ADVERTISEMENT

ಸುಧಾಮೂರ್ತಿಗೆ ಫಿದಾ ಆದ ಯು.ಟಿ. ಖಾದರ್ ಪುತ್ರಿ

ಶಾಸಕ ಯು.ಟಿ.ಖಾದರ್ ಪುತ್ರಿಯ ಸಾಹಿತ್ಯ ಪ್ರೀತಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 19:45 IST
Last Updated 11 ಸೆಪ್ಟೆಂಬರ್ 2019, 19:45 IST
ಸುಧಾಮೂರ್ತಿ ಅವರನ್ನು ಭೇಟಿ ಮಾಡಿದ ಹವ್ವ ನಸೀಮಾ, ನೆನಪಿನ ಕಾಣಿಕೆಯನ್ನು ನೀಡಿದರು. ಶಾಸಕ ಯು.ಟಿ.ಖಾದರ್ ಇದ್ದಾರೆ
ಸುಧಾಮೂರ್ತಿ ಅವರನ್ನು ಭೇಟಿ ಮಾಡಿದ ಹವ್ವ ನಸೀಮಾ, ನೆನಪಿನ ಕಾಣಿಕೆಯನ್ನು ನೀಡಿದರು. ಶಾಸಕ ಯು.ಟಿ.ಖಾದರ್ ಇದ್ದಾರೆ   

ಮಂಗಳೂರು: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ, ಸಾಹಿತಿ ಸುಧಾಮೂರ್ತಿ ಬರಹಗಳಿಗೆ ಫಿದಾ ಆಗಿರುವ ಶಾಸಕ ಯು.ಟಿ. ಖಾದರ್ ಪುತ್ರಿ, ಹತ್ತನೇ ತರಗತಿಯ ವಿದ್ಯಾರ್ಥಿನಿ ಹವ್ವ ನಸೀಮಾ, ತನ್ನ ಹುಟ್ಟುಹಬ್ಬದ ಸವಿನೆನಪಿಗಾಗಿ ಅವರನ್ನು ಬುಧವಾರ ಭೇಟಿಯಾಗಿ ತಾವೇ ಬರೆದ ಸಾಲುಗಳ ಸ್ಮರಣಿಕೆಯನ್ನು ನೀಡಿದರು.

‘ ಸುಧಾಮೂರ್ತಿಯವರ ಸರಳತೆ, ವೈಚಾರಿಕತೆ ಹಾಗೂ ಸಾಹಿತ್ಯವು ಇಷ್ಟವಾಗಿತ್ತು’ ಎಂದು ಯು.ಟಿ.ಖಾದರ್ ಮತ್ತು ಲಾಮಿಸ್ ದಂಪತಿ ಹವ್ವ ನಸೀಮಾ ತಿಳಿಸಿದ್ದಾರೆ.

ಸುಧಾಮೂರ್ತಿಯವರ ಬೆಂಗಳೂರು ಜಯನಗರದ 4ನೇ ಬ್ಲಾಕ್ ನಿವಾಸಕ್ಕೆ ತಂದೆ ಯು.ಟಿ.ಖಾದರ್ ಜೊತೆಗೆ ತೆರಳಿ ತನ್ನ ಬಹುದಿನಗಳ ಕನಸನ್ನು ನನಸು ಮಾಡಿಕೊಂಡರು.

ADVERTISEMENT

ಸುಧಾಮೂರ್ತಿಯವರ ಸಾಹಿತ್ಯ ಪುಸ್ತಕವನ್ನು ಹವ್ವ ಓದುತ್ತಿದ್ದಾಗ ಗಮನಿಸಿದ ತಂದೆ ಯು.ಟಿ.ಖಾದರ್ ಮಗಳನ್ನು ಕುತೂಹಲದಿಂದ ವಿಚಾರಿಸಿದ್ದರು. ಆಗ, ಸುಧಾಮೂರ್ತಿಯನ್ನು ಭೇಟಿಯಾಗಬೇಕು ಎಂಬ ಕನಸನ್ನು ಆಕೆ ಮುಂದಿಟ್ಟಿದ್ದಾಳೆ. ಅಲ್ಲದೇ, ಈ ವರ್ಷದ ಜನ್ಮದಿನಕ್ಕೆ ಯಾವ ಉಡುಗೊರೆ ಬೇಕು ಎಂದು ಖಾದರ್ ಪ್ರಶ್ನಿಸಿದಾಗಲೂ, ಸುಧಾಮೂರ್ತಿ ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದಳು ಎಂದು ಸಮೀಪದಿಂದ ಬಲ್ಲ ರಶೀದ್‌ ವಿಟ್ಲ ತಿಳಿಸಿದರು.

ಎಳೆಯದರಲ್ಲೇ ಸಾಹಿತ್ಯಾಭಿರುಚಿ ಬೆಳೆಸಿಕೊಂಡಿರುವುದಕ್ಕೆ ಖುಷಿಯಾದ ಸುಧಾಮೂರ್ತಿ ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಅಲ್ಲದೇ, ತಾವೇ ಬರೆದ ‘ತ್ರೀ ತೌಸೆಂಡ್ ಸ್ಟಿಚಸ್’, ‘ದಿ ಮ್ಯಾಜಿಕ್ ಆಫ್ ದಿ ಲೋಸ್ಟ್ ಟೆಂಪಲ್’, ‘ಮ್ಯಾಜಿಕ್ ಡ್ರಮ್‘, ‘ಹೌ ದ ಸೀ ಬಿಕಾಮ್ ಸಾಲ್ಟಿ’ ಎಂಬ ನಾಲ್ಕು ಕೃತಿಗಳನ್ನು ನೀಡಿದರು. ಹವ್ವ ಮಂಜೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.