ADVERTISEMENT

‘ಸಂವಿಧಾನದ ಆಶಯ ಸಾಕಾರಗೊಳಿಸಿ’

ಗಾಂಧೀಜಿ-– ಶಾಸ್ತ್ರಿ ಜಯಂತಿಯಲ್ಲಿ ಮಠಂದೂರು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 5:20 IST
Last Updated 3 ಅಕ್ಟೋಬರ್ 2022, 5:20 IST
ಉಪವಿಭಾಗಾಧಿಕಾರಿ ಗಿರೀಶ್ ನಂದನ್ ದೀಪ ಬೆಳಗಿದರು. ಶಾಸಕ ಸಂಜೀವ ಮಠಂದೂರು, ತಹಶೀಲ್ದಾರ್ ನಿಸರ್ಗಪ್ರಿಯ ಇದ್ದರು
ಉಪವಿಭಾಗಾಧಿಕಾರಿ ಗಿರೀಶ್ ನಂದನ್ ದೀಪ ಬೆಳಗಿದರು. ಶಾಸಕ ಸಂಜೀವ ಮಠಂದೂರು, ತಹಶೀಲ್ದಾರ್ ನಿಸರ್ಗಪ್ರಿಯ ಇದ್ದರು   

ಪುತ್ತೂರು: ದೇಶದ ಪ್ರೇರಕ ಶಕ್ತಿಯಾಗಿರುವ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಚಿಂತನೆಗಳು ನಮಗೆಲ್ಲರಿಗೂ ಆದರ್ಶವಾಗಬೇಕು. ಪವಿತ್ರ ಸಂವಿಧಾನದ ಆಶಯಗಳನ್ನು ನಾವೆಲ್ಲ ಸಾಕಾರಗೊಳಿಸಬೇಕು. ಗಾಂಧೀಜಿ ಕಂಡ ಸ್ವಚ್ಛ, ದುಶ್ಚಟ ಮುಕ್ತ ರಾಮರಾಜ್ಯದ ಕನಸನ್ನು ನಾವು ನನಸಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಬೇಕಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಭಾನುವಾರ ಇಲ್ಲಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಮಾತನಾಡಿ, ಅಹಿಂಸಾ ಹೋರಾಟದ ಪರಿಣಾಮಕಾರಿ ಅಸ್ತ್ರದ ಮೂಲಕ ಗಾಂಧಿ ಜಗತ್ತಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೊಸ ಮನ್ವಂತರ ಹುಟ್ಟು ಹಾಕಿದ ಚೇತನ. ಸರಳ ವ್ಯಕ್ತಿತ್ವದೊಂದಿಗೆ ಪ್ರಧಾನಿ ಹುದ್ದೆಯನ್ನು ನಿಭಾಯಿಸಿದ ಶಾಸ್ತ್ರಿ ದೇಶಕ್ಕೆ ಹೊಸ ದಿಕ್ಕು ತೋರಿದವರು ಎಂದರು.

ADVERTISEMENT

ತಹಶೀಲ್ದಾರ್ ನಿಸರ್ಗಪ್ರಿಯ, ಮುಖಂಡರಾದ ರಾಧಾಕೃಷ್ಣ ಬೋರ್ಕರ್, ವಿವಿಧ ಇಲಾಖೆಗಳ ಅಧಿಕಾರಿಗಳಾದ ಶೈಲಜಾ ಭಟ್, ಡಾ. ದೀಪಕ್, ಸುನಿಲ್, ಸುಂದರ ಗೌಡ, ಮಹೇಶ್, ಕೃಷ್ಣ, ವಿದ್ಯಾರಾಣಿ ಇದ್ದರು.

ದಯಾನಂದ ಡಿ.ಟಿ. ಸ್ವಾಗತಿಸಿದರು. ಉಪ ತಹಶೀಲ್ದಾರ್ ಸುಲೋಚನಾ ನಿರೂಪಿಸಿದರು. ಬಳಿಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವಚ್ಛತಾ ಕಾರ್ಯ ಕೈಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.