ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನೂರಾರು ಯುವಕರಿಂದ ₹1.82 ಕೋಟಿಗೂ ಅಧಿಕ ಹಣವನ್ನು ಪಡೆದು ವಂಚಿಸಿದ ಪ್ರಕರಣದ ಅರೋಪಿಯನ್ನು ಇಲ್ಲಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮುಂಬೈ ನಿವಾಸಿ ಮಸೀವುಲ್ಲಾ ಅತಿವುಲ್ಲಾ ಖಾನ್ (36 ವರ್ಷ) ಬಂಧಿತ ಆರೋಪಿ. ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ₹1.65 ಲಕ್ಷ ಹಣವನ್ನು ಪಡೆದು ವಂಚಿಸಿದ ಬಗ್ಗೆ ಸಂತ್ರಸ್ತರೊಬ್ಬರು ನಗರದ ಪೂರ್ವ ಪೊಲೀಸ್ ಠಾಣೆಗೆ ಈಚೆಗೆ ದೂರು ನೀಡಿದ್ದು ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು. ಆರೋಪಿಯು ಹಲವು ಯುವಕರಿಂದ ಇದೇ ರೀತಿ ಸುಮಾರು ₹1.82 ಕೋಟಿಗೂ ಅಧಿಕ ಹಣವನ್ನು ಪಡೆದು ವಂಚಿಸಿರುವುದು ತನಿಖೆಯಲ್ಲಿ ಗೊತ್ತಾಗಿತ್ತು.
‘ವಿದೇಶದಲ್ಲಿ ಉದ್ಯೋಗ ಕೊಡಿಸುವ ಬಗ್ಗೆ ಯಾವುದೇ ಪರವಾನಗಿ ಪಡೆಯದೇ ಕಂಪನಿ ಆರಂಭಿಸಿದ ಕುರಿತು ಕೇಂದ್ರ ವಿದೇಶಾಂಗ ಸಚಿವಾಲಯದ ವಲಸೆ ವಿಭಾಗದ ಅಧಿಕಾರಿಗಳು ಆರೋಪಿಯ ವಿರುದ್ಧ ದೂರು ನೀಡಿದ್ದು, ಈ ಬಗ್ಗೆ ನಗರ ಪೂರ್ವ ಠಾಣೆಯಲ್ಲಿ 2024ನೇ ಡಿಸೆಂಬರ್‌ನಲ್ಲಿ ಪ್ರಕರಣ ದಾಖಲಾಗಿದೆ. ಈ ಎರಡೂ ಪ್ರಕರಣಗಳನ್ನು ಹೆಚ್ಚಿನ ತನಿಖೆ ಸಲುವಾಗಿ ಸಿಸಿಬಿ ಘಟಕಕ್ಕೆ ವರ್ಗಾಯಿಸಲಾಗಿತ್ತು’ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ನಿರ್ವಹಿಸದ ಆರೋಪದ ಮೇಲೆ ನಗರ ಪೂರ್ವ ಠಾಣೆಯ ಇನ್‌ಸ್ಪೆಕ್ಟರ್ ಸೋಮಶೇಖರ್ ಜಿ.ಸಿ. ಹಾಗೂ ಹಿಂದೆ ಪೂರ್ವ ಠಾಣೆಯಲ್ಲಿದ್ದು, ಪ್ರಸ್ತುತ ಬರ್ಕೆ ಠಾಣೆಯಲ್ಲಿರುವ ಪಿಎಸ್‌ಐ ಉಮೇಶ್ ಕುಮಾರ್ ಎಂ.ಎನ್ ಅವರು ಅಮಾನತಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.