ADVERTISEMENT

ಮೀನುಗಾರಿಕೆಗೆ ಗರಿಷ್ಠ ಪ್ರೋತ್ಸಾಹ: ಸಚಿವ ಎಸ್.ಅಂಗಾರ

ಉಪವಿಭಾಗ ವ್ಯಾಪ್ತಿ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 5:24 IST
Last Updated 5 ಜನವರಿ 2023, 5:24 IST
ಪುತ್ತೂರು ತಾಲ್ಲೂಕು ಪಂಚಾಯಿತಿ ಕಟ್ಟಡದಲ್ಲಿ ಆರಂಭಿಸಲಾದ ಉಪವಿಭಾಗ ವ್ಯಾಪ್ತಿಯ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಚಿವ ಎಸ್.ಅಂಗಾರ ಬುಧವಾರ ಉದ್ಘಾಟಿಸಿದರು. ಮಂಗಳೂರು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಹರೀಶ್ ಕುಮಾರ್, ಉಪನಿರ್ದೇಶಕಿ ಡಾ. ಸುಶ್ಮಿತಾ ರಾವ್ ಮತ್ತಿತರರು ಇದ್ದರು
ಪುತ್ತೂರು ತಾಲ್ಲೂಕು ಪಂಚಾಯಿತಿ ಕಟ್ಟಡದಲ್ಲಿ ಆರಂಭಿಸಲಾದ ಉಪವಿಭಾಗ ವ್ಯಾಪ್ತಿಯ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಚಿವ ಎಸ್.ಅಂಗಾರ ಬುಧವಾರ ಉದ್ಘಾಟಿಸಿದರು. ಮಂಗಳೂರು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಹರೀಶ್ ಕುಮಾರ್, ಉಪನಿರ್ದೇಶಕಿ ಡಾ. ಸುಶ್ಮಿತಾ ರಾವ್ ಮತ್ತಿತರರು ಇದ್ದರು   

ಪುತ್ತೂರು: ‘ಒಳನಾಡು ಮೀನುಗಾರಿಕೆ ಉತ್ತೇಜನಕ್ಕಾಗಿ ಇಲಾಖೆಯ ವತಿಯಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕಡಿಮೆ ಜಾಗ ಮತ್ತು ಕಡಿಮೆ ವೆಚ್ಚದಲ್ಲಿ ಮಾಡಲು ಸಾಧ್ಯವಿರುವ ಮೀನು ಕೃಷಿಗೆ ರೈತರು ಮುಂದಾಗಬೇಕು’ ಎಂದು ರಾಜ್ಯ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಸಲಹೆ ನೀಡಿದರು.

ಪುತ್ತೂರು ತಾಲ್ಲೂಕು ಪಂಚಾಯಿತಿ ಕಟ್ಟಡದಲ್ಲಿ ಆರಂಭಿಸಲಾದ ಉಪ ವಿಭಾಗ ವ್ಯಾಪ್ತಿಯ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ವಲ್ಪ ಜಾಗದಲ್ಲೇ, ಸಣ್ಣ ಕುಟುಂಬವೂ ಮೀನು ಸಾಕಾಣಿಕೆ ಮಾಡಿ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ. ನೀರಿನ ವ್ಯವಸ್ಥೆ ಇರುವ ಕೃಷಿಕರು, ಮೀನು ಸಾಕಾಣಿಕೆಗೆ ಮುಂದೆ ಬರಬೇಕು. ಇಲಾಖೆಯ ಅಧಿಕಾರಿಗಳು ನೀರಿನ ಲಭ್ಯತೆ ಇರುವ ಕೃಷಿಕರ ಮನೆಬಾಗಿಲಿಗೆ ಭೇಟಿ ನೀಡಿ, ಇಲಾಖೆಯ ಸೌಲಭ್ಯಗಳ ಮಾಹಿತಿ ನೀಡುವ ಕೆಲಸ ಮಾಡಲಿದ್ದಾರೆ ಎಂದರು.

ADVERTISEMENT

ರಾಜ್ಯದಲ್ಲಿ ಪ್ರಸಕ್ತ ಮೀನಿನ ಮರಿಗಳ ಕೊರತೆಯಿದ್ದು, ರಾಜ್ಯದಲ್ಲೇ ಮೀನಿನ ಮರಿಗಳನ್ನು ಉತ್ಪಾದಿಸಲು ಕ್ರಮ ಕೈಗೊಳ್ಳಲಾಗಿದೆ. ಬಾಗಲಕೋಟೆಯ ಆಲಮಟ್ಟಿಯಲ್ಲಿ ನೀರಾವರಿ ನಿಗಮವು 25 ಎಕರೆ ಜಮೀನನ್ನು ಮೀನುಗಾರಿಕಾ ಇಲಾಖೆಗೆ ನೀಡಿದೆ. ಆ ಜಮೀನಿನಲ್ಲಿ ಮೀನು ಮರಿ ಉತ್ಪಾದನೆ ಕಾರ್ಯ ಆರಂಭವಾಗಲಿದೆ ಎಂದರು.

ಮಂಗಳೂರು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಹರೀಶ್ ಕುಮಾರ್, ಉಪನಿರ್ದೇಶಕಿ ಡಾ. ಸುಶ್ಮಿತಾ ರಾವ್, ಪುತ್ತೂರು ಉಪವಿಭಾಗದ ಸಹಾಯಕ ನಿರ್ದೇಶಕಿ ಮಂಜುಳಾಶ್ರೀ ಶೆಣೈ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಹರೀಶ್ ಬಿಜತ್ರೆ, ಬೂಡಿಯಾರು ರಾಧಾಕೃಷ್ಣ ರೈ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.