ತಿನ ಯೂನಿಕ್ ವರ್ಲ್ಡ್ ಮೊಬೈಲ್ ಮತ್ತು ಹುಕ್ಕಾ ಶಾಪ್‌ನನಲ್ಲಿ ಕೇಂದ್ರ ಸರ್ಕಾರದಿಂದ ನಿಷೇಧಿತವಾಗಿರುವ ಇ-ಸಿಗರೇಟ್‌ಗಳನ್ನು ಹಾಗೂ ಪೊಟ್ಟಣದಲ್ಲಿ ಶೇ 85ರಷ್ಟು ಭಾಗದಲ್ಲಿ ಸಿಗರೇಟು ಸೇವನೆಯ ಅಪಾಯದ ಕುರಿತ ಶಾಸನಬದ್ಧ ಎಚ್ಚರಿಕೆಯ ಸಂದೇಶ ಮುದ್ರಿಸದೇ ಇರುವ ಸಿಗರೇಟುಗಳನ್ನು ಮಾರಾಟಕ್ಕೆ ಇರಿಸಲಾಗಿತ್ತು. ಈ ಮಳಿಗೆಯಿಂದ ಎಂಟು ಇ–ಸಿಗರೇಟ್‌ಗಳನ್ನು ಹಾಗೂ ದೇಸಿ ಮತ್ತು ವಿದೇಶಿ ಕಂಪನಿಗಳ 99 ಸಿಗರೇಟ್‌ ಪೊಟ್ಟಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಳಿಗೆಯ ಹಸನ್‌ ಶರೀಫ್‌ ಹಾಗೂ ಇರ್ಷಾದ್‌ ವಿರುದ್ಧ ಕ್ರಮಕೈಗೊಳ್ಳಲಾಗಿದೆ ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಅದೇ ಕಟ್ಟಡದ ‘ಆಮಂತ್ರಣ’ ಮಳಿಗೆಯಲ್ಲಿ 13 ಕಂಪನಿಗಳ ಇ–ಸಿಗರೇಟ್‌ಗಳನ್ನು ಹಾಗೂ ಶಾಸನಬದ್ಧ ಎಚ್ಚರಿಕೆ ಸಂದೇಶ ಮುದ್ರಿಸದ ಪೊಟ್ಟಣದಲ್ಲಿದ್ದ 27 ಕಂಪನಿಗಳ ಸಿಗರೇಟುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಮಳಿಗೆಯ ಸಂತೋಷ ಹಾಗೂ ಶಿವು ಅಲಿಯಾಸ್‌ ಶಿವಾನಂದ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ‘ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ₹ 74,178 ಎಂದು ಪೊಲೀಸರು ಅಂದಾಜು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.