ADVERTISEMENT

ಮಂಗಳೂರು| ವಿದ್ಯಾಸಂಸ್ಥೆ ಸನಿಹ ವಾಹನ ದಟ್ಟಣೆ ವ್ಯೂಹ

ಹೆದ್ದಾರಿ ದಾಟುವುದು ವಿದ್ಯಾರ್ಥಿಗಳಗೆ ನಿತ್ಯದ ಗೋಳು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2023, 6:48 IST
Last Updated 4 ಸೆಪ್ಟೆಂಬರ್ 2023, 6:48 IST
ನಂತೂರು ಬಳಿಯ ಪದುವಾ ವಿದ್ಯಾಸಂಸ್ಥೆ ಬಳಿ ರಾಷ್ಟ್ರೀಯ ಹೆದ್ದಾರಿ 66 ಅನ್ನು ದಾಟುತ್ತಿರುವ ವಿದ್ಯಾರ್ಥಿಗಳು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ನಂತೂರು ಬಳಿಯ ಪದುವಾ ವಿದ್ಯಾಸಂಸ್ಥೆ ಬಳಿ ರಾಷ್ಟ್ರೀಯ ಹೆದ್ದಾರಿ 66 ಅನ್ನು ದಾಟುತ್ತಿರುವ ವಿದ್ಯಾರ್ಥಿಗಳು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್   

ಪ್ರವೀಣ್‌ ಕುಮಾರ್‌ ಪಿ.ವಿ.

ಮಂಗಳೂರು: ಶರವೇಗದಲ್ಲಿ ಸಾಗಿಬರುವ ವಾಹನಗಳು, ವಾಹನಗಳ ಸಾಲು ಕರಗುವವರೆಗೆ ಕಾದು ನಂತರ, ಕರ ಹಿಡಿದು ಪುಟಾಣಿ ವಿದ್ಯಾರ್ಥಿಗಳನ್ನು ಜತನವಾಗಿ ರಸ್ತೆ ದಾಟಿಸುವ ಶಿಕ್ಷಕಿಯರು... ವಾಹನವನ್ನು ಗಕ್ಕನೆ ನಿಲ್ಲಿಸಿ ರಸ್ತೆ ದಾಟುವ ವಿದ್ಯಾರ್ಥಿಗಳಿಗೆ ಬೈದುಕೊಂಡು ಹೋಗುವ ಚಾಲಕರು...

ನಂತೂರು– ಪಡೀಲ್‌ ನಡುವಿನ ಬೈಪಾಸ್‌ ಹೆದ್ದಾರಿಯ ಪಕ್ಕದಲ್ಲಿರುವ ಪದವು– ಬಿಕರ್ನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ಕಾಣಿಸುವ ದೃಶ್ಯಗಳಿವು.

ADVERTISEMENT

‘ಮಕ್ಕಳಿಗೆ ರಸ್ತೆ ದಾಟುವ ಚಿಂತೆ ಮಾತ್ರ ಇರುತ್ತದೆ. ಇಲ್ಲಿ ವೇಗವಾಗಿ ಸಾಗಿಬರುವ ವಾಹನಗಳ ಪರಿವೆಯೇ ಅವರಿಗೆ ಇರುವುದಿಲ್ಲ. ಪುಟಾಣಿ ಮಕ್ಕಳ ಮೇಲೆ ನಿಗಾ ಇಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ನಾವು ವಾಹನಗಳನ್ನು ತಡೆದು ಮಕ್ಕಳನ್ನು ದಾಟಿಸುವಾಗ ವಾಹನಗಳ ಚಾಲಕರು ನಮ್ಮನ್ನೂ ಸೇರಿಸಿ ಬೈದುಕೊಂಡು ಹೋಗುತ್ತಾರೆ. ವಿದ್ಯಾರ್ಥಿಗಳನ್ನು ರಸ್ತೆ ದಾಟಿಸುವವರೆಗೆ ನಮಗೆ ಆತಂಕ ತಪ್ಪಿದ್ದಲ್ಲ’ ಎಂದು ವಸ್ತುಸ್ಥಿತಿಯನ್ನು ವಿವರಿಸುತ್ತಾರೆ ಈ ಶಾಲೆಯ ಮುಖ್ಯಶಿಕ್ಷಕಿ ರಾಜೀವಿ.

ಇಲ್ಲಿನ ಬೈಪಾಸ್‌ ರಸ್ತೆ ಚತುಷ್ಪಥವಾಗಿ ಅಭಿವೃದ್ಧಿಯಾಗುವುದಕ್ಕಿಂತ ಮೊದಲೇ ಇದ್ದ ಶಾಲೆ ಇದು. ಬೈಪಾಸ್‌ ರಸ್ತೆ ಅಭಿವೃದ್ಧಿಗೊಂಡ ಬಳಿಕ ಇಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ‘ಶಾಲಾ ವಠಾರ ನಿಧಾನವಾಗಿ ವಾಹನ ಚಲಾಯಿಸಿ’ ಎಂದು ಚಾಲಕರಿಗೆ ಸೂಚಿಸುವ ಮಾರ್ಗಸೂಚಿಗಳೂ ಇಲ್ಲಿ ಗೋಚರಿಸುವುದಿಲ್ಲ. ಇಲ್ಲಿ ಝೀಬ್ರಾ ಕ್ರಾಸಿಂಗ್‌ ವ್ಯವಸ್ಥೆಯೂ ಇಲ್ಲ.

‘ಕೆಲ ವರ್ಷಗಳ ಹಿಂದೆ ಇಲ್ಲಿ ಬ್ಯಾರಿಕೇಡ್‌ ಅಳವಡಿಸಿ ವಾಹನಗಳ ವೇಗವನ್ನು ನಿಯಂತ್ರಿಸಲಾಗುತ್ತಿತ್ತು.  ಈಗ ಅದೂ ಇಲ್ಲ’ ಎನ್ನುತ್ತಾರೆ ಸ್ಥಳೀಯರು.

ನಂತೂರು ವೃತ್ತದಲ್ಲಿ ನಿತ್ಯವೂ ವಾಹನ ದಟ್ಟಣೆ ತಪ್ಪಿದ್ದಲ್ಲ. ಕೆಲವೊಮ್ಮೆ ಇಲ್ಲಿ ದಟ್ಟಣೆಯ ಅವಧಿಯಲ್ಲಿ ನಂತೂರಿನಿಂದ ಬಿಕರ್ನಕಟ್ಟೆ ಕೈಕಂಬದ ಮೇಲ್ಸೇತುವೆವರೆಗೂ ವಾಹನಗಳು ಸಾಲುಗಟ್ಟಿ ನಿಲ್ಲುವುದುಂಟು. ಹೇಗಾದರೂ ನಂತೂರು ವೃತ್ತವನ್ನು ಹಾದುಹೋದರೆ ಸಾಕು ಎಂಬ ಮನಸ್ಥಿತಿಯಲ್ಲಿರುವ ವಾಹನ ಚಾಲಕರು ಪಾದಚಾರಿಗಳ ಸುರಕ್ಷತೆ ಬಗ್ಗೆ ಗಮನವಹಿಸುತ್ತಿಲ್ಲ. ಸಂಚಾರ ಪೊಲೀಸರಿಗೆ ಇಲ್ಲಿನ ಪರಿಸ್ಥಿತಿಯ ಗಂಭೀರತೆಯ ಅರಿವಿದೆ. ಆದರೆ, ‘ನಂತೂರು ಜಂಕ್ಷನ್‌ನ ದಟ್ಟಣೆ ನಿವಾರಿಸುವುದಕ್ಕೆ ನಮಗೆ ಸಿಬ್ಬಂದಿ ಸಾಲುತ್ತಿಲ್ಲ’ ಎಂದು ಅವರೂ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. 

ಇದು ಪದವು–ಬಿಕರ್ನಕಟ್ಟೆ ಸರ್ಕಾರಿ ಶಾಲೆಯೊಂದರ ಸ್ಥಿತಿ ಮಾತ್ರವಲ್ಲ, ಹೆದ್ದಾರಿ ಪಕ್ಕದಲ್ಲಿರುವ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳ  ಪಾಲಿಗೆ ಹೆದ್ದಾರಿ ದಾಟುವುದು ನಿತ್ಯದ ಗೋಳಾಗಿ ಬಿಟ್ಟಿದೆ. ವಳಚ್ಚಿಲ್‌ ಶ್ರೀನಿವಾಸ ಕಾಲೇಜು, ಅಡ್ಯಾರ್‌ನ ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜು, ವಾಮಂಜೂರಿನ ಸೇಂಟ್‌ ಜೋಸೆಫ್ಸ್‌ ಕಾಲೇಜು, ರೇಮಂಡ್‌ ವಿದ್ಯಾಸಂಸ್ಥೆ, ಎಕ್ಕೂರಿನ ಕೇಂದ್ರೀಯ ವಿದ್ಯಾಲಯ, ಮೀನುಗಾರಿಕಾ ಕಾಲೇಜು, ಜೆಪ್ಪಿನಮೊಗರುವಿನ ಯೆನೆಪೋಯ ಸ್ಕೂಲ್‌, ಪ್ರೆಸ್ಟೀಜ್‌ ಸ್ಕೂಲ್‌, ಕದ್ರಿ ಪಾರ್ಕ್‌ ಬಳಿಯ ಸರ್ಕಾರಿ ಶಾಲೆ, ಪದುವಾ ಶಾಲೆ ಮತ್ತು ಕಾಲೇಜು, ಭಾರತೀ ಕಾಲೇಜು, ನಿಟ್ಟೆ ಎನ್‌ಎಂಎಎಂ ಶಾಲೆ.... ಹೆದ್ದಾರಿಯ ಪಕ್ಕದಲ್ಲಿಯೇ ಇರುವ ಈ ವಿದ್ಯಸಂಸ್ಥೆಗಳ ವಿದ್ಯಾರ್ಥಿಗಳೂ ನಿತ್ಯ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಹೆದ್ದಾರಿಯನ್ನು ದಾಟಬೇಕಾದ ಸ್ಥಿತಿ ಇದೆ.

ಶಾಲೆ, ಕಾಲೇಜುಗಳ ಬಳಿ ‘ಯೂ–ಟರ್ನ್‌’ ಪಡೆಯುವುದಕ್ಕೆ ಅವಕಾಶ ಇಲ್ಲದ ಕಡೆ ವಾಹನದಲ್ಲಿ ಅನಗತ್ಯ ಒಂದೆರಡು ಕಿ.ಮೀ.ದೂರ ಸುತ್ತು ಹಾಕಿ ಬರಬೇಕಾದ ಸ್ಥಿತಿ ಪೋಷಕರದು. ಶಾಲಾ ಕಾಲೇಜುಗಳು ಆರಂಭವಾಗುವ ಹಾಘೂ ಬಿಡುವ ಸಂದರ್ಭದಲ್ಲಿ ಇಲ್ಲಿ ವಾಹನ ದಟ್ಟಣೆ ಮಾಮೂಲಿ. ವಿದ್ಯಾರ್ಥಿಗಳನ್ನು ಬಿಡಲು ಹಾಗೂ ಕರೆದೊಯ್ಯಲು ಬರುವ  ಪೋಷಕರು ವಾಹನ ದಟ್ಟನೆಯ ವ್ಯೂಹದಲ್ಲಿ ಸಿಲುಕಬೇಕಾದ ಸ್ಥಿತಿ ಇದೆ.

ನಂತೂರು ಹಾಗೂ ಕದ್ರಿ, ಬಿಜೈ ಕಡೆಯಿಂದ ಪದುವಾ ಶಾಲೆ, ಎನ್‌ಎಂಎಎಂ ಪಿ.ಯು. ಕಾಲೇಜು, ಭಾರತೀ ಪಿ.ಯು ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಕರೆತರುವವರು ಕದ್ರಿ ಉದ್ಯಾನದ ಬಳಿ ಹೆದ್ದಾರಿಯನ್ನು ದಾಟಬೇಕಾಗುತ್ತದೆ. ಶಾಲೆ ಆರಂಭವಾಗುವಾಗ ಹಾಗೂ ಶಾಲೆ ಬಿಡುವ ಸಮಯದಲ್ಲಿ ಇಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನಗಳ ಸಾಲು ಕರಗುವುದಕ್ಕೆ 10ರಿಂದ 15 ನಿಮಿಷ ಕಾಯಬೇಕಾಗುತ್ತದೆ. ಇಲ್ಲಿ ವಾಹನದಲ್ಲಿ ಹೆದ್ದಾರಿಯನ್ನು ದಾಟುವುದಂತೂ ಹರಸಾಹಸವೇ ಸರಿ.

ಶಾಲಾ ಕಾಲೇಜುಗಳ ಬಳಿ ಉಂಟಾಗುವ ವಾಹನ ದಟ್ಟಣೆ ಸಮಸ್ಯೆ ನೀಗಿಸಲು ಸಂಚಾರ ಪೊಲೀಸ್‌ ಇಲಾಖೆ, ಪಾಲಿಕೆ ಹಾಗೂ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಗಳು ಸೇರಿಕೊಂಡು ಸೂಕ್ತ ಮಾರ್ಗೊಪಾಯ ಕಂಡುಕೊಳ್ಳಬೇಕು ಎಂಬುದು ವಿದ್ಯಾರ್ಥಿಗಳ ಹಾಗೂ ಪೋಷಕರ ಒತ್ತಾಯ. 

‘ನಗರದಲ್ಲಿ ಶಾಲಾ ಕಾಲೇಜುಗಳ ಬಳಿ ನಿತ್ಯವೂ ವಾಹನ ದಟ್ಟಣೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಇದರ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಜೊತೆಗೂ ಚರ್ಚಿಸಿದ್ದೇವೆ. ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುವುದನ್ನು ತಡೆಯಲು, ಸಾಧ್ಯವಿರುವ ಕಡೆ ವಿದ್ಯಾಸಂಸ್ಥೆಯ ಪ್ರಾಂಗಣದೊಳಗೆ ವಾಹನ ನಿಲ್ಲಿಸಲು ವ್ಯವಸ್ಥೆ ಕಲ್ಪಿಸುವಂತೆಯೂ ಕೋರಿದ್ದೇವೆ. ವಿದ್ಯಾರ್ಥಿಗಳನ್ನು ಕರೆದೊಯ್ಯಲು ಬರುವ ಪೋಷಕರೂ ರಸ್ತೆ ಪಕ್ಕದಲ್ಲಿ ಗಂಟೆಗಟ್ಟಲೆ ವಾಹನ ನಿಲ್ಲಿಸುವುದನ್ನೂ ತಡೆಯಬೇಕಿದೆ. ಸಂಚಾರ ಪೊಲೀಸ್‌ ಸಿಬ್ಬಂದಿಯೂ ಇಂತಹ ಕಡೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಜೈನ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

ನಂತೂರು ಬಳಿಯ ಪದುವಾ ವಿದ್ಯಾಸಂಸ್ಥೆ ಬಳಿ ರಾಷ್ಟ್ರೀಯ ಹೆದ್ದಾರಿ 66 ಅನ್ನು ದಾಟಲು ಕಾಯುತ್ತಿರುವ ವಿದ್ಯಾರ್ಥಿಗಳು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ನಗರದ ಕೆನರಾ ಶಾಲೆಯ ಬಳಿ ರಸ್ತೆ ದಾಟಲು ವಿದ್ಯಾರ್ಥಿಗಳ ಹರಸಾಹಸ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ರಾಜೀವಿ
ವೆನಿಸ್ಸಾ
ಕುಲದೀಪ್‌ ಕುಮಾರ್ ಜೈನ್
ವಿದ್ಯಾರ್ಥಿಗಳನ್ನು ಪೋಷಕರು ಸ್ವಂತ ಕಾರಿನಲ್ಲೇ ಬರುವುದರಿಂದ ದಟ್ಟಣೆ ಸಮಸ್ಯೆ ಈಚಿನ ವರ್ಷಗಳಲ್ಲಿ ಹೆಚ್ಚಳವಾಗಿದೆ. ಸಾಧ್ಯವಾದಷ್ಟು ಸಾರ್ವಜನಿಕ ವಾಹನ ಬಳಸುವುದರಿಂದ ಈ ಸಮಸ್ಯೆ ನೀಗಿಸಬಹುದು
ಸಿಸ್ಟರ್‌ ವೆನಿಸ್ಸಾ ಪ್ರಾಂಶುಪಾಲರು ಸೇಂಟ್‌ ಆಗ್ನೆಸ್‌ ಸ್ವಾಯತ್ತ ಕಾಲೇಜು
ಹೆದ್ದಾರಿ ಪಕ್ಕದಲ್ಲಿರುವ ಶಾಲೆಗಳು ಇರುವ ಕಡೆ ವಾಹನಗಳು ವೇಗವಾಗಿ ಸಾಗುವುದನ್ನು ತಡೆಯಲು ಎನ್‌ಎಚ್‌ಎಐ ಹಾಗೂ ಸಂಚಾರ ಪೊಲೀಸರು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ರಾಜೀವಿ ಮುಖ್ಯೋಪಾಧ್ಯಾಯರು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪದವು ಬಿಕರ್ನಕಟ್ಟೆ
ಶಾಲಾ ಕಾಲೇಜುಗಳ ಬಳಿ ವಾಹನ ದಟ್ಟಣೆ ತಡೆಯಲು ಪೊಲೀಸ್‌ ಇಲಾಖೆ ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ. ಇಲ್ಲಿ ದಟ್ಟಣೆ ತಪ್ಪಿಸಲು ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ಪೋಷಕರ ಸಹಕಾರವೂ ಅಗತ್ಯ
ಕುಲದೀಪ್‌ ಕುಮಾರ್‌ ಜೈನ್‌ ಪೊಲೀಸ್‌ ಕಮಿಷನರ್‌

‘ಕಾರಿನಲ್ಲೇ ಬಂದರೆ ದಟ್ಟಣೆ ಕಟ್ಟಿಟ್ಟ ಬುತ್ತಿ’ ‘ನಗರದಲ್ಲಿ ಶಾಲಾ ಕಾಲೇಜುಗಳ ಬಳಿ ವಾಹನ ದಟ್ಟಣೆ ಇತ್ತೀಚಿನ ವರ್ಷಗಳಲ್ಲಿ ವಿಪರೀತ ಹೆಚ್ಚಳವಾಗಿದ್ದು ನಿಜ. ಇದಕ್ಕೆ ವಿದ್ಯಾರ್ಥಿಗಳ ಪೋಷಕರ ಮನಸ್ಥಿತಿಯೂ ಕಾರಣ. ಒಬ್ಬ ವಿದ್ಯಾರ್ಥಿಯನ್ನು ಶಾಲೆಗೆ ಅಥವಾ ಕಾಲೇಜಿಗೆ ಬಿಡಲು ಕಾರಿನಲ್ಲೇ ಬರುತ್ತಾರೆ. ನಗರದ ಕೆಲವು ವಿದ್ಯಾಸಂಸ್ಥೆಗಳಲ್ಲಿ 1ಸಾವಿರದಿಂದ 4 ಸಾವಿರದವರೆಗೂ ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ ಶೇ 25ರಷ್ಟು ವಿದ್ಯಾರ್ಥಿಗಳ ಪೋಷಕರೂ ಕಾರಿನಲ್ಲೇ ಬಂದರೆ ಹೆದ್ದಾರಿಯಲ್ಲಿ ದಟ್ಟಣೆ ಉಂಟಾಗದೇ ಇರಲು ಸಾಧ್ಯವೇ’ ಎಂದು ಸಂಚಾರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಒಬ್ಬರು ಪ್ರಶ್ನಿಸಿದರು.  ‘ಪೋಷಕರು ರಸ್ತೆ ಪಕ್ಕದಲ್ಲಿ ಜಾಗ ಸಿಕ್ಕಲ್ಲೆಲ್ಲ ಕಾರುಗಳನ್ನು ನಿಲ್ಲಿಸುತ್ತಾರೆ. ಇದು ಸಮಸ್ಯೆ ಮತ್ತಷ್ಟು ಉಲ್ಬಣವಾಗುವುದಕ್ಕೆ ಕಾರಣವಾಗುತ್ತಿದೆ. ಇದನ್ನು ತಡೆಯುವುದು ಸವಾಲಾಗಿ ಪರಿಣಮಿಸಿದೆ’ ಎಂದರು. ‘ಪ್ರಾಥಮಿಕ ಶಾಲೆಗೆಂದು ಪರವಾನಗಿ ಪಡೆಯುವ ವಿದ್ಯಾಸಂಸ್ಥೆಗಳು ಕ್ರಮೇಣ ಅದೇ ಜಾಗದಲ್ಲಿ ಹೈಸ್ಕೂಲ್‌ ಪಿ.ಯು.ಕಾಲೇಜು ಪದವಿ ಕಾಲೇಜುಗಳೆಲ್ಲವನ್ನೂ ಆರಂಭಿಸುತ್ತವೆ. ಇಷ್ಟೆಲ್ಲ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವಾಗ ಅದಕ್ಕೆ ಪೂರಕವಾಗಿ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಆಗಿದೆಯೇ ಎಂಬುದನ್ನು ಪರಿಗಣಿಸುವುದಿಲ್ಲ. ವಿದ್ಯಾಸಂಸ್ಥೆಗಳಿಗೆ ಪರವಾನಗಿ ನೀಡುವಾಗ ಈ ವಿಚಾರವನ್ನೂ ಗಮನಿಸಬೇಕು’ ಎಂದು ಸಲಹೆ ನೀಡಿದರು.

Cut-off box - ‘ನಗರದೊಳಗೂ ದಟ್ಟಣೆಯ ಗೋಳು’ ವಾಹನ ದಟ್ಟಣೆ ಕೇವಲ ಹೆದ್ದಾರಿ ಪಕ್ಕದ ವಿದ್ಯಾಸಂಸ್ಥೆಗಳಿಗಷ್ಟೇ ಸೀಮಿತವಲ್ಲ. ನಗರದೊಳಗಿನ ಕೆಲವು ವಿದ್ಯಾಸಂಸ್ಥೆಗಳ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ. ಬೆಂದೂರ್‌ವೆಲ್‌ನ ಸೇಂಟ್‌ ಆಗ್ನೇಸ್‌  ವಿದ್ಯಾಸಂಸ್ಥೆ ಬೆಂದೂರ್ವೆಲ್ನ ಸೇಂಟ್‌ ಥೆರೆಸಾ ಸ್ಕೂಲ್‌ ಬಿಜೈನ ಲೂರ್ಡ್ಸ್‌ ಸ್ಕೂಲ್‌ ಲೇಡಿಹಿಲ್‌ ಜಂಕ್ಷನ್‌ನಲ್ಲಿರುವ ಅಲೋಷಿಯಸ್‌ ಹೈಸ್ಕೂಲ್‌ ಹಾಗೂ ಲೇಡಿಹಿಲ್‌ ಗರ್ಲ್ಸ್‌ ಸ್ಕೂಲ್‌ ಡೊಂಗರಕೇರಿಯ ಕೆನರಾ ಹೈಸ್ಕೂಲ್‌ ಕೆನರಾ ಪದವಿಪೂರ್ವ ಮತ್ತು ಪದವಿ ಕಾಲೇಜು ಕೆನರಾ ಹೈಸ್ಕೂಲ್‌ ಉರ್ವ ಎಸ್‌ಡಿಎಂ ಕಾನೂನು ಕಾಲೇಜು ಎಸ್‌ಡಿಎಂ ಬಿಜಿನೆಸ್‌ ಮ್ಯಾನೇಜ್‌ಮೆಂಟ್‌ ಕಾಲೇಜು ಸೇಂಟ್‌ ಅಲೋಷಿಯಸ್‌ನ ಪದವಿ ಪೂರ್ವ ಕಾಲೇಜು ಮತ್ತು ಗೊನ್ಝಾಗ ಸ್ಕೂಲ್‌ ಪಾಂಡೇಶ್ವರದ ಸೇಂಟ್‌ ಆ್ಯನ್ಸ್‌ ಮತ್ತು ರೊಸಾರಿಯೊ ಬಂದರ್‌ನ ಬದ್ರಿಯಾ ಕಾಲೇಜುಗಳ ಬಳಿಯೂ ವಾಹನ ದಟ್ಟಣೆ ತೀವ್ರಾಗಿದೆ.

Cut-off box - ‘ಸಂಚಾರ ಸಮಸ್ಯೆ ನೀಗಿಸಲು ಟ್ರಾಫಿಕ್‌ ವಾರ್ಡನ್‌’ ಕೆಲವು ವಿದ್ಯಾಸಂಸ್ಥೆಗಳು ಸಂಚಾರ ದಟ್ಟಣೆ ನಿವಾರಿಸಲು ಟ್ರಾಫಿಕ್‌ ವಾರ್ಡನ್‌ಗಳನ್ನು ನೇಮಿಸಿವೆ. ನಮ್ಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನೇ ಟ್ರಾಫಿಕ್‌ ವಾರ್ಡನ್‌ಗಳನ್ನಾಗಿ ಗುರುತಿಸಿ ಸಂಚಾರ ದಟ್ಟಣೆ ನಿವಾರಣೆಗೆ ತರಬೇತುಗೊಳಿಸುತ್ತೇವೆ. ಸಣ್ಣ ಮಕ್ಕಳು ರಸ್ತೆ ದಾಟಲು ಟ್ರಾಫಿಕ್‌ ವಾರ್ಡನ್‌ಗಳುಸಹಾಯ ಮಾಡುತ್ತಾರೆ. ದಟ್ಟಣೆ ನಿವಾರಣೆಗೆ ಸಂಚಾರ ಪೊಲೀಸರಿಗೂ ಅವರು ನೆರವಾಗುತ್ತಾರೆ’ ಎಂದು ಸೇಂಟ್‌ ಆಗ್ನೇಸ್‌ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ವೆನಿಸ್ಸಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.