ADVERTISEMENT

ತರಹೇವಾರಿ ಹೂ, ತರಕಾರಿ ಗಿಡಗಳ ಆಕರ್ಷಣೆ

ಮಂಗಳೂರಿನ ಕದ್ರಿ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 16:18 IST
Last Updated 24 ಜನವರಿ 2020, 16:18 IST
ಮಂಗಳೂರಿನ ಕದ್ರಿ ಉದ್ಯಾನದಲ್ಲಿ ಹಮ್ಮಿಕೊಂಡಿರುವ ಫಲಪುಷ್ಟ ಪ್ರದರ್ಶನವನ್ನು ಶಾಸಕ ವೇದವ್ಯಾಸ ಕಾಮತ್‌ ಹಾಗೂ ಐವನ್‌ ಡಿಸೋಜ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಸೆಲ್ವಮಣಿ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಚ್‌. ಆರ್‌. ನಾಯಕ್‌ ಇದ್ದರು.
ಮಂಗಳೂರಿನ ಕದ್ರಿ ಉದ್ಯಾನದಲ್ಲಿ ಹಮ್ಮಿಕೊಂಡಿರುವ ಫಲಪುಷ್ಟ ಪ್ರದರ್ಶನವನ್ನು ಶಾಸಕ ವೇದವ್ಯಾಸ ಕಾಮತ್‌ ಹಾಗೂ ಐವನ್‌ ಡಿಸೋಜ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಸೆಲ್ವಮಣಿ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಚ್‌. ಆರ್‌. ನಾಯಕ್‌ ಇದ್ದರು.   

ಮಂಗಳೂರು: ತರಹೇವಾರಿ ಬಣ್ಣ ಬಣ್ಣದ ಹೂ, ತರಕಾರಿ ಗಿಡ, ಆಯುರ್ವೇದ ಪದಾರ್ಥ, ತಿಂಡಿ, ತಿನಿಸು, ರುಚಿ ರುಚಿಯಾದ ಉಪ್ಪಿನಕಾಯಿಗಳ ಘಮಲು ಕದ್ರಿ ಉದ್ಯಾನದ ನೋಡುಗರನ್ನು ಆಕರ್ಷಿಸುತ್ತಿವೆ. ಜತೆಗೆ ತಾರಸಿ ತೋಟ, ಕೈತೋಟಕ್ಕೆ ಬೇಕಾದ ವಿವಿಧ ಜಾತಿಯ ಬೀಜ, ಕೃಷಿಕರು ಬೆಳೆದು ತಂದ ಹಣ್ಣು, ಹೂ, ತರಕಾರಿ ಗಿಡಗಳ ಖರೀದಿಗೆ ಜನರು ಮುಗಿಬಿದ್ದರು. ಈ ವರ್ಷ ಕೂಡಾ ಫಲಪುಷ್ಟ ಪ್ರದರ್ಶನದಲ್ಲಿ ಒಟ್ಟು 134 ಮಳಿಗೆಗಳನ್ನು ತೆರೆಯಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಬಂದಿರುವ ಜನರು ಮಳಿಗೆಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.

ತೋಟಗಾರಿಕೆ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಕದ್ರಿ ಉದ್ಯಾನ ಅಭಿವೃದ್ಧಿ ಸಮಿತಿ ವತಿಯಿಂದ ಸಿರಿ ತೋಟಗಾರಿಕೆ ಸಂಘದ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನಕ್ಕೆ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಸೆಲ್ವಮಣಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಆರ್.ನಾಯಕ್‌ ಚಾಲನೆ ನೀಡಿದರು.

ತೋಟಗಾರಿಕಾ ಇಲಾಖೆ ವತಿಯಿಂದ ಬೆಳೆಸಲಾಗಿರುವ ವಿವಿಧ ಜಾತಿಯ ಆಕರ್ಷಕ ಹೂಗಳ ಪ್ರದರ್ಶನದ ಜತೆಗೆ ವಿವಿಧ ನರ್ಸರಿಗಳ ಹೂ, ತೋಟಗಾರಿಕಾ ಬೆಳೆಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಕೂಡಾ ಪ್ರದರ್ಶನದಲ್ಲಿ ಮಾಡಲಾಗಿದೆ. ಬೀಜ- ಗೊಬ್ಬರ ಮಾರಾಟಗಾರರು, ಯಂತ್ರೋಪಕರಣ ಮಾರಾಟ ಮಳಿಗೆ, ಸಾವಯವ ಉತ್ಪನ್ನಗಳು, ತೋಟಗಾರಿಕೆ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಉದ್ದಿಮೆದಾರ ಮಳಿಗೆಗಳು ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆ ಆಗಿವೆ. ಅಣಬೆ ಮಾದರಿಗಳು, ತೋಟಗಾರಿಕೆ ಬೆಳೆಗಳಲ್ಲಿ ಕಾಣ ಸಿಗುವ ಕೀಟಗಳ ಮಾದರಿ, ತರಕಾರಿ ಕೆತ್ತನೆ, ಜೇನು ಸಾಕಾಣಿಕೆ ಮಾದರಿ, ಜೇನು ಕೃಷಿ ಮಾಹಿತಿ ಹಾಗೂ ಜೇನಿನ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಕೂಡಾ ಜೋರಾಗಿದೆ.

ADVERTISEMENT

ತೋಟಗಾರಿಕೆ ಇಲಾಖಾ ವತಿಯಿಂದ ಬೆಳೆಸಲಾಗಿರುವ ಪಾಲಕ್, ಕ್ಯಾಬೇಜ್, ಮೂಲಂಗಿ, ಕೆಂಪು ಬಸಳೆ, ಅಲಸಂಡೆ, ಬೆಂಡೆ, ಹೀರೆ, ಸೋರೆ, ಹಾಗಲಕಾಯಿ, ಕುಂಬಳ ಕಾಯಿ, ಪಡುವಲಕಾಯಿ ಫಲ ಬಿಡುವ ಹಂತದಲ್ಲಿವೆ.

ತರಕಾರಿ- ಹೂ- ಬೀಜ ಗುರುತಿಸುವ ಸ್ಪರ್ಧೆ: ಜ.25 ರಂದು ಮಧ್ಯಾಹ್ನ 3 ರಿಂದ ಮಕ್ಕಳಿಗೆ ತರಕಾರಿ- ಹೂ- ಹಣ್ಣು- ಬೀಜಗಳನ್ನು ಗುರುತಿಸುವ ಸ್ಪರ್ಧೆ ನಡೆಯಲಿದೆ. ಸಮವಸ್ತ್ರ ಧರಿಸಿದ ಶಾಲಾ ಮಕ್ಕಳಿಗೆ, ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಹಾಗೂ ಅಂಗವಿಕಲರಿಗೆ ಉಚಿತ ಪ್ರವೇಶವಿದೆ.

ಮೊಸಳೆ, ಬದನೆ ನವಿಲು
ಹಾಗಲಕಾಯಿ ಕಹಿ ರುಚಿ, ಇದನ್ನು ಕಂಡರೆ ಕೆಲ ಜನರು ಮೂಗು ಮುರಿಯುತ್ತಾರೆ. ಆದರೆ, ಕಲಾವಿದರೊಬ್ಬರು ಹಾಗಲಕಾಯಿ ನಾಜೂಕಾಗಿ ಜೋಡಿಸಿ ಕೆತ್ತನೆ ಮೂಲಕ ಮೊಸಳೆ ರೂಪ ನೀಡಿದ್ದಾರೆ. ಹಾಗಲಕಾಯಿ ಮಾತ್ರವಲ್ಲ, ನೇರಳೆ ಬಣ್ಣದ ಬದನೆಕಾಯಿ, ಕ್ಯಾರೆಟ್ ಹಾಗೂ ಅಶೋಕ ಮರದ ಎಲೆ ಬಳಸಿ ನವಿಲು, ಕಲ್ಲಂಗಡಿಯಲ್ಲಿ ಹೂವುಗಳ ಚಿತ್ತಾರದ ಪ್ರಪಂಚವೇ ಅರಳಿದೆ. ಪ್ರೇಕ್ಷಕರು ಈ ಸ್ಟಾಲ್‌ಗಳ ಬಳಿ ಹೋಗಿ ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.