ಬಿ.ಸುಬ್ಬಯ್ಯ ಶೆಟ್ಟಿ
ಮಂಗಳೂರು: ರಾಜ್ಯದಲ್ಲಿ ಭೂಸುಧಾರಣಾ ಕಾಯ್ದೆ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ ಬಿ.ಸುಬ್ಬಯ್ಯ ಶೆಟ್ಟಿ (91 ವರ್ಷ) ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಬಾಕ್ರಬೈಲು ಗ್ರಾಮದಲ್ಲಿ 1934ರಲ್ಲಿ ಬಿ.ಸುಬ್ಬಯ್ಯ ಶೆಟ್ಟಿ ಜನಿಸಿದ್ದರು. ಸುರತ್ಕಲ್ ವಿಧಾನಸಭಾ ಕ್ಷೇತ್ರದಲ್ಲಿ 1972ರ ಹಾಗೂ 1978ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ದೇವರಾಜ ಅರಸು ನೇತೃತ್ವದ ಸರ್ಕಾರದಲ್ಲಿ ಭೂ ಸುಧಾರಣಾ ಸಚಿವರಾಗಿದ್ದರು. ಸರ್ಕಾರವು ಜಾರಿಗೆ ತಂದಿದ್ದ ಭೂ ಸುಧಾರಣೆ ನೀತಿಯನ್ನು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತರಲು ಶ್ರಮಿಸಿದ್ದರು. ರೈತರಿಗೆ ಕೃಷಿ ಭೂಮಿಯ ಮಾಲೀಕತ್ವವನ್ನು ನೀಡುವ ಕ್ರಾಂತಿಕಾರಿ ಪರಿಕಲ್ಪನೆಯನ್ನು ಜಾರಿಗೊಳಿಸಲು ಆರಂಭದಲ್ಲಿ ಸ್ವಂತ ಭೂಮಿಯನ್ನು ಬಿಟ್ಟುಕೊಟ್ಟ ಭೂಮಾಲೀಕರಲ್ಲಿ ಇವರೂ ಒಬ್ಬರು. ಬಳಿಕ ರಾಜ್ಯ ಸರ್ಕಾರದಲ್ಲಿ ಮಾಹಿತಿ, ಇಂಧನ ಹಾಗೂ ಶಿಕ್ಷಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಬಳಿಕ ಜನತಾ ಪಕ್ಷವನ್ನು ಸೇರಿ ಬಳಿಕ ರಾಜಕೀಯದಿಂದ ನಿವೃತ್ತರಾಗಿದ್ದರು ಎಂದು ಅವರ ಸಮಕಾಲೀನ ಮುಖಂಡರು ನೆನಪಿಸಿಕೊಳ್ಳುತ್ತಾರೆ.
ಇಲ್ಲಿನ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಬಿ.ಎಸ್.ಸಿ ಪದವಿ ಹಾಗೂ ಮದ್ರಾಸ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದರು. ಸುಬ್ಬಯ್ಯ ಅವರು ರಾಜ್ಯ ಸರ್ಕಾರವು ನೀಡುವ 2014 ನೇ ಸಾಲಿನ ದಿ.ದೇವರಾಜ ಅರಸು ಪ್ರಶಸ್ತಿಗೆ ಭಾಜನರಾಗಿದ್ದರು. ಶಾಂತವೇರಿ ಗೋಪಾಲ ಗೌಡ ಪ್ರಶಸ್ತಿ ಹಾಗೂ ದ.ರಾ.ಬೇಂದ್ರೆ ಪ್ರಶಸ್ತಿಯನ್ನೂ ಪಡೆದಿದ್ದರು.
ಅವರ ಪತ್ನಿ ಶಾಲಿನಿ ಶೆಟ್ಟಿ ಈಚೆಗೆ ನಿಧನರಾಗಿದ್ದರು. ಅವರ ಇಬ್ಬರು ಪುತ್ರಿಯರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.