ADVERTISEMENT

ಪರಿಶಿಷ್ಟ ಸಮುದಾಯದ ಬಾಲಕಿಗೆ ಲೈಂಗಿಕ ದೌರ್ಜನ್ಯ: ವಿಟ್ಲದಲ್ಲಿ ಎಫ್ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2025, 11:35 IST
Last Updated 26 ಮಾರ್ಚ್ 2025, 11:35 IST
<div class="paragraphs"><p>ಲೈಂಗಿಕ ದೌರ್ಜನ್ಯ –‍ಪ್ರಾತಿನಿಧಿಕ ಚಿತ್ರ</p></div>

ಲೈಂಗಿಕ ದೌರ್ಜನ್ಯ –‍ಪ್ರಾತಿನಿಧಿಕ ಚಿತ್ರ

   

ವಿಟ್ಲ (ದಕ್ಷಿಣ ಕನ್ನಡ): ಪರಿಶಿಷ್ಟ ಸಮುದಾಯದ ಬಾಲಕಿ ಜೊತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವ್ಯವಸಾಯ ಸೇವಾ ಸಹಕಾರಿ ಸಂಘವೊಂದರ ನಿರ್ದೇಶಕ ಮಹೇಶ್‌ ಭಟ್‌ ಲೈಂಗಿಕ ಕಿರುಕುಳ ನೀಡಿದ ಆರೋಪಿ. 16 ವರ್ಷದ ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿ, ಅವಾಚ್ಯ ಪದಗಳಿಂದ ಆಕೆಯನ್ನು ನಿಂದಿಸಿದ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

‘ಘಟನೆ ನಡೆದು ಎರಡು ತಿಂಗಳ ಮೇಲಾಗಿದೆ. ವಿಟ್ಲ ಠಾಣೆಗೆ ಸಂತ್ರಸ್ತೆಯ ಕಡೆಯವರು ಮಂಗಳವಾರ ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ ಹಾಗೂ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಗಳ ಅಡಿ ಎಫ್‌ಐಆರ್‌ ದಾಖಲಾಗಿದೆ. ಆರೋಪಿ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್‌ ’ಪ್ರಜಾವಾಣಿ‘ಗೆ ತಿಳಿಸಿದರು.

ಬಾಲಕಿ ಎರಡು ತಿಂಗಳಿಂದ ಶಾಲೆಗೆ ಹೋಗಿರಲಿಲ್ಲ. ಪರೀಕ್ಷೆಗೂ ಹಾಜರಾಗಿರಲಿಲ್ಲ. ಈ ಬಗ್ಗೆ ವಿಚಾರಿಸಲು ಶಿಕ್ಷಕರು ಬಾಲಕಿಯ ಮನೆಗೆ ಹೋಗಿದ್ದರು. ‘ಬಾಲಕಿಯ ಆರೋಗ್ಯ ಸರಿಯಿಲ್ಲ’ ಎಂದು ಹೇಳಿ ಮನೆಯವರು ಶಿಕ್ಷಕರನ್ನು ಹಿಂದಕ್ಕೆ ಕಳುಹಿಸಿದ್ದರು. ಬಾಲಕಿಯನ್ನು ಜೊತೆ ಮಾತನಾಡಲೂ ಅವಕಾಶ ಕಲ್ಪಿಸಿರಲಿಲ್ಲ ಎಂದು ತಿಳಿದು ಬಂದಿದೆ.

ಬಾಲಕಿಯ ಪೋಷಕರು ಕೂಲಿ ಕಾರ್ಮಿಕರು. ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಪ್ರಭಾವಿ ವ್ಯಕ್ತಿ. ಹಾಗಾಗಿ ಬಾಲಕಿಯ ಪೋಷಕರು ದೌರ್ಜನ್ಯದ ಬಗ್ಗೆ ದೂರು ನೀಡಲು ಆರಂಭದಲ್ಲಿ ಹಿಂದೇಟು ಹಾಕಿದ್ದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.