ಸುಳ್ಯ (ದಕ್ಷಿಣ ಕನ್ನಡ): ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ವೃದ್ಧೆ ಮೇಲೆ ಕಾಡಾನೆ ಮಂಗಳವಾರ ಬೆಳಿಗ್ಗೆ ದಾಳಿ ಮಾಡಿದ್ದು, ಆಕೆ ಮೃತಪಟ್ಟಿದ್ದಾರೆ.
ಪುತ್ತೂರು ತಾಲ್ಲೂಕಿನ ಮಾಡಾವು ಕೆಯ್ಯೂರು ಗ್ರಾಮದ ಸೆಲ್ಲಮ್ಮ (65) ಮೃತ ಮಹಿಳೆ. ಈ ಕುರಿತು ಆಕೆಯ ಪುತ್ರ ಟಿ.ಯೋಗರಾಜ ಅವರು ದೂರು ನೀಡಿದ್ದು, ಬೆಳ್ಳಾರೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸೆಲ್ಲಮ್ಮ ಅವರು ಕೊಳ್ತಿಗೆ ಗ್ರಾಮದ ಕನಿಯಾರು ಸಿಆರ್‌ಸಿ ಕಾಲೋನಿಯಲ್ಲಿ ಒಬ್ಬರೇ ವಾಸವಾಗಿದ್ದರು. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ (ಕೆಎಫ್‌ಡಿಸಿ) ರಬ್ಬರ್ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗುತ್ತಿದ್ದರು. ಮಂಗಳವಾರ ಬೆಳಿಗ್ಗೆ 7 ರಿಂದ 8 ಗಂಟೆಯ ಅವಧಿಯಲ್ಲಿ ಕೊಳ್ತಿಗೆ ಗ್ರಾಮದ ಹರ್ತ್ಯಡ್ಕ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದಾಗ ಕಾಡಾನೆಯೊಂದು ದಾಳಿ ನಡೆಸಿತ್ತು. ಮಹಿಳೆಯನ್ನು ಓಡಿಸಿಕೊಂಡು ಹೋಗಿ ತುಳಿದು ಗಂಭೀರವಾಗಿ ಗಾಯಗೊಳಿಸಿತ್ತು. ಸೆಲ್ಲಮ್ಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಕೆಎಫ್‌ಡಿಸಿ ಅಧಿಕಾರಿಗಳು, ಸುಳ್ಯ ಸರ್ಕಲ್ ಇನ್‌ಸ್ಪೆಕ್ಟರ್ ಹಾಗೂ ಬೆಳ್ಳಾರೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.