ADVERTISEMENT

ಶಿಕ್ಷಕ ವಿದ್ಯಾರ್ಥಿಯೂ ಆಗಿರಲಿ: ಡಾ. ಉಣ್ಣಿಕೃಷ್ಣನ್‌

ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ 3 ದಿನಗಳ ತರಬೇತಿ ಕಾರ್ಯಗಾರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 3:01 IST
Last Updated 28 ಜುಲೈ 2021, 3:01 IST
ಮಂಗಳೂರಿನ ಶಕ್ತಿನಗರದ ಶಕ್ತಿ ಶಿಕ್ಷಣ ಸಂಸ್ಥೆಯ ಬೋಧಕ ಸಿಬ್ಬಂದಿಗಾಗಿ 3 ದಿನಗಳ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು
ಮಂಗಳೂರಿನ ಶಕ್ತಿನಗರದ ಶಕ್ತಿ ಶಿಕ್ಷಣ ಸಂಸ್ಥೆಯ ಬೋಧಕ ಸಿಬ್ಬಂದಿಗಾಗಿ 3 ದಿನಗಳ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು   

ಮಂಗಳೂರು: ‘ಶಿಕ್ಷಕ ಸ್ವತಃ ನಿರಂತರ ಕಲಿಕೆಯ ವಿದ್ಯಾರ್ಥಿಯೂ ಆಗಿದ್ದರೆ ಮಾತ್ರ ಶಾಲೆಯಲ್ಲಿ ಬೋಧನೆ ಪರಿಣಾಮಕಾರಿ ಮಟ್ಟದಲ್ಲಿರಲು ಸಾಧ್ಯ’ ಎಂದು ನಗರದ ಕೆಎಂಸಿ ಹೆಚ್ಚುವರಿ ಡೀನ್‌ ಡಾ. ಬಿ. ಉಣ್ಣಿಕೃಷ್ಣನ್‌ ಹೇಳಿದರು.

ಶಕ್ತಿನಗರದ ಶಕ್ತಿ ಶಿಕ್ಷಣ ಸಂಸ್ಥೆಯ ಬೋಧಕ ಸಿಬ್ಬಂದಿಗಾಗಿ ಆಯೋಜಿಸಿದ್ದ 3 ದಿನಗಳ ತರಬೇತಿ ಕಾರ್ಯಾಗಾರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್‌ ನಿರ್ಬಂಧದ ಪರಿಣಾಮ ಮಕ್ಕಳು ಆನ್‌ಲೈನ್‌ ಶಿಕ್ಷಣದ ನೆಪದಲ್ಲಿ ಮೋಬೈಲ್‌ ತಂತ್ರಜ್ಞಾನಕ್ಕೆ ಅಂಟಿಕೊಂಡಿದ್ದಾರೆ. ಇದು ಅವರ ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮಕ್ಕಳ ವ್ಯಕ್ತಿತ್ವ ವಿಕಾಸ, ಸಾಮೂಹಿಕ ನಡವಳಿಕೆ ಹಾಗೂ ಸಮೂಹ ಸಂವಹನ ಕಲೆಗಳು ಶಾಲಾ ಶಿಕ್ಷಣದಿಂದ ಮಾತ್ರ ವಿಕಾಸ ಹೊಂದಲು ಸಾಧ್ಯ ಎಂದು ಅವರು ತಿಳಿಸಿದರು. ಮಕ್ಕಳಿಗೆ ಉತ್ತಮ ನಡವಳಿಕೆ ಕಲಿಸಿರಿ, ಮಕ್ಕಳ ಮೂಲಕ ಹಿರಿಯರಿಗೆ ಅರಿವು ಮೂಡಿಸುವ ವಿಧಾನ ಕೋವಿಡ್‌ ಸಂದರ್ಭದಲ್ಲಿ ಅನುಕರಣೀಯ ಎಂದರು.‌

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪ್ರೊ. ರಾಜಾರಾಮ ರಾವ್‌, ತರಬೇತಿಯಿಂದ ಶಿಕ್ಷಕರಲ್ಲಿ ಪುನರ್ಮನನ, ಪುನಶ್ಚೇತನ ಆಗುತ್ತದೆ. ಶಿಕ್ಷಕ ಪಠ್ಯ ಬೋಧಕ ಅಷ್ಟೇ ಅಲ್ಲ ತನ್ನ ವಿದ್ಯಾರ್ಥಿಗಳಿಗೆ ಗೆಳೆಯ, ಮಾರ್ಗದರ್ಶಕ, ತರಬೇತುದಾರ ಹಾಗೂ ಕೆಲವೊಮ್ಮೆ ಪೋಷಕರಷ್ಟೇ ಜವಾಬ್ದಾರಿ ಹೊಂದಿರುತ್ತಾರೆ. ಶಿಕ್ಷಕರು ಹೊಸ ತಂತ್ರಜ್ಞಾನಯುಗದಲ್ಲಿ ಎದೆಗುಂದದಿರಲು ಅವರಿಗೂ ನಿರಂತರ ತರಬೇತಿ ಅಗತ್ಯ’ ಎಂದರು.

ಮಂಗಳೂರಿನ ‘ಅಭಿಯಾನಂ’ ಮಾನವ ಸಂಪನ್ಮೂಲ ತರಬೇತಿ ಸಂಸ್ಥೆಯ ನಿರ್ದೇಶಕ ಶಿಕಾರಿಪುರ ಕೃಷ್ಣಮೂರ್ತಿ, ಅವರ ತಂಡದ ಪರಮೇಶ್ವರ ಹೆಗ್ಡೆ, ಪುಷ್ಪರಾಜ್‌, ವೀಣಾ ಶ್ರೀನಿವಾಸ್‌ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸಂಸ್ಥೆ 40 ಮಂದಿ ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ಶಕ್ತಿ ಸಂಸ್ಥೆಯ ಆಡಳಿತಾಧಿಕಾರಿ ಡಾ.ಕೆ.ಸಿ. ನಾಯ್ಕ್‌, ಮುಖ್ಯ ಸಲಹೆಗಾರ ರಮೇಶ್‌ ಕೆ., ಪ್ರಾಂಶುಪಾಲೆ ವಿದ್ಯಾ ಕಾಮತ್‌ ಜಿ., ಸಂಚಾಲಕಿ ನೀಮಾ ಸಕ್ಸೇನಾ, ಐಡಿಒ ಪ್ರಖ್ಯಾತ್‌ ರೈ, ಉಪನ್ಯಾಸಕಿ ಹರ್ಷಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.