ADVERTISEMENT

ಮೀನುಗಾರಿಕೆಯಲ್ಲಿ ಪ್ರವಾಸೋದ್ಯಮ ಯೋಜನೆ ರೂಪಿಸಲಾಗುತ್ತಿದೆ: ಸಚಿವ ಎಸ್.ಅಂಗಾರ

ತಣ್ಣೀರುಬಾವಿಯಲ್ಲಿ ಅಕ್ವೇರಿಯಂ ಪಾರ್ಕ್‌: ಸಚಿವ ಎಸ್.ಅಂಗಾರ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 2:46 IST
Last Updated 3 ಜುಲೈ 2022, 2:46 IST
ಪುತ್ತೂರು ತಾಲ್ಲೂಕಿನ ಕುಂಬ್ರದಲ್ಲಿ ಮೀನುಗಾರಿಕೆ ಕುರಿತ ಕಾರ್ಯಾಗಾರವನ್ನು ಸಚಿವ ಎಸ್.ಅಂಗಾರ ಅವರು ಉದ್ಘಾಟಿಸಿದರು.
ಪುತ್ತೂರು ತಾಲ್ಲೂಕಿನ ಕುಂಬ್ರದಲ್ಲಿ ಮೀನುಗಾರಿಕೆ ಕುರಿತ ಕಾರ್ಯಾಗಾರವನ್ನು ಸಚಿವ ಎಸ್.ಅಂಗಾರ ಅವರು ಉದ್ಘಾಟಿಸಿದರು.   

ಪುತ್ತೂರು: ಮೀನುಗಾರಿಕೆಯಲ್ಲಿ ಪ್ರವಾಸೋದ್ಯಮ ಯೋಜನೆ ರೂಪಿಸಲಾಗುತ್ತಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ಹೇಳಿದರು.

ಇಲ್ಲಿನ ‘ಪುತ್ತೂರ ಮುತ್ತು ರೈತ ಉತ್ಪಾದಕ ಸಂಸ್ಥೆಯ ಆಶ್ರಯದಲ್ಲಿ ಕುಂಬ್ರದಲ್ಲಿ ಶನಿವಾರ ನಡೆದ `ಒಳನಾಡು ಮೀನುಗಾರಿಕೆಗೆ ಅವಕಾಶಗಳು ಹಾಗೂ ಇಲಾಖಾ ಸವಲತ್ತುಗಳ ಮಾಹಿತಿ' ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೀನುಗಾರಿಕೆಯನ್ನು ಪ್ರವಾ ಸೋದ್ಯಮ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ₹17 ಕೋಟಿ ವೆಚ್ಚದ ಅಕ್ವೇರಿಯಂ ಹಾಗೂ ಮಂಗಳೂರಿನ ತಣ್ಣೀರುಬಾವಿಯಲ್ಲಿ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಮತ್ತು ಮೀನುಗಾರಿಕೆ ಇಲಾಖೆ ಸೇರಿಸಿಕೊಂಡು ಅಕ್ವೇರಿಯಂ ಪಾರ್ಕ್‌ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.

ADVERTISEMENT

ಒಳನಾಡು ಮೀನುಗಾರಿಕೆಗೆ ಮಾರುಕಟ್ಟೆ ಸಮಸ್ಯೆಯಿದ್ದು, ಶೈತ್ಯಾಗಾರ ನಿರ್ಮಾಣ, ಕೃಷಿಕರಿಗೆ ಸಹಕಾರ ಹಾಗೂ ವಾಹನ, ಸಹಕಾರಿ ಸಂಘಗಳ ಮೂಲಕ ಸಾಲ ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ.

ಶಾಸಕ ಸಂಜೀವ ಮಠಂದೂರು ಮಾತನಾಡಿ, ಸುಸ್ಥಿರ ಆದಾಯ ಬರುವ ಒಳನಾಡು ಮೀನುಗಾರಿಕೆಗೆ ನಮ್ಮಲ್ಲಿನ ಕೆರೆಗಳು, ಕೊಳಗಳು ಪೂರಕವಾಗಿವೆ ಎಂದರು.

ಒಳಮೊಗ್ರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ,ಪುತ್ತೂರ ಮುತ್ತು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿದರು. ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಹರೀಶ್ ಕುಮಾರ್, ಉಪನಿರ್ದೇಕಿ ಡಾ.ಸುಶ್ಮಿತಾ ರಾವ್, ಪುತ್ತೂರ ಮುತ್ತು ರೈತ ಉತ್ಪಾದಕ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್ ಪಾಪೆಜಾಲು ಇದ್ದರು.

ಮಂಗಳೂರಿನ ಮೀನುಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಶಿವಕುಮಾರ್ ಮಗದ, ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಜೆ.ರಮೇಶ್, ಮೀನುಗಾರಿಕೆ ಇಲಾಖೆಯ ಸಹಾಯಕ ನಿ‌ರ್ದೇಶಕ ದಿಲೀಪ್ ಕುಮಾರ್ ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ಹರೀಶ್ ಬಿಜತ್ರೆ ವಂದಿಸಿದರು. ನಿ‌ರ್ದೇಶಕ ನಿತೀಶ್ ಕುಮಾರ್ ಶಾಂತಿವನ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.