ಕಾಸರಗೋಡು: ಆಷಾಢ ಮಾಸ ಕಳೆದು ಇನ್ನು ಉತ್ಸವಗಳ ದಿನಗಳು ಆರಂಭವಾಗುತ್ತಿದ್ದರೆ, ಆಚರಣೆಗಳ ಸಂಭ್ರಮ ಹೆಚ್ಚಳಕ್ಕೆ ನೈಸರ್ಗಿಕ ಹೂವುಗಳೂ ಅರಳಿನಿಂತಿವೆ.
ಗಣೇಶೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ, ತಿರುವೋಣಂ ಸಹಿತ ಉತ್ಸವಗಳಿಗೆ ಸಿದ್ಧತೆ ನಡೆಯುತ್ತಿದ್ದರೆ, ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ ಸ್ಥಳೀಯ ಹೂವಾಗಿರುವ ತುಂಬೆ ವಿಕಸಿತಗೊಂಡು ಭೂರಮೆಯ ಸಿಂಗಾರ ಹೆಚ್ಚಿಸುತ್ತಿವೆ. ಜಿಲ್ಲೆಯ ದಕ್ಷಿಣ ಭಾಗವಾಗಿರುವ ಕರಿಂದಳಂನ ಪಾರೆ ಎಂಬಲ್ಲಿ ನೀಲಬಣ್ಣದ ತುಂಬೆ ವ್ಯಾಪಕವಾಗಿ ಈ ಅವಧಿಯಲ್ಲಿ ಅರಳಿನಿಂತಿರುವುದು ಕಂಗಳಿಗೆ ಹಬ್ಬವಾಗಿದೆ.
ಸಾಧಾರಣ ಗತಿಯಲ್ಲಿ ಉತ್ಸವಗಳಿಗೆ ಬಳಸುವ ಹೂವು ಇತರ ರಾಜ್ಯಗಳಿಂದ ಹೇರಳವಾಗಿ ಮಾರುಕಟ್ಟೆಯಲ್ಲಿ ಸ್ಥಾನ ಪಡೆದು ಬೇಡಿಕೆ ಹೆಚ್ಚಿಸಿಕೊಳ್ಳುತ್ತಿವೆ. ಇಲ್ಲಿ ಸ್ಥಳೀಯ ಮಟ್ಟದಲ್ಲಿ ನೈಸರ್ಗಿಕವಾಗಿಯೇ ಬೆಳೆಯುವ ಹೂವುಗಳ ಬಗ್ಗೆ ಗಮನ ಹರಿಸಿದರೆ, ಇಲ್ಲೇ ಲಭಿಸುವ ಹೂವುಗಳು ನಮ್ಮ ಶೋಭೆಯನ್ನು ಹೆಚ್ಚಿಸಬಹುದು. ಯೂಟಿಕ್ಯುಲೇರಿಯ ಎಂಬ ವೈಜ್ಞಾನಿಕ ಹೆಸರಲ್ಲಿ ಗುರುತಿಸಿಕೊಳ್ಳುವ ತುಂಬೆ ಹೂವು ಈ ಸಾಲಿಗೆ ಖಂಡಿತವಾಗಿ ಸೇರಬಲ್ಲದು
ಹಳದಿ, ಬಿಳಿ ಮತ್ತು ನೀಲಿ ವರ್ಣದಲ್ಲಿ ಕಂಡುಬರುವ ತುಂಬೆ ಹೂವುಗಳು ಗಾತ್ರದಲ್ಲಿ ಚಿಕ್ಕದಾಗಿ ನಯನ ಮನೋಹರವಾಗಿವೆ. ಕೊಯ್ಯದೇ ಸಸಿಗಳಲ್ಲೇ ಉಳಿಸಿದರೂ ಇವು ನೋಟಕ್ಕೆ ಚಂದ. ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ತುಂಬೆ ಹೂವು ಅರಳುವುದು ಕ್ರಮ. ಈ ಬಾರಿ ಕರಿಂದಳಂ ಪಾರೆಯಲ್ಲಿ ಜುಲೈ ತಿಂಗಳ ಕೊನೆಯಲ್ಲೇ ತಲೆಯೆತ್ತಿವೆ. ಇನ್ನೂ ಒಂದು ತಿಂಗಳ ಕಾಲ ಇಲ್ಲಿ ಈ ಹೂವುಗಳು ಹೀಗೆಯೇ ನಳಿನಳಿಸುತ್ತಿರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.