ಬದಿಯಡ್ಕ: ‘ನಾಡಿನ ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸಬೇಕು. ಇದರಿಂದ ಹೊಸ ಕಲಾವಿದರಿಗೆ ಹಿರಿಯ ಕಲಾವಿದರ ಪರಿಚಯ ಹಾಗೂ ಅವರ ಆದರ್ಶಗಳನ್ನು ಅರಿಯಲು ಅವಕಾಶವಾಗುತ್ತದೆ. ಯೋಗ್ಯರನ್ನು ಅಭಿನಂದಿಸುವುದರಿಂದ ಗೌರವಿಸುವವರ ಗೌರವ ಹೆಚ್ಚುತ್ತದೆ’ ಎಂದು ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.
ಎಡನೀರು ಮಠದಲ್ಲಿ ಪುತ್ತೂರು ಮುರದ ಸತ್ಯಶಾಂತ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ತಲೆಂಗಳ ಶಂಭಟ್ಟ ಪಾರ್ವತಿ ಭಾಗವತ ಸ್ಮಾರಕ ಪ್ರಶಸ್ತಿಯನ್ನು ಸೋಮವಾರ ಪ್ರದಾನ ಮಾಡಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ರಾಜೇಂದ್ರ ಕಲ್ಲೂರಾಯ ವಹಿಸಿದ್ದರು.
ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟ್ರಮಣ ಭಟ್ಟ ಅವರಿಗೆ ಶಂಭಟ್ಟ ಭಾಗವತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪುರಸ್ಕೃತರ ಕುರಿತು ಪನೆಯಾಲ ರಾಮಚಂದ್ರ ಭಟ್ ಮಾತನಾಡಿದರು. ಉದಯಶಂಕರ ಭಟ್ ಸನ್ಮಾನ ಪತ್ರ ವಾಚಿಸಿದರು.
ಯಕ್ಷಗಾನ ಕಲಾವಿದರಾದ ಭಾಸ್ಕರ ಭಾರ್ಯ, ಪಿ.ಜಿ.ಜಗನ್ನಿವಾಸ ರಾವ್, ಜ್ಯೋತಿಷಿ ಕೃಷ್ಣಮೂರ್ತಿ ಪುದುಕೋಳಿ, ಡಾ.ವಿಷ್ಣುಪ್ರಸಾದ್ ಬರೆಕರೆ, ಸತ್ಯಾತ್ಮ ಕುಂಟಿನಿ ಭಾಗವಹಿಸಿದ್ದರು. ಪ್ರತಿಭಾ ಪುದುಕೋಳಿ ಪ್ರಾರ್ಥಿಸಿದರು. ಶಾಂತ ಕುಂಟಿನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಾಟ್ಯಗುರು ಸಬ್ಬಣಕೋಡಿ ರಾಮ ಭಟ್ ವಂದಿಸಿದರು. ಅನುಪಮಾ ರಾಘವೇಂದ್ರ ಉಡುಪುಮೂಲೆ ನಿರೂಪಿಸಿದರು. ನಂತರ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಮಕ್ಕಳಿಂದ ಯಕ್ಷಗಾನ ಪ್ರದರ್ಶನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.