ADVERTISEMENT

ಮಂಗಳೂರು | ಕಾರು ಮಾರಾಟದ ನೆಪದಲ್ಲಿ ವಂಚನೆ: ಆರೋಪಿ ಬಂಧನ

ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ನೀಡಿ ₹ 2.50 ಲಕ್ಷ ಪಡೆದಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 5:31 IST
Last Updated 30 ಜೂನ್ 2025, 5:31 IST
ರವಿಚಂದ್ರ ಎಂ.ರೇವಣಕರ
ರವಿಚಂದ್ರ ಎಂ.ರೇವಣಕರ   

ಮಂಗಳೂರು: ಒಎಲ್‌ಎಕ್ಸ್ ಆ್ಯಪ್‌ ಬಳಸಿ  ಕಾರು ಮಾರಾಟದ ಹೆಸರಿನಲ್ಲಿ ಹಣ ಪಡೆದು ವಂಚನೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ರವಿಚಂದ್ರ ಎಂ.ರೇವಣಕರ (29)  ಬಂಧಿತ ಆರೋಪಿ. ಕಾರು ಮಾರಾಟಕ್ಕಿದೆ ಎಂದು ಒಎಲ್‌ಎಕ್ಸ್‌ ನಲ್ಲಿ ಜಾಹೀರಾತು ನೀಡಿದ್ದ ಆರೋಪಿ, ₹2.50 ಲಕ್ಷ  ಹಣ ಪಡೆದು ಇಲ್ಲಿನ ವ್ಯಕ್ತಿಯೊಬ್ಬರಿಗೆ ವಂಚನೆ ಮಾಡಿದ್ದ. ಈ ಬಗ್ಗೆ ಅವರು ದೂರು ನೀಡಿದ್ದು ನಗರದ ಸೆನ್ ಅಪರಾಧ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿತ್ತು. 

‘ಆರೋಪಿ ಹೊಸಪೇಟೆಯಲ್ಲಿರುವ  ಮಾಹಿತಿ ತಿಳಿದುಬಂದಿತ್ತು. ಬೇರೆ ಪ್ರಕರಣವೊಂದರಲ್ಲಿ ಆರೋಪಿಯ ಪತ್ತೆ ಕಾರ್ಯಕ್ಕಾಗಿ ಹೊಸಪೇಟೆ ಬಳಿಗೆ ತೆರಳಿದ್ದ ಸೆನ್ ಠಾಣೆಯ ತನಿಖಾ ತಂಡವನ್ನು ಹೊಸಪೇಟೆಗೆ ಕಳುಹಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು’ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ADVERTISEMENT

‘ಆರೋಪಿಯು ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 21 ಖಾತೆಗಳನ್ನು ಹೊಂದಿದ್ದ. ಕೃತ್ಯಕ್ಕೆ 8 ಸಿಮ್ ಕಾರ್ಡ್‌ ಬಳಸುತ್ತಿದ್ದ. ಆ ಮೊಬೈಲ್ ಸಂಖ್ಯೆಗಳನ್ನು ಬಳಸಿ 80ಕ್ಕೂ ಅಧಿಕ ಸೈಬರ್ ವಂಚನೆ ನಡೆಸಿದ ಬಗ್ಗೆ ದೂರುಗಳು ದಾಖಲಾಗಿರುವುದು ತಿಳಿದುಬಂದಿದೆ. ಆತ ಮೂರು ವರ್ಷಗಳಿಂದ  ಕಾರು ಮಾರಾಟ ಮಾಡುವ ನೆಪದಲ್ಲಿ ಹಣ ಪಡೆದು ವಂಚನೆ ಮಾಡುತ್ತಿದ್ದ. ಮೊಬೈಲನ್ನು ಕೆಲದಿನ ಬಳಸಿ ಬಳಿಕ  ಮಾರಾಟ ಮಾಡುತ್ತಿದ್ದ. ಹೊಸ ಸಿಮ್‍ ಖರೀದಿಸಿ ಕೃತ್ಯ ಮುಂದುವರಿಸುತ್ತಿದ್ದ’ ಎಂದು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.