ಮಂಗಳೂರು: ಗಣೇಶೋತ್ಸವದ ಆಚರಣೆಗೆ ನಗರದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಕೋವಿಡ್–19 ನಿಂದಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ಇಲ್ಲದಿದ್ದರೂ, ಮನೆಗಳಲ್ಲಿಯೇ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಜನರು ಅದ್ದೂರಿ ತಯಾರಿ ನಡೆಸಿದ್ದಾರೆ. ಇದೀಗ ದೊಡ್ಡ ಗಣೇಶ ಮೂರ್ತಿಗಳು ಇಲ್ಲದೇ ಇರುವುದರಿಂದ ಚಿಕ್ಕ ಮೂರ್ತಿಗಳಿಗೆ ಇದೀಗ ಹೆಚ್ಚಿನ ಬೇಡಿಕೆ ಬಂದಿದೆ.
ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಗಣಪತಿಯ ಮೂರ್ತಿಯನ್ನು ವಿವಿಧ ಕಲಾವಿದರು, ಬಗೆ-ಬಗೆಯಲ್ಲಿ ರೂಪಿಸುತ್ತಾರೆ. ಆದರೆ ಮಣ್ಣಗುಡ್ಡೆಯ ಕಲಾವಿದರ ಕುಟುಂಬವೊಂದು ಸಾಂಪ್ರದಾಯಿಕವಾಗಿ, ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ಕಳೆದ 90 ವರ್ಷಗಳಿಂದ ತಯಾರಿಸುತ್ತಿದೆ. ಗಣೇಶನ ಮೂರ್ತಿ ರಚನೆ ತಂದೆಯಿಂದಲೇ ಈ ಕುಟುಂಬಕ್ಕೆ ಬಳುವಳಿಯಾಗಿ ಬಂದಿದ್ದು, ಇದೀಗ ಈ ಕುಟುಂಬದಲ್ಲಿ ನಾಲ್ಕನೇ ಪೀಳಿಗೆಯೂ ಗಣೇಶನ ಮೂರ್ತಿ ರಚನೆಯಲ್ಲಿ ತೊಡಗಿಕೊಳ್ಳುತ್ತಿದೆ.
ಎರಡು ತಿಂಗಳ ಹಿಂದೆ ಬರುವ ಚಿತ್ರಾ ನಕ್ಷತ್ರದಿಂದ ಮೂರ್ತಿ ತಯಾರಿಕೆ ಪ್ರಾರಂಭವಾಗುತ್ತಿದ್ದು, ವಿದೇಶದಲ್ಲಿ ವೃತ್ತಿ ಮಾಡುವವರಿಂದ ಹಿಡಿದು ಕುಟುಂಬದ ಸಣ್ಣ ಮಕ್ಕಳವರೆಗೆ ಒಟ್ಟು 22 ಮಂದಿ ಮೂರ್ತಿ ತಯಾರಿಕೆ,ಬಣ್ಣ ಹಚ್ಚುವಿಕೆಯಲ್ಲಿ ತೊಡಗಿಕೊಳ್ಳುತ್ತಾರೆ.
ಈ ಕುಟುಂಬದ ಹಿರಿಯರಾದ ದಿವಂಗತ ಮೋಹನ್ ರಾವ್ ಅವರು ಮುಂಬೈಯಲ್ಲಿದ್ದಾಗ ಶೇಟ್ ಒಬ್ಬರ ಮನೆಯಲ್ಲಿದ್ದುಕೊಂಡು ಸುಮಾರು 12 ವರ್ಷಗಳ ಕಾಲ ಗಣೇಶನ ಮೂರ್ತಿ ನಿರ್ಮಿಸಿದ್ದರು. ಅವರಿಂದಲೇ ಬಳುವಳಿಯಾಗಿ ಬಂದ ಈ ಕಲೆಯನ್ನು ಇಂದಿನ ಪೀಳಿಗೆಯೂ ಮುಂದುವರಿಸಿಕೊಂಡು ಹೋಗುತ್ತಿದೆ. ತಂದೆಯ ಬಳಿಕ ಅವರ ಮಕ್ಕಳು ಸುಧಾಕರ ರಾವ್, ಪ್ರಭಾಕರ ರಾವ್, ರಾಮಚಂದ್ರ ರಾವ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಗಣೇಶನ ಮೂರ್ತಿ ಸಂಪೂರ್ಣ ಆವೆಮಣ್ಣಿನಿಂದಲೇ ಮಾಡಲಾಗುತ್ತಿದ್ದು, ಇದಕ್ಕೆ ಲೆಡ್ ಫ್ರೀ ಬಣ್ಣವನ್ನು ಮಾತ್ರ ಹಚ್ಚಲಾಗುತ್ತಿದೆ. ಈ ಮೂಲಕ ಪರಿಸರ ಸ್ನೇಹಿ ಗಣೇಶನಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಇವರು ತಯಾರಿಸಿದ ಗಣೇಶನ ಮೂರ್ತಿಗೆ ಇಂತಿಷ್ಟೇ ಹಣವೆಂದು ನಿಗದಿಪಡಿಸದ ಈ ಕುಟುಂಬ, ಜನರು ನೀಡಿದ್ದಷ್ಟು ಹಣ ಮಾತ್ರ ಪಡೆದುಕೊಳ್ಳುತ್ತದೆ.
ನಗರದ ರಥಬೀದಿಯಲ್ಲೂ ವಿವಿಧ ಆಕಾರ ಹಾಗೂ ಗಾತ್ರದ ಗಣೇಶ ವಿಗ್ರಹಗಳನ್ನು ಸಿದ್ಧಪಡಿಸಲಾಗುತ್ತಿದ್ದು ಕಲಾವಿದರು ಗಣೇಶನ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುವುದರಲ್ಲಿ ತಲ್ಲೀನರಾಗಿದ್ದಾರೆ.
ಕೊರೊನಾ ನಿರ್ಬಂಧಗಳನ್ನು ತೆಗೆದು ಹಾಕಲಾಗುತ್ತದೆ ಎಂದು ತಿಳಿದ ಹಲವರು ಮುಂಚಿತವಾಗಿ ವಿಗ್ರಹಗಳನ್ನು ಕಾಯ್ದಿರಿಸಿದ್ದು, ಈಗ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅವಕಾಶವಿಲ್ಲದ ಕಾರಣ ವಿಗ್ರಹ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.
ಗಣೇಶೋತ್ಸವದಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಆದರೆ ಈ ವರ್ಷ ಕೊರೊನಾ ಕಾರಣದಿಂದಾಗಿ ಜಿಲ್ಲಾಡಳಿತವು ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ ವಿಧಿಸಿದೆ. ಧಾರ್ಮಿಕ ಮುಖಂಡರು ಈ ಹಬ್ಬವನ್ನು ಬರುವ ಫೆಬ್ರುವರಿಯಲ್ಲಿ ತಿಂಗಳಲ್ಲಿ ಅದ್ಧೂರಿಯಾಗಿ ಆಚರಿಸುವ ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.