ADVERTISEMENT

ನಕಲಿ ಉದ್ದಿಮೆ ಪರವಾನಗಿ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 7:23 IST
Last Updated 31 ಜುಲೈ 2025, 7:23 IST
ಪೃಥ್ವಿರಾಜ್ ಶೆಟ್ಟಿ
ಪೃಥ್ವಿರಾಜ್ ಶೆಟ್ಟಿ   

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಉದ್ದಿಮೆ ಪರವಾನಗಿ ಹಾಗೂ ಆಸ್ತಿ ತೆರಿಗೆ ಪಾವತಿಯ ನಕಲಿ ರಸೀದಿ ಸೃಷ್ಟಿಸಿ ವಂಚಿಸಿದ ಆರೋಪಿಯನ್ನು ಕಂಕನಾಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಉಜ್ಜೋಡಿ ಬೈಕ್ ಕ್ಲಿನಿಕ್ ಸಮೀಪದ ನಿವಾಸಿ ಪೃಥ್ವಿರಾಜ್ ಶೆಟ್ಟಿ (25) ಬಂಧಿತ ಆರೋಪಿ. ಕೇರಳದ ಹಲವಾರು ಕಡೆಗಳಲ್ಲಿ ತಲೆಮರೆಸಿಕೊಂಡಿದ್ದ ಈತ ಕಿನ್ನಿಗೋಳಿಗೆ ಬರುವ ವೇಳೆ ಜುಲೈ 25ರಂದು ಬಂಧಿಸಲಾಗಿದೆ. ಆರೋಪಿಯಿಂದ ನಕಲಿ ದಾಖಲೆ ಸೃಷ್ಟಿಗೆ ಉಪಯೋಗಿಸಿ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಏನು?: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶ್ರೀ ರಾಜ ದುರ್ಗಾ ಫರ್ನಿಚರ್ ವರ್ಕ್ಸ್ ಎಂಬ ಉದ್ದಿಮೆ ಹೊಂದಿರುವ ಬಾಲಕೃಷ್ಣ ಸುವರ್ಣ ಎಂಬುವರು ನ್ಯಾಯಾಲಯದ ಪ್ರಕರಣದಲ್ಲಿ ವ್ಯವಹರಿಸುವ ಸಂಬಂಧ ದಾಖಲಾತಿ ಪಡೆದುಕೊಳ್ಳಲು ಮಹಾನಗರ ಪಾಲಿಕೆಗೆ ಭೇಟಿ ನೀಡಿದಾಗ, ಅವರ ಉದ್ದಿಮೆ ಪರವಾನಗಿ ಹಾಗೂ ಆಸ್ತಿ ತೆರಿಗೆ ಅನೂರ್ಜಿತಗೊಂಡಿದ್ದು ಅರಿವಿಗೆ ಬರುತ್ತದೆ. ಆ ವೇಳೆ ಅವರು ತಮ್ಮ ಬಳಿ ಊರ್ಜಿತ ಇರುವ ಉದ್ದಿಮೆ ಪರವಾನಗಿ ಹಾಗೂ ಆಸ್ತಿ ತೆರಿಗೆ ಪಾವತಿಯನ್ನು ತೋರಿಸುತ್ತಾರೆ. ಆಗ ಅದು ನಕಲಿ ಎಂಬುದು ಗೊತ್ತಾಗುತ್ತದೆ ಎಂದು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. 

ADVERTISEMENT

ಈ ಸಂಬಂಧ ಮಹಾನಗರ ಪಾಲಿಕೆ ಆಯುಕ್ತರು ಕಂಕನಾಡಿ ಠಾಣೆಗೆ ನೀಡಿದ ಮಾಹಿತಿಯಂತೆ ಪ್ರಕರಣದ ಪರಿಶೀಲನೆ ನಡೆಸಿದಾಗ, ಆರೋಪಿ ಪೃಥ್ವಿರಾಜ್ ಶೆಟ್ಟಿಯು ಬಾಲಕೃಷ್ಣ ಅವರಿಂದ ₹27,900 ಹಣ ಪಡೆದು, ನಕಲಿ ರಸೀದಿ ಸೃಷ್ಟಿಸಿರುವುದು ಪತ್ತೆಯಾಗಿದ್ದು, ಪೃಥ್ವಿರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಇದಲ್ಲದೆ, ಪಂಪ್‌ವೆಲ್‌ನಲ್ಲಿರುವ ಲಕ್ಷ್ಮಿ ಹಾರ್ಡ್‌ವೇರ್‌ ವರ್ಕ್‌ಶಾಪ್‌ನ ಮಾಲೀಕ ದೇವಾಂಗ ಕೆ. ಪಟೇಲ್ ಕೂಡ ಪೃಥ್ವಿರಾಜ್ ಶೆಟ್ಟಿ ನಕಲಿ ಉದ್ದಿಮೆ ಪರವಾನಗಿ ಹಾಗೂ ಆಸ್ತಿ ತೆರಿಗೆ ಪಾವತಿಯನ್ನು ಸೃಷ್ಟಿಸಿ ವಂಚಿಸಿರುವ ಬಗ್ಗೆ ಬರ್ಕೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ. 

‘ಆರೋಪಿಯ ತಂದೆ ಗಣೇಶ್ ಅವರು ದೇವಾಂಗ್ ಪಟೇಲ್ ಅವರ ಅಂಗಡಿಯಲ್ಲಿ ಕಮರ್ಷಿಯಲ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಅನಾರೋಗ್ಯದ ಕಾರಣ 2004ರಿಂದ ಪೃಥ್ವಿರಾಜ್ ಆ ಕೆಲಸ ಮುಂದುವರಿಸಿದ್ದ. ದೇವಾಂಗ್ ಪಟೇಲ್ ಹಾಗೂ ಅವರ ಪರಿಚಯದ ಬಾಲಕೃಷ್ಣ ಅವರಿಗೆ 2025–26ನೇ ಸಾಲಿನ ಉದ್ದಿಮೆ ಪರವಾನಗಿ ನವೀಕರಣ ಹಾಗೂ ಆಸ್ತಿ ತೆರಿಗೆ ಪಾವತಿಗೆ ಹಣ ಪಡೆದ ಆರೋಪಿಯು, ತನ್ನ ಮೊಬೈಲ್‌ ಫೋನ್‌ನಲ್ಲಿ ಪಾಲಿಕೆಯ ವೆಬ್‌ಸೈಟ್‌ಗೆ ಲಾಗ್‌ಇನ್ ಆಗಿ, ಉದ್ದಿಮೆ ಮಾಲೀಕರ ಹಿಂದಿನ ವರ್ಷದ ಪರವಾನಗಿಯನ್ನು ಡೌನ್‌ಲೋಡ್ ಮಾಡಿಕೊಂಡು, ಥರ್ಡ್ ಪಾರ್ಟಿ ಅಪ್ಲಿಕೇಷನ್ ಮೂಲಕ ದಿನಾಂಕ ಹಾಗೂ ಇತರ ಮಾಹಿತಿಗಳನ್ನು ಎಡಿಟ್ ಮಾಡಿ, ಕೊಟ್ಟಿದ್ದ ಎಂಬ ಸಂಗತಿ ವಿಚಾರಣೆ ವೇಳೆ ಗೊತ್ತಾಗಿದೆ’ ಎಂದು ತಿಳಿಸಿದ್ದಾರೆ.

ಇತರ ಉದ್ದಿಮೆದಾರರಿಗೂ ಇದೇ ರೀತಿ ವಂಚಿಸಿದ್ದಾನೆಯೇ ಎಂಬ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.