ADVERTISEMENT

ಇ–ತ್ಯಾಜ್ಯ ಅಪಾಯ: ತ್ಯಾಜ್ಯ ಘಟಕಕ್ಕೆ ಸೇರುತ್ತಿರುವ ನಿರುಪಯುಕ್ತ ಗ್ಯಾಜೆಟ್‌ಗಳು

ಪಾಲಿಕೆ ಬಳಿ ಇಲ್ಲ ಅಂದಾಜು ಲೆಕ್ಕಚಾರ | ಗುಜರಿ ಅಂಗಡಿ, ತ್ಯಾಜ್ಯ ಘಟಕಕ್ಕೆ ಸೇರುತ್ತಿರುವ ನಿರುಪಯುಕ್ತ ಗ್ಯಾಜೆಟ್‌ಗಳು

ಸಂಧ್ಯಾ ಹೆಗಡೆ
Published 3 ಮಾರ್ಚ್ 2025, 7:18 IST
Last Updated 3 ಮಾರ್ಚ್ 2025, 7:18 IST
ಲಾಲ್‌ಬಾಗ್‌ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿರುವ ಇ– ತ್ಯಾಜ್ಯ ಬಿನ್‌ಗಳು
ಲಾಲ್‌ಬಾಗ್‌ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿರುವ ಇ– ತ್ಯಾಜ್ಯ ಬಿನ್‌ಗಳು   

ಮಂಗಳೂರು: ತಂತ್ರಜ್ಞಾನದ ಓಟ ವೇಗ ಪಡೆದಂತೆ, ಅದರಿಂದ ಸೃಷ್ಟಿಯಾಗುವ ಸಮಸ್ಯೆಗಳೂ ಹೆಚ್ಚುತ್ತಿವೆ. ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಕೆಲಸವನ್ನು ಸುಲಭಗೊಳಿಸಿವೆ. ಆದರೆ, ಇವುಗಳ ಅತಿಯಾದ ಬಳಕೆಯಿಂದ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣ ಅರಿವಿಲ್ಲದಂತೆ ಭೂಮಿಯ ಒಡಲನ್ನು ಮಲಿನಗೊಳಿಸುತ್ತಿದೆ.

ಪ್ರತಿನಿತ್ಯ ಉತ್ಪತ್ತಿಯಾಗುವ ಹಸಿ ಕಸ, ಒಣ ಕಸದ ಜೊತೆಗೆ ನಿರುಪಯುಕ್ತ ಎಲೆಕ್ಟ್ರಾನಿಕ್ ತ್ಯಾಜ್ಯಗಳು (ಇ–ತ್ಯಾಜ್ಯ) ನಗರಾಡಳಿತ ಸಂಸ್ಥೆಗಳಿಗೆ ದೊಡ್ಡ ತಲೆನೋವಾಗಿವೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಉತ್ಪತ್ತಿಯಾಗುವ ಇ–ತ್ಯಾಜ್ಯದ ಸರಾಸರಿ ಅಂದಾಜು ಕೂಡ ಮಹಾನಗರ ಪಾಲಿಕೆಯ ಬಳಿ ಇಲ್ಲ.

ಪಾಲಿಕೆಯ ಕೇಂದ್ರ ಕಚೇರಿ, ಮಲ್ಲಿಕಟ್ಟೆ ಮತ್ತು ಸುರತ್ಕಲ್ ವಲಯ ಕಚೇರಿಗಳಲ್ಲಿ ಇ–ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ಬಿನ್‌ಗಳನ್ನು ಇಡಲಾಗಿದೆ. ಆರಂಭಿಕ ಹಂತದಲ್ಲಿ ಇದರ ಬಗ್ಗೆ ಜಾಗೃತಿ ನಡೆದಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಇವುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿಲ್ಲ. ಹೀಗಾಗಿ, ಇಲ್ಲಿ ಇ–ತ್ಯಾಜ್ಯಗಳನ್ನು ತಂದು ಹಾಕುವವರ ಪ್ರಮಾಣವೂ ಕಡಿಮೆಯಾಗಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರೊಬ್ಬರು.

ADVERTISEMENT

ಜನರಲ್ಲಿ ಅರಿವು ಇಲ್ಲದ ಪರಿಣಾಮ ಪಾಲಿಕೆಯಿಂದ ಸಂಗ್ರಹಿಸುವ ಒಣಕಸದ ಜೊತೆಗೆ ಇ–ತ್ಯಾಜ್ಯಗಳು ಸೇರಿ ಹೋಗುತ್ತಿವೆ. ಇದರ ಸುರಕ್ಷಿತ ವಿಲೇವಾರಿ ಆಗದಿದ್ದರೆ, ಎಲೆಕ್ಟ್ರಾನಿಕ್ ಉಪಕರಣಗಳಲ್ಲಿರುವ ಅನೇಕ ವಿಷಕಾರಿ ವಸ್ತುಗಳು ಭೂಮಿಯೊಳಗೆ ಸೇರಿ, ಮಣ್ಣು, ನೀರನ್ನು ಕಲುಷಿತಗೊಳಿಸುತ್ತವೆ ಎನ್ನುತ್ತಾರೆ ಪರಿಸರ ಕಾರ್ಯಕರ್ತ ಬೆನಡಿಕ್ಟ್ ಫರ್ನಾಂಡಿಸ್.

ಮಹಾನಗರ ಪಾಲಿಕೆಯ ಮೂರು ಕಚೇರಿಗಳಲ್ಲಿ ನಾಲ್ಕು ಮಾದರಿಯ ಇ– ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ಬಿನ್ ಇಡಲಾಗಿದೆ. ಬೈಕಂಪಾಡಿಯಲ್ಲಿ ಘಟಕ ಹೊಂದಿರುವ ಮೂಗಾಂಬಿಗೈ ಮಟೀರಿಯಲ್ಸ್ ರಿಸೈಕಲಿಂಗ್ ಪ್ರೈವೇಟ್ ಲಿಮಿಟೆಡ್, ಪಾಲಿಕೆಯಲ್ಲಿ ಸಂಗ್ರಹವಾಗುವ ಇ– ತ್ಯಾಜ್ಯಗಳನ್ನು ಕೊಂಡೊಯ್ಯುತ್ತದೆ. ಒಣಕಸದೊಂದಿಗೆ ಇ–ತ್ಯಾಜ್ಯಗಳು ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೇರಿದರೆ ಅನಾಹುತ ಸಂಭವಿಸುವ ಅಪಾಯ ಇರುತ್ತದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಬರುವ ದಿನಗಳಲ್ಲಿ ಪಾಲಿಕೆಯ ಐದು ಇಂದಿರಾ ಕ್ಯಾಂಟೀನ್, ಪುರಭವನ, ಅಂಬೇಡ್ಕರ್ ಭವನದಲ್ಲಿ ಇ–ತ್ಯಾಜ್ಯ ಸಂಗ್ರಹ ಡಬ್ಬಗಳನ್ನು ಇಡುವ ಯೋಚನೆ ಇದೆ ಎಂದು ಪಾಲಿಕೆಯ ಪರಿಸರ ಎಂಜಿನಿಯರ್ ದಯಾನಂದ ತಿಳಿಸಿದರು.

ಬ್ಯಾಂಕ್, ಕಾರ್ಪೊರೇಟ್ ಸಂಸ್ಥೆಗಳು, ಆಸ್ಪತ್ರೆಗಳು, ಕೆಲವು ಕಾಲೇಜುಗಳು ಇ–ತ್ಯಾಜ್ಯ ಸಂಗ್ರಹಿಸಿ ವೈಜ್ಞಾನಿಕ ವಿಲೇವಾರಿ ಘಟಕಕ್ಕೆ ನೀಡುತ್ತವೆ. ಸುರಕ್ಷತೆಯ ದೃಷ್ಟಿಯಿಂದ ಬೆರಳೆಣಿಕೆಯ ಮಂದಿ ಹಾಳಾದ ಗ್ಯಾಜೆಟ್‌ಗಳನ್ನು ವೈಜ್ಞಾನಿಕ ವಿಲೇವಾರಿ ಘಟಕಕ್ಕೆ ನೀಡುತ್ತಾರೆ. ವೈಜ್ಞಾನಿಕ ವಿಲೇವಾರಿ ಘಟಕಕ್ಕೆ ನಿರ್ದಿಷ್ಟ ನಿಯಮಗಳು ಇದ್ದು, ಅದನ್ನು ಪಾಲಿಸಲಾಗುತ್ತದೆ. ಘಟಕಕ್ಕೆ ಬರುವ ಎಲೆಕ್ಟ್ರಾನಿಕ್‌ ವಸ್ತುಗಳಲ್ಲಿ ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್ ಸೆಟ್‌ಗಳು, ವಾಷಿಂಗ್ ಮಷಿನ್, ಟಿ.ವಿ, ಬೇಸಿಗೆಯಲ್ಲಿ ಹಾಳಾದ ಎಸಿಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತವೆ ಎನ್ನುತ್ತಾರೆ ಘಟಕದ ಸಿಬ್ಬಂದಿ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಇ–ತ್ಯಾಜ್ಯ (ನಿರ್ವಹಣೆ) ನಿಯಮಗಳಿಗೆ 2024ರಲ್ಲಿ ತಿದ್ದುಪಡಿ ತಂದಿದ್ದು, ಇನ್ನಷ್ಟು ಬಿಗಿಗೊಳಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ಸ್ ವಸ್ತುಗಳು ಇರುವ ಪ್ರತಿ ಮಳಿಗೆಯೂ ನೋಂದಣಿ ಮಾಡಿಕೊಳ್ಳಬೇಕು, ನಗರ ಸ್ಥಳೀಯ ಸಂಸ್ಥೆಗಳು ಪ್ರತಿ ಎರಡು ಕಿ.ಮೀ.ಗೆ ಒಂದರಂತೆ ಇ– ತ್ಯಾಜ್ಯ ಸಂಗ್ರಹ ಸ್ಥಳ ಗುರುತಿಸಬೇಕು ಎಂದು ನಿಯಮ ಹೇಳುತ್ತದೆ. ಅನೇಕ ಬಾರಿ ಎಚ್ಚರಿಕೆ ನೀಡಿದರೂ, ಯಾವ ನಗರ ಸ್ಥಳೀಯ ಸಂಸ್ಥೆಯೂ ತನ್ನ ವ್ಯಾಪ್ತಿಯಲ್ಲಿ ಉತ್ಪತ್ತಿ ಆಗಬಹುದಾದ ಇ–ತ್ಯಾಜ್ಯಗಳ ಅಂದಾಜು ಪಟ್ಟಿಯನ್ನು ಸಹ ತಯಾರಿಸಿ, ವರದಿ ಸಲ್ಲಿಸಿಲ್ಲ. ಈ ಸಂಬಂಧ ನೋಟಿಸ್ ಅನ್ನೂ ನೀಡಲಾಗಿದೆ ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯೊಬ್ಬರು.

ಸ್ವಚ್ಛತಾ ಅಭಿಯಾನದ ವೇಳೆ ಬಳಸಿ ಬಿಸಾಡಿದ ಚಿಕ್ಕ ಎಲೆಕ್ಟ್ರಾನಿಕ್ ವಸ್ತುಗಳು ಸಿಗುತ್ತವೆ. ಇ-ತ್ಯಾಜ್ಯ ಮತ್ತು ಲೋಹಗಳು ಹೆಚ್ಚಿನ ಪ್ರಮಾಣದಲ್ಲಿ ಭೂಮಿಗೆ ಸೇರಿದರೆ ಅಂತರ್ಜಲದಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗುವ ಅಪಾಯ ಇರುತ್ತದೆ. ಬಹಳಷ್ಟು ವಸ್ತುಗಳು ಗುಜರಿ ಅಂಗಡಿ ಸೇರುತ್ತವೆ. ಅವರು ತಮಗೆ ಬೇಕಾದ ವಸ್ತು ಉಳಿಸಿಕೊಂಡು ಉಳಿದವನ್ನು ಎಸೆಯುತ್ತಾರೆ. ಮೊಬೈಲ್ ಫೋನ್ ಬ್ಯಾಟರಿಗಳನ್ನು ಬೇಕಾಬಿಟ್ಟಿ ಎಸೆದರೆ, ಅದು ಉಷ್ಣಗೊಂಡು ಸಿಡಿದು, ಬೆಂಕಿ ಬೀಳುವ ಅಪಾಯ ಇರುತ್ತದೆ. ವನ ಚಾರಿಟಬಲ್ ಟ್ರಸ್ಟ್ ಇ–ತ್ಯಾಜ್ಯ ಸಂಗ್ರಹ ಅಭಿಯಾನ ನಡೆಸಲು ಯೋಚಿಸಿದೆ ಎನ್ನುತ್ತಾರೆ ಪರಿಸರ ಕಾರ್ಯಕರ್ತ ಜೀತ್ ಮಿಲನ್ ರೋಚ್.

ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಇ–ತ್ಯಾಜ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇವುಗಳ ಸೂಕ್ತ ವಿಲೇವಾರಿಗೆ ಸೂಚಿಸಲಾಗಿದೆ.
ಲಕ್ಷ್ಮಿಕಾಂತ, ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ

‘ವೈಜ್ಞಾನಿಕ ವಿಲೇವಾರಿ ಅಗತ್ಯ’

ಇ–ತ್ಯಾಜ್ಯ ಮರುಬಳಕೆ ಸಂಬಂಧ ಸುರತ್ಕಲ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕದಲ್ಲಿ (ಎನ್‌ಐಟಿಕೆ) ಪ್ರಯೋಗ ನಡೆಸಲಾಗುತ್ತಿದೆ. ಎಲ್ಲ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಲೋಹ ಇರುತ್ತದೆ. ಮೊಬೈಲ್ ಫೋನ್‌ನಲ್ಲಿರುವ ಪ್ರಿಂಟೆಡ್ ಸರ್ಕೀಟ್ ಬೋರ್ಡ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲೋಹ ಇರುತ್ತದೆ. ರಾಸಾಯನಿಕ ಮತ್ತು ಜೈವಿಕ ಮಾದರಿಯಲ್ಲಿ ಇದನ್ನು ತೆಗೆಯಬಹುದು. ಎನ್‌ಐಟಿಕೆಯಲ್ಲಿ ಜೈವಿಕ ಮಾದರಿಯಲ್ಲಿ ಇದನ್ನು ತೆಗೆದು ಮರು ಬಳಕೆಗೆ ಸಿದ್ಧಪಡಿಸಲಾಗುತ್ತದೆ. ತಂತ್ರಜ್ಞಾನ ಮುಂದುವರಿದಂತೆ ಇ–ತ್ಯಾಜ್ಯಗಳ ಉತ್ಪತ್ತಿ ಹೆಚ್ಚುವುದು ಸಹಜ. ಅದನ್ನು ನಿಯಂತ್ರಿಸಿದರೆ ತಂತ್ರಜ್ಞಾನದ ಬೆಳವಣಿಗೆಗೆ ತಡೆಯೊಡ್ಡಿದಂತೆ ಆಗುತ್ತದೆ. ಹೀಗಾಗಿ ಮರು ಬಳಕೆ ವೈಜ್ಞಾನಿಕ ವಿಲೇವಾರಿ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎನ್ನುತ್ತಾರೆ ಎನ್ಐಟಿಕೆ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ವಿದ್ಯಾ ಶೆಟ್ಟಿ.

‘16 ಟನ್ ಇ–ತ್ಯಾಜ್ಯ ಸಂಗ್ರಹ’

ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಎರಡು ವರ್ಷಗಳ ಹಿಂದೆ ‘ಅಪಾಯಕಾರಿ ಇ-ತ್ಯಾಜ್ಯ ನಿರ್ವಹಣೆಗೆ ಕೊಡಿ ಅಥವಾ ದಾನ ಮಾಡಿ’ ಎಂಬ ಹೆಸರಿನಲ್ಲಿ ಒಂದು ತಿಂಗಳು ಅಭಿಯಾನ ನಡೆಸಿತ್ತು. ಆ ವೇಳೆ ಎಲ್ಲ ಮಾದರಿಯ ನಿರುಪಯುಕ್ತ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ದಕ್ಷಿಣ ಕನ್ನಡ ಚಿಕ್ಕಮಗಳೂರು ಹಾಸನ ಮಡಿಕೇರಿ ಸೇರಿ ಒಟ್ಟು 16 ಟನ್ ಇ–ತ್ಯಾಜ್ಯ ಸಂಗ್ರಹವಾಗಿತ್ತು. ಅದರಲ್ಲಿ ಮಂಗಳೂರು ತಾಲ್ಲೂಕಿನ ಪಾಲು ಸುಮಾರು 10 ಟನ್‌. ಬಳಸಿ ಬಿಸಾಡಿದ ಟಿ.ವಿ. ವಾಷಿಂಗ್ ಮಷಿನ್ ಮೊಬೈಲ್ ಫೋನ್ ಸೆಟ್ ರೆಫ್ರಿಜರೇಟರ್ ಅಧಿಕ ಪ್ರಮಾಣದಲ್ಲಿದ್ದವು ಎನ್ನುತ್ತಾರೆ ಆ ಸಂದರ್ಭದಲ್ಲಿ ಲಯನ್ಸ್‌ನ ಪರಿಸರ ವಿಭಾಗದ ಮುಖ್ಯ ಸಂಯೋಜಕರಾಗಿ ಅಭಿಯಾನದ ನೇತೃತ್ವ ವಹಿಸಿದ್ದ ಸಿವಿಲ್ ಎಂಜಿನಿಯರ್ ವಿಜಯ ವಿಷ್ಣು ಮಯ್ಯ. ಮತ್ತೊಮ್ಮೆ ಈ ರೀತಿಯ ಅಭಿಯಾನ ನಡೆಸಲು ಲಯನ್ಸ್‌ ಕ್ಲಬ್‌ನಲ್ಲಿ ಚರ್ಚಿಸಲಾಗಿದೆ ಎಂದೂ ತಿಳಿಸಿದರು.

‘ಉತ್ಪತ್ತಿ ಪ್ರಮಾಣ ಕಡಿಮೆ’

ಗ್ರಾಮೀಣ ಪ್ರದೇಶದಲ್ಲಿ ಇ–ತ್ಯಾಜ್ಯ ಉತ್ಪತ್ತಿ ಪ್ರಮಾಣ ಕಡಿಮೆ. ಎಡಪದವು (ಮಂಗಳೂರು ಮೂಲ್ಕಿ ಮೂಡುಬಿದಿರೆ) ನರಿಕೊಂಬು (ಬಂಟ್ವಾಳ ಉಳ್ಳಾಲ) ಕೆದಂಬಾಡಿ (ಪುತ್ತೂರು ಸುಳ್ಯ ಕಬಕ) ಉಜಿರೆ (ಬೆಳ್ತಂಗಡಿ) ಈ ಸ್ಥಳಗಳಲ್ಲಿ ಒಟ್ಟು ನಾಲ್ಕು ಮಟೀರಿಯಲ್ ರಿಕವರಿ ಫೆಸಿಲಿಟಿ (ಎಂಆರ್‌ಎಫ್) ಘಟಕಗಳು ಇವೆ. ಪ್ರತಿ ಎಂಆರ್‌ಎಫ್ ಘಟಕದಿಂದ ತಿಂಗಳಿಗೆ 100ರಿಂದ 200 ಕೆ.ಜಿ. ಸಂಗ್ರಹವಾಗುತ್ತದೆ. ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಘಟಕಕ್ಕೆ ನೀಡಲಾಗುತ್ತದೆ ಎನ್ನುತ್ತಾರೆ ಮಂಗಳಾ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌ ನಿರ್ದೇಶಕ ಸಚಿನ್ ಶೆಟ್ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.