ADVERTISEMENT

ಸರ್ಕಾರದಿಂದ ತುಳು ಶಿಕ್ಷಕರ ನೆಮಕ: ಶಾಶ್ವತ ನಿಧಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 14:25 IST
Last Updated 26 ಆಗಸ್ಟ್ 2021, 14:25 IST
ದಯಾನಂದ ಕತ್ತಲ್‌ಸಾರ್
ದಯಾನಂದ ಕತ್ತಲ್‌ಸಾರ್   

ಮಂಗಳೂರು: ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ, ರಾಜ್ಯ ಭಾಷೆಯಾಗಿ ಮಾನ್ಯತೆ, ಲಿಪಿ ಬಳಕೆ ಮತ್ತಿತರ ತುಳು ಅಭಿಯಾನಗಳು ತೀವ್ರತೆ ಪಡೆಯುತ್ತಿದ್ದರೂ, ತುಳು ಭಾಷೆಗೆ ಮೂಲ ಆಧಾರವಾದ ಶೈಕ್ಷಣಿವಾಗಿ ತುಳು ಕಲಿಕೆಯು ಅಡಕತ್ತರಿಯಲ್ಲಿ ಸಿಲುಕಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 42 ಶಾಲೆಗಳಲ್ಲಿ ತುಳುವನ್ನು ತೃತೀಯ (ಐಚ್ಛಿಕ) ಭಾಷೆಯಾಗಿ ಕಲಿಸಲಾಗುತ್ತಿದ್ದು, 2014–15ರಿಂದ ಈ ತನಕವೂ ಸತತ ಶೇ 100 ಫಲಿತಾಂಶ ಬರುತ್ತಿದೆ. ಆದರೆ, ಸರ್ಕಾರ ಇನ್ನೂ ಕಾಯಂ ಶಿಕ್ಷಕರನ್ನು ನೇಮಿಸಿಲ್ಲ. ತುಳು ಬೋಧಿಸುತ್ತಿರುವ ಅತಿಥಿ ಶಿಕ್ಷಕರಿಗೆ ತಿಂಗಳಿಗೆ ₹3,000 ಸಂಭಾವನೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನೀಡುತ್ತಿದ್ದು, ಅಕಾಡೆಮಿಯ ಅನುದಾನವೂ ಕಡಿತಗೊಂಡಿದೆ. ತಲಾ ₹3,000ದಂತೆ ವಾರ್ಷಿಕ ₹12.6 ಲಕ್ಷ ಗೌರವ ಸಂಭಾವನೆಗೆ ಬೇಕಾಗಿದೆ.

ಅಕಾಡೆಮಿಗೆ ವಾರ್ಷಿಕ ₹40 ಲಕ್ಷ ಅನುದಾನವಿದ್ದು, ಈ ಪೈಕಿ ₹20 ಲಕ್ಷ ಅನುದಾನವು ಸಂಬಳ ಹಾಗೂ ಆಡಳಿತ ವೆಚ್ಚಕ್ಕಾಗಿ ಬೇಕು. ಉಳಿದಂತೆ, ₹12.6 ಲಕ್ಷವನ್ನು ತುಳು ಕಲಿಕೆಗೆ ನೀಡಿದರೆ, ಇತರ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ. ಅದಕ್ಕಾಗಿ ತುಳು ಕಲಿಕೆಗಾಗಿ ಕಾಯಂ ಶಿಕ್ಷಕರ ನೇಮಕ ಅಥವಾ ಅಕಾಡೆಮಿಯಲ್ಲಿ ಸರ್ಕಾರ ಅಥವಾ ದಾನಿಗಳ ಮೂಲಕ ದತ್ತಿನಿಧಿ ಸ್ಥಾಪಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವರೇ ತುಳುವರಾಗಿದ್ದು, ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ತುಳು ಭಾಷಾಪರ ಸಂಘಟನೆಗಳು ಒತ್ತಾಯಿಸಿವೆ.

ADVERTISEMENT

ತೃತೀಯ ಭಾಷೆಯ ಪೈಕಿ ಹಿಂದಿ ಬೋಧನೆಗೆ ಸರ್ಕಾರದ ಅನುದಾನ ಇದೆ. ಆದರೆ, ತುಳು ಭಾಷೆಗೆ ನಿರ್ದಿಷ್ಟ ಅನುದಾನ ಇಲ್ಲ.

2009ರ ಕರ್ನಾಟಕ ಸರ್ಕಾರದ ಆದೇಶದಂತೆ 2010ರಲ್ಲಿ ಆರನೇ ತರಗತಿಗೆ ತೃತೀಯ ಭಾಷೆ (ಐಚ್ಛಿಕ)ಯಾಗಿ ತುಳು ಕಲಿಕೆ ಆರಂಭಗೊಂಡಿತ್ತು. ಪ್ರಸ್ತುತ ಉಭಯ ಜಿಲ್ಲೆಗಳ 42 ಶಾಲೆಗಳಲ್ಲಿ 6ರಿಂದ 10ನೇ ತರಗತಿ ತನಕ ತುಳುವನ್ನು ಬೋಧಿಸಲಾಗುತ್ತಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ 2,270 ವಿದ್ಯಾರ್ಥಿಗಳಿದ್ದರು. ಈ ಬಾರಿ ಶಾಲಾ ಸೇರ್ಪಡೆ ಪ್ರಕ್ರಿಯೆ ಮುಂದುವರಿದಿದೆ.

ತುಳು ಕಲಿಕಗೆ ದತ್ತಿನಿಧಿ ಸ್ಥಾಪನೆ:

ತುಳು ಕಲಿಕೆಗೆ ಅನುದಾನದ ಸಮಸ್ಯೆ ಕಾಡುತ್ತಿರುವುದು ನಿಜ. ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡುತ್ತಿದ್ದೇವೆ. ಕೆಲವು ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದಂತೆ, ತುಳು ಬೋಧನೆಗಾಗಿ ತುಳುವರೇ ಶಾಶ್ವತ ದತ್ತಿನಿಧಿಯನ್ನು ಸ್ಥಾಪಿಸಿದರೆ ಉತ್ತಮ. ಈ ನಿಟ್ಟಿನಲ್ಲಿ ತುಳುವರು, ಸಂಘ–ಸಂಸ್ಥೆಗಳು, ದಾನಿಗಳು ಹೆಜ್ಜೆ ಇಟ್ಟರೆ, ಅಕಾಡೆಮಿಯು ಸಂಪೂರ್ಣ ನೆರವು ನೀಡಲಿದೆ. ತುಳು ಶಿಕ್ಷಕರಿಗೆ ಗೌರವ ಧನ ಹಾಗೂ ಪ್ರತಿಭಾನ್ವಿತ ತುಳು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಸಾಧ್ಯ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಪ್ರತಿಕ್ರಿಯಿಸಿದರು.

ಎನ್‌ಇಪಿ: ತುಳು ಪಾಡೇನು?:

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ರಾಜ್ಯ ಭಾಷೆ (ಕನ್ನಡ) ಹಾಗೂ ಮಾತೃಭಾಷೆ ಕಲಿಕೆಗೂ ಅವಕಾಶ ನೀಡಲಾಗಿದೆ. ಅದರೆ, ರಾಜ್ಯ ಸರ್ಕಾರವು ಇಂತಹ ಐಚ್ಛಿಕ ಮಾತೃಭಾಷೆಯ ಪಟ್ಟಿಯನ್ನು ಸಿದ್ಧಪಡಿಸಬೇಕು. ಅದರಲ್ಲಿ ತುಳು ಸೇರಿದಂತೆ ರಾಜ್ಯದಲ್ಲಿನ ಅಲ್ಪಸಂಖ್ಯಾತ ಭಾಷೆಗಳು ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಆಗ ಕಲಿಕೆಯಲ್ಲಿ ಆದ್ಯತೆ ಸಿಗಲು ಸಾಧ್ಯ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರತಿಕ್ರಿಯಿಸಿದರು.

‘ಎನ್‌ಇಪಿ ಬಗ್ಗೆ ಸಮಗ್ರ ಚರ್ಚೆ, ಸಂವಾದ ನಡೆದು ಕೆಳ ಹಂತದಿಂದ ಜಾರಿಗೊಳಿಸಬೇಕಿತ್ತು. ಆದರೆ, ಪದವಿಯಿಂದ ಜಾರಿಗೊಳಿಸುತ್ತಿದ್ದಾರೆ. ಪದವಿಯಲ್ಲಿ ರಾಜ್ಯಭಾಷೆ ಕಡ್ಡಾಯ. ಮತ್ತೊಂದು ಭಾಷೆಗೆ ಅವಕಾಶ ಎಂದು ನಿರ್ಧರಿಸಿದ್ದಾರೆ. ವಿದ್ಯಾರ್ಥಿಗಳು ಔದ್ಯೋಗಿಕ ದೃಷ್ಟಿಯಿಂದ ಮತ್ತೊಂದು ಭಾಷೆಯಾಗಿ ಇಂಗ್ಲಿಷ್ ಕಲಿಯುವ ಕಾರಣಕ್ಕೆ ತುಳು ಅಥವಾ ಇತರ ಭಾಷೆಗಳ (ಮಾತೃ ಭಾಷಿಗರ) ಪರಿಸ್ಥಿತಿ ಏನು? ಎಂಬ ಗೊಂದಲಗಳಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.