ADVERTISEMENT

ಅಕ್ರಮ ಮರಳು ಗಣಿಗಾರಿಕೆ ಕಾರಣ

ಮರವೂರು ಸೇತುವೆಯಲ್ಲಿ ಬಿರುಕು: ಹಲವರಿಂದ ಆರೋಪ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 15:16 IST
Last Updated 16 ಜೂನ್ 2021, 15:16 IST
ಡಾ.ಕೆ.ವಿ. ರಾಜೇಂದ್ರ
ಡಾ.ಕೆ.ವಿ. ರಾಜೇಂದ್ರ   

ಮಂಗಳೂರು: ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಫಲ್ಗುಣಿ ನದಿಗೆ ಮರವೂರಿನಲ್ಲಿ ನಿರ್ಮಿಸಿದ್ದ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡ ಬೆನ್ನಲ್ಲೇ ಅನೇಕರು, ಈ ನದಿ ತಟದಲ್ಲಿ ನಡೆಯುವ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಿದ್ದಾರೆ.

‘ಮರವೂರಿನಲ್ಲಿ ನದಿದಂಡೆಯ ಸುತ್ತ ಅಕ್ರಮ ಮರಳು ಗಣಿಗಾರಿಕೆ, ಹಿಟಾಚಿ, ಡ್ರೆಜ್ಜಿಂಗ್ ಯಂತ್ರದ ಬಳಕೆಯಾಗುತ್ತಿರುವ ಕುರಿತು ಗ್ರಾಮಸ್ಥರು ಹಲವಾರು ಬಾರಿ ಆಕ್ಷೇಪ ಎತ್ತಿದ್ದರು. ಸೇತುವೆ ಕುಸಿಯುವ ಆತಂಕವನ್ನೂ ವ್ಯಕ್ತಪಡಿಸಿದ್ದರು. ಆದರೆ, ಜನರ ಧ್ವನಿಯನ್ನು ಹತ್ತಿಕ್ಕಲಾಗಿದೆ. ಯಂತ್ರಗಳ ಮೂಲಕ ನಡೆಸಿದ ಮರಳು ದಂಧೆ ಈಗ ಸೇತುವೆಯ ಕಂಬಗಳನ್ನೇ ಅಲ್ಲಾಡಿಸಿದೆ’ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

‘ಎರಡು ವರ್ಷಗಳ ಒಳಗಾಗಿ ಎರಡು ಸೇತುವೆಗಳು ಕುಸಿದಿವೆ. ಈ ಹಿಂದೆ ಮೂಲರಪಟ್ನ ಸೇತುವೆ ಕುಸಿದು, ಆ ಭಾಗದಲ್ಲಿ ಮಂಗಳೂರು– ಬಂಟ್ವಾಳ ರಸ್ತೆ ಸಂಪರ್ಕ ಕಡಿದು ಹೋಗಿತ್ತು. ಈಗ ಮಂಗಳೂರು ನಗರದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಪ್ರಧಾನ ರಸ್ತೆಯ ಮರವೂರು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಈಗ ಮತ್ತೆ ಮರಳು ದಂಧೆಯ ಕರಾಳ ರೂಪ ಚರ್ಚೆಗೆ ಬಂದಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಫಲ್ಗುಣಿ ನದಿ ತೀರದ ಕೆಲವು ಗ್ರಾಮಗಳಲ್ಲಿ ಜೆಸಿಬಿ, ಹಿಟಾಚಿಗಳು ನದಿ ಪಾತ್ರವನ್ನು ಹರಿದು ಚಿಂದಿ ಮಾಡಿವೆ. ಬೇಸಿಗೆಯಲ್ಲಿ ನೀರಿನ ಹರಿವು ಕಡಿಮೆ ಇದ್ದಾಗ ಇದು ಸ್ಪಷ್ಟವಾಗಿ ಕಾಣುತ್ತದೆ. ಶಾಂಭವಿ ನದಿ ತೀರ ಕೂಡ ಇದಕ್ಕೆ ಹೊರತಾಗಿಲ್ಲ. ಮೂರು ವರ್ಷಗಳಿಂದ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ’ ಎಂದು ಅವರು ದೂರಿದ್ದಾರೆ.

‘ಮರವೂರು ಸೇತುವೆಯಲ್ಲಿ ಬಿರುಕು ಕಾಣಿಸಿಕೊಳ್ಳಲು ಅಕ್ರಮ ಮರಳು ಗಣಿಗಾರಿಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ ಬೇರೆ ಸೇತುವೆಗಳಿಗೆ ಎದುರಾಗಲಿರುವ ಅಪಾಯವನ್ನು ಈ ಹಿಂದೆಯೇ ತಿಳಿಸಲಾಗಿದ್ದರೂ, ಆಡಳಿತ ಎಚ್ಚೆತ್ತುಕೊಂಡಿಲ್ಲ’ ಎಂದು ಸಾಮಾಜಿಕ ಮುಖಂಡ ಶಶಿಧರ ಶೆಟ್ಟಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.