ADVERTISEMENT

ಬಂದರಿನ ಸಮಸ್ಯೆ ಪರಿಹರಿಸಲು ಕ್ರಮ: ಸಚಿವ ಎಸ್.ಅಂಗಾರ

ಮಂಗಳೂರು ಬಂದರಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಎಸ್.ಅಂಗಾರ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 3:25 IST
Last Updated 24 ಫೆಬ್ರುವರಿ 2021, 3:25 IST
ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರು ಮಂಗಳೂರು ಬಂದರಿನ ದಕ್ಕೆಯನ್ನು ವೀಕ್ಷಿಸಿದರು.
ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರು ಮಂಗಳೂರು ಬಂದರಿನ ದಕ್ಕೆಯನ್ನು ವೀಕ್ಷಿಸಿದರು.   

ಮಂಗಳೂರು: ಬಂದರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಬಂದರು ಮತ್ತು ಮೀನುಗಾರಿಕಾ ಇಲಾಖೆ ಅಧಿಕಾರಿಗಳು, ಸಂಘ–ಸಂಸ್ಥೆಗಳ ಜತೆ ಸಮಾಲೋಚಿಸಿ, ಶಾಶ್ವತ ಕ್ರಮ ಕೈಗೊಳ್ಳಲಾಗುವುದು ಎಂದು ಬಂದರು ಮತ್ತು ಮೀನಗಾರಿಕಾ ಸಚಿವ ಎಸ್.ಅಂಗಾರ ಭರವಸೆ ನೀಡಿದರು.

ಮಂಗಳವಾರ ಮಂಗಳೂರು ಮೀನುಗಾರಿಕಾ ಬಂದರಿನ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಡ ದೋಣಿಗಳು 1300 ಹಾಗೂ ಯಾಂತ್ರೀಕೃತ ದೋಣಿಗಳು 1200 ಸೇರಿ ಒಟ್ಟು 2500 ದೋಣಿಗಳಿವೆ. ಸದ್ಯಕ್ಕೆ ಬಂದರಿನಲ್ಲಿ 1500ರಷ್ಟು ದೋಣಿ ನಿಲುಗಡೆಗೆ ಸ್ಥಳಾವಕಾಶವಿದೆ. ಧಕ್ಕೆಯಲ್ಲಿ ದಟ್ಟಣೆಯಾಗುವ ಕಾರಣ, ಮೀನುಗಾರಿಕಾ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ. ಹೀಗಾಗಿ, ದಕ್ಕೆಯನ್ನು ವಿಸ್ತರಿಸಿ, ದೋಣಿಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಬಂದರಿನ ಭವಿಷ್ಯದ ಅಭಿವೃದ್ಧಿ ದೃಷ್ಟಿಯಿಂದ ಸಮಗ್ರ ಯೋಜನೆ ರೂಪಿಸಲಾಗುವುದು ಎಂದರು.

ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನಗಾರಿಕಾ ದೋಣಿಗಳಿಗೆ ಸುಮಾರು 29,071 ಲೀಟರ್ ಡೀಸೆಲ್ ವಿತರಿಸಲಾಗಿದೆ. 1,019 ಫಲಾನುಭವಿಗಳ ಬ್ಯಾಂಕ್ ಖಾತೆಗೆ ₹ 34.05 ಕೋಟಿ ಮೊತ್ತದ ಸಹಾಯಧನ ವರ್ಗಾಯಿಸಲಾಗಿದೆ. ಮೀನುಗಾರಿಕಾ ಕೋಡಿ ರಸ್ತೆಗಳ ಅಭಿವೃದ್ಧಿಗೆ ಜಿಲ್ಲೆಯಲ್ಲಿ ₹ 2.97 ಕೋಟಿ ಅನುದಾನ ಮಂಜೂರು ಆಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಅವರು, ಮೂರನೇ ಹಂತದ ಜಟ್ಟಿ ನಿರ್ಮಾಣಕ್ಕೆ ಸಚಿವರ ಜೊತೆಗೂಡಿ ಪ್ರಯತ್ನಿಸಲಾಗುವುದು ಎಂದರು. ಶಾಸಕ ಡಾ.ವೈ.ಭರತ್ ಶೆಟ್ಟಿ, ಪಾಲಿಕೆ ಸದಸ್ಯ ಅಬ್ದುಲ್ ಲತೀಫ್, ಮೀನುಗಾರಿಕಾ ಇಲಾಖೆ ನಿರ್ದೇಶಕ ಎ. ರಾಮಾಚಾರಿ, ಪರ್ಸಿನ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಶಶಿಕುಮಾರ್ ಬೆಂಗ್ರೆ, ಹಸಿ ಮೀನುಗಾರರ ಸಂಘದ ಇಸ್ಮಾಯಿಲ್ ಇದ್ದರು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಕಿಟ್, ಪ್ರಮಾಣಪತ್ರ ವಿತರಿಸಲಾಯಿತು.ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಿ ಪಾಶ್ವನಾಥ್ ಸ್ವಾಗತಿಸಿದರು. ಬಂದರು ಇಲಾಖೆಯ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ ವಂದಿಸಿದರು.

ಬಂದರಿನ ಸಮಸ್ಯೆಗಳು, ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಸಚಿವರು, ಅಧಿಕಾರಿಗಳಿಂದ ಮಾಹಿತಿ ಪಡೆದರು. ವಿವಿಧ ಸಂಘ–ಸಂಸ್ಥೆಗಳ ಪ್ರಮುಖರು ಸಚಿವರನ್ನು ಸನ್ಮಾನಿಸಿದರು.

‘ಉಳಿಕೆ ಕಾಮಗಾರಿ ಅನುಷ್ಠಾನಗೊಳಿಸಿ’

ಮೀನುಗಾರಿಕಾ ಬಂದರಿನ 3ನೇ ಹಂತದ ವಿಸ್ತರಣೆ ಅನುಮೋದನೆಗೊಂಡು ದಶಕ ಕಳೆದಿದೆ. ಹಾಲಿ ಇರುವ 1 ಮತ್ತು 2ನೇ ಹಂತದ ದಕ್ಕೆಯಲ್ಲಿ ಸ್ಥಳದ ಅಭಾವ ಇರುವುದರಿಂದ, ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ಉಳಿಕೆ ಕಾಮಗಾರಿಯ ₹ 22 ಕೋಟಿ ಅಂದಾಜುಪಟ್ಟಿಗೆ ಶೀಘ್ರ ಸಚಿವ ಸಂಪುಟದ ಅನುಮೋದನೆ ಪಡೆದು, ಅನುಷ್ಠಾನಗೊಳಿಸಬೇಕು ಎಂದು ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ಸಚಿವರನ್ನು ವಿನಂತಿಸಿದರು.

ಡೀಸೆಲ್ ದರ ಏರಿಕೆಯಿಂದ ಮೀನುಗಾರಿಕಾ ಬೋಟ್‌ಗಳ ನಿರ್ವಹಣೆ ಕಷ್ಟವಾಗಿದೆ. ಬೋಟ್‌ಗಳಿಗೆ ಬಳಸುವ ಡೀಸೆಲ್ ಮೇಲಿನ ಸಹಾಯಧನ ವಿತರಣೆ ಮೂರು ತಿಂಗಳುಗಳಿಂದ ಬಾಕಿ ಇದೆ. ಆದಷ್ಟು ಶೀಘ್ರ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.