ADVERTISEMENT

ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ಬಸ್ತಿ ವಾಮನ ಶೆಣೈ ನಿಧನ

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 11:12 IST
Last Updated 2 ಜನವರಿ 2022, 11:12 IST
ಬಸ್ತಿ ವಾಮನ ಶೆಣೈ
ಬಸ್ತಿ ವಾಮನ ಶೆಣೈ   

ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ, ಕರ್ನಾಟಕ ಕೊಂಕಣಿ ಸಾಹಿತ್ಯ ಪರಿಷತ್‌ ಸ್ಥಾಪನೆಗೆ ಪ್ರೇರಕ ಶಕ್ತಿಯಾಗಿದ್ದ ಹೋರಾಟಗಾರ ಬಸ್ತಿ ವಾಮನ ಶೆಣೈ (87) ಅವರು ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರ ಬೆಳಿಗ್ಗೆ ನಿಧನರಾದರು.

1980ರಿಂದ ಕೊಂಕಣಿ ಭಾಷಾ ಮಂಡಲದಲ್ಲಿ ತೊಡಗಿಸಿಕೊಂಡಿದ್ದ ಶೆಣೈ ಅವರು ಕೊಂಕಣಿ ಅಕಾಡೆಮಿ ಸ್ಥಾಪನೆಗೆ ಆಗ್ರಹಿಸಿ ಜಾಥಾ, ಚಳವಳಿಗಳನ್ನು ಸಂಘಟಿಸಿದ್ದರು. ಅವರ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ 1994-95ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಸ್ತಿತ್ವಕ್ಕೆ ಬಂದಿತ್ತು. ಎರಡು ಅವಧಿಗೆ ಅವರು ಈ ಅಕಾಡೆಮಿಯ ಅಧ್ಯಕ್ಷರೂ ಆಗಿದ್ದರು. ಶೆಣೈ ಅವರು 1993ರಲ್ಲಿ ಕರ್ನಾಟಕ ಕೊಂಕಣಿ ಭಾಷಾ ಮಂಡಲದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.

1995ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಪ್ರಥಮ ವಿಶ್ವ ಕೊಂಕಣಿ ಸಮಾವೇಶದಲ್ಲಿ ಶೆಣೈ ಅವರಿಗೆ ‘ವಿಶ್ವ ಕೊಂಕಣಿ ಸರ್ದಾರ್’ ಬಿರುದು ನೀಡಿ ಗೌರವಿಸಲಾಗಿತ್ತು. 2004ರಲ್ಲಿ ಅವರು ಅಖಿಲ ಭಾರತ ಕೊಂಕಣಿ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ADVERTISEMENT

ವಾಮನ ಶೆಣೈ ಅವರ ಅಂತ್ಯ ಸಂಸ್ಕಾರವು ಸೋಮವಾರ (ಜ.3) ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಬೆಳಿಗ್ಗೆ 9ರಿಂದ 10ರವರೆಗೆ ಸಾರ್ವಜನಿಕರ ವೀಕ್ಷಣೆಗಾಗಿ ಪಾರ್ಥಿವ ಶರೀರವನ್ನು ವಿಶ್ವ ಕೊಂಕಣಿ ಕೇಂದ್ರದಲ್ಲಿ ಇಡಲಾಗುವುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.