ADVERTISEMENT

ನಾರಾಯಣ ಗುರು ವೃತ್ತಕ್ಕೆ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 14:05 IST
Last Updated 24 ಜುಲೈ 2022, 14:05 IST
ನಗರದ ಲೇಡಿಹಿಲ್ ಶಾಲೆಯ ಹತ್ತಿರ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಕಾಮಗಾರಿಗೆ ವಿ. ಸುನಿಲ್ ಕುಮಾರ್ ಭಾನುವಾರ ಶಿಲಾನ್ಯಾಸ ನೆರವೇರಿಸಿದರು. ದಿವಾಕರ್‌, ಹರಿಕೃಷ್ಣ ಬಂಟ್ವಾಳ್‌, ನಿತಿನ್‌ ಕುಮಾರ್‌, ರಾಮಚಂದ್ರ ಮಿಜಾರ್‌, ವೈ.ಭರತ್‌ ಶೆಟ್ಟಿ, ದಿ.ವೇದವ್ಯಾಸ ಕಾಮತ್‌, ಪ್ರೇಮಾನಂದ ಶೆಟ್ಟಿ, ಶಕೀಲಾ ಕಾವ, ಪೂರ್ಣಿಮಾ, ಜಯಲಕ್ಷ್ಮೀ ವಿ. ಹಾಗೂ ಇತರರು ಇದ್ದಾರೆ 
ನಗರದ ಲೇಡಿಹಿಲ್ ಶಾಲೆಯ ಹತ್ತಿರ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಕಾಮಗಾರಿಗೆ ವಿ. ಸುನಿಲ್ ಕುಮಾರ್ ಭಾನುವಾರ ಶಿಲಾನ್ಯಾಸ ನೆರವೇರಿಸಿದರು. ದಿವಾಕರ್‌, ಹರಿಕೃಷ್ಣ ಬಂಟ್ವಾಳ್‌, ನಿತಿನ್‌ ಕುಮಾರ್‌, ರಾಮಚಂದ್ರ ಮಿಜಾರ್‌, ವೈ.ಭರತ್‌ ಶೆಟ್ಟಿ, ದಿ.ವೇದವ್ಯಾಸ ಕಾಮತ್‌, ಪ್ರೇಮಾನಂದ ಶೆಟ್ಟಿ, ಶಕೀಲಾ ಕಾವ, ಪೂರ್ಣಿಮಾ, ಜಯಲಕ್ಷ್ಮೀ ವಿ. ಹಾಗೂ ಇತರರು ಇದ್ದಾರೆ    

ಮಂಗಳೂರು: ನಗರದ ಲೇಡಿಹಿಲ್ ಶಾಲೆಯ ಹತ್ತಿರದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಅವರು ಭಾನುವಾರ ಶಿಲಾನ್ಯಾಸ ನೆರವೇರಿಸಿದರು.

‘ನಾರಾಯಣ ಗುರುಗಳು ಪಾದಸ್ಪರ್ಶ ಮಾಡಿದ ಮಂಗಳೂರಿನ ಪ್ರಮುಖ ರಸ್ತೆಯೊಂದಕ್ಕೆ ಈ ಹಿಂದೆಯೇ ಬ್ರಹ್ಮಶ್ರೀ ನಾರಾಯಣ ಗುರು ಅವರ ಹೆಸರು ಇಡಲಾಗಿತ್ತು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸಹಭಾಗಿತ್ವದೊಂದಿಗೆ ಗುರುಗಳ ಹೆಸರಿನಲ್ಲಿ ₹ 48 ಲಕ್ಷ ವೆಚ್ಚದಲ್ಲಿ ಸುಂದರವಾದ ವೃತ್ತವನ್ನು ನಿರ್ಮಿಸಲಾಗುತ್ತದೆ. ಅವರ ಸುಂದರ ಪುತ್ಥಳಿಯನ್ನು ಇಲ್ಲಿ ನಿರ್ಮಿಸಲಾಗುವುದು. ಮುಂದಿನ ನವರಾತ್ರಿಗೆ ಕಾಮಗಾರಿ ಪೂರ್ಣವಾಗಲಿದೆ. ಗುರುಗಳ ಹೆಸರಿನ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸುವುದು ಮತ್ತು ಅಭಿವೃದ್ಧಿಗೆ ಹೊಸ ಆಯಾಮ ನೀಡುವುದು ನಮ್ಮ ಉದ್ದೇಶ’ ಎಂದರು.

'ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ 'ಅಮೃತ ಭಾರತಿಗೆ ಕನ್ನಡದಾರತಿ' ವಿಶೇಷ ಅಭಿಯಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದೆ. ಅದಕ್ಕೆ ಪೂರಕವಾಗಿ ಸ್ವಾತಂತ್ರ್ಯದ ಹೋರಾಟಕ್ಕೆ ಕರ್ನಾಟಕದ ಕೊಡುಗೆ ಕುರಿತೂ ಜನರಿಗೆ ತಿಳಿಸಿಕೊಡಲಾಗುತ್ತಿದೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ರಂಗಾಯಣದ ಕಲಾವಿದರು ಮೂಲಕ ಕರ್ನಾಟಕದ ಹೋರಾಟಗಳನ್ನು ತಿಳಿಸುವ ನಾಟಕ ಪ್ರದರ್ಶಿಸಲಿದ್ದಾರೆ. ಹೋರಾಟ ಕುರಿತ ಚಲನಚಿತ್ರ ಪ್ರದರ್ಶನಗಳು, ಕರ ಪತ್ರದ ಹಂಚಿಕೆ, ರಥ ಯಾತ್ರೆ ಕಾರ್ಯಕ್ರಮಗಳೂ ನಡೆಯಲಿವೆ’ ಎಂದರು.

ADVERTISEMENT

‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದಲ್ಲಿ 1 ಕೋಟಿ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರುವಂತೆ ಮಾಡುವ ಉದ್ದೇಶವಿದೆ. ಆ.12 ರಿಂದ ಎಲ್ಲರ ಮನೆಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಬೇಕು. ರಾಷ್ಟ್ರ ಧ್ವಜದ ಮೆರವಣಿಗೆಗಳನ್ನು ನಡೆಸಬೇಕು’ ಎಂದು ಅವರು ಸಾರ್ವಜನಿಕರಲ್ಲಿ ವಿನಂತಿ ಮಾಡಿದರು.

‘ಪ್ಲಾಸ್ಟಿಕ್‌ ಧ್ವಜವನ್ನು ಬಳಸಬಾರದು. ಧ್ವಜವನ್ನು ಖಾದಿ ಭಂಡಾರದಿಂದ ಖರೀದಿಸಲು ಆದ್ಯತೆ ನೀಡುತ್ತೇವೆ. ಹತ್ತಿ ಬಟ್ಟೆ ಬಳಸಿ ಸ್ಥಳೀಯ ಸ್ತ್ರೀಶಕ್ತಿ ಗುಂಪುಗಳ ಮೂಲಕ ಧ್ವಜ ತಯಾರಿಸಲು ಕ್ರಮವಹಿಸಿದ್ದೇವೆ’ ಎಂದರು.

ಶಾಸಕರಾದ ವೇದವ್ಯಾಸ್ ಕಾಮತ್, ‘ಬಿರುವೆರ್‌ ಕುಡ್ಲ, ಬಜರಂಗದಳ ಸೇರಿದಂತೆ ನಾಲ್ಕು ಸಂಸ್ಥೆಗಳ ಮನವಿ ಮೇರೆಗೆ ನಾರಾಯಣ ಗುರು ವೃತ್ತ ನಿರ್ಮಿಸುವ ತೀರ್ಮಾನ ಕೈಗೊಂಡಿದ್ದೇವೆ’ ಎಂದರು.

ಶಾಸಕ ಡಾ.ಭರತ್ ಶೆಟ್ಟಿ, ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯರಾದ ದಿವಾಕರ್‌, ಶಕೀಲಾ ಕಾವ, ಪೂರ್ಣಿಮಾ, ಜಯಲಕ್ಷ್ಮೀ ವಿ, ಬಿಜೆಪಿ ಮುಖಂಡರಾದ ಹರಿಕೃಷ್ಣ ಬಂಟ್ವಾಳ್‌, ನಿತಿನ್‌ ಕುಮಾರ್‌, ರಾಮಚಂದ್ರ ಮಿಜಾರ್‌ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.