ADVERTISEMENT

ಗಾಂಜಾ ಸಾಗಾಟ: ಆರೋಪಿ ಬಂಧನ- 10 ಕೆ.ಜಿ.ಗಾಂಜಾ ವಶ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 9:43 IST
Last Updated 13 ಜನವರಿ 2023, 9:43 IST
   

ಮಂಗಳೂರು: ಮಾರುತಿ ಸ್ವಿಫ್ಟ್ ಕಾರಿನಲ್ಲಿ ನಿಷೇಧಿತ ಮಾದಕ ವಸ್ತುವಾದ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ನಗರದ ಕುಂಟಿಕಾನ ಕ್ರಾಸ್ ಬಳಿ ಶುಕ್ರವಾರ ಬಂಧಿಸಿದ್ದಾರೆ. ಬಂಧಿತನನ್ನು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ವಿಜಯ್ ಕುಮಾರ್ (24) ಎಂದು ಗುರುತಿಸಲಾಗಿದೆ. ಆತನಿಂದ 10.200 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಕಾರನ್ನು ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಎಚ್. ಎಂ. ನೇತೃತ್ವದ ಸಿಸಿಬಿ ಪೊಲೀಸರ ತಂಡ ಖಚಿತ ಮಾಹಿತಿ ಮೇರೆಗೆ ತಡೆದು ತಪಾಸಣೆ ನಡೆಸಿದಾಗ ಅದರಲ್ಲಿ ಗಾಂಜಾ ಪತ್ತೆಯಾಗಿತ್ತು. ಆರೋಪಿಯು ಗಾಂಜಾವನ್ನು ಆಂಧ್ರಪ್ರದೇಶದಿಂದ ಬೆಂಗಳೂರು ಮೂಲಕ ಮಂಗಳೂರಿಗೆ ಕಾರಿನಲ್ಲಿ ಸಾಗಿಸುತ್ತಿದ್ದ. ಗಾಂಜಾ ಸಾಗಾಟಕ್ಕೆ ಉಪಯೋಗಿಸಿದ ಕಾರು, 10.200 ಕ.ಜಿ ಗಾಂಜಾ, ಒಂದು ಮೊಬೈಲ್ ಫೋನ್ ಹಾಗೂ ನಗದು ₹ 500 ಅನ್ನು ಸಿಸಿಬಿ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.


ಗಾಂಜಾ ಸುಮಾರು ₹ 2,55,000 ಮೌಲ್ಯದ್ದು ಎಂದು ಅಂದಾಜು ಮಾಡಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ₹5,65,500 ಎಂದು ಅಂದಾಜು ಮಾಡಲಾಗಿದೆ. ಈ ಬಗ್ಗೆ ಉರ್ವಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ADVERTISEMENT

ಆರೋಪಿ, ವಿಜಯ ಕುಮಾರ್ ಈ ಹಿಂದೆ ಕೂಡಾ ಗಾಂಜಾ ಸಾಗಾಟ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದು, ಚಿಕ್ಕಮಗಳೂರಿನಲ್ಲಿ ಹಾಗೂ ಉಡುಪಿಯಲ್ಲಿ ದಾಖಲಾಗಿದ್ದ ಪ್ರಕರಣಗಳಿಲ್ಲ ಬಂಧನಕ್ಕೆ ಒಳಗಾಗಿದ್ದ.
ಸುಮಾರು 3 ತಿಂಗಳ ಹಿಂದೆ ಕಾರಾಗೃಹದಿಂದ ಬಿಡುಗಡೆಗೊಂಡಿದ್ದ.

ಆರೋಪಿಯ ಪತ್ತೆ ಕಾರ್ಯದಲ್ಲಿ ಇನ್ಸ್ಪೆಕ್ಟರ್ ಎಚ್ ಎಂ. ಮಹೇಶ, ಪ್ರಸಾದ್‌, ಪಿಎಸ್‌ಐಗಳಾದ ರಾಜೇಂದ್ರ ಬಿ, ಸುದೀಪ್ ಎಂ.ವಿ ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.