ADVERTISEMENT

ಗಾಂಜಾ ಸಾಗಣೆ, ಸೇವನೆ: ಒಂಬತ್ತು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 16:36 IST
Last Updated 8 ಜುಲೈ 2019, 16:36 IST

ಮಂಗಳೂರು: ಗಾಂಜಾ ಸಾಗಣೆ ಮತ್ತು ಸೇವನೆಗೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎಂಟು ಮಂದಿಯನ್ನು ಸುರತ್ಕಲ್‌ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಗಾಂಜಾ ಸಾಗಿಸುತ್ತಿದ್ದ ಒಬ್ಬನನ್ನು ಮಂಗಳೂರು ಉತ್ತರ (ಬಂದರು) ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅರ್ಧ ಕೆ.ಜಿ. ಗಾಂಜಾ ವಶ: ಸುರತ್ಕಲ್‌ ಠಾಣೆ ಪೊಲೀಸರು ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ಇಡ್ಯಾ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಆಗ ಕಾರೊಂದರಲ್ಲಿ ಬಂದ ಐವರು ನಶೆಯಲ್ಲಿರುವುದು ಕಂಡುಬಂದಿತು. ತಕ್ಷಣವೇ ಕಾರನ್ನು ತಪಾಸಣೆ ಮಾಡಿದಾಗ 500 ಗ್ರಾಂ. ಗಾಂಜಾ ಪತ್ತೆಯಾಯಿತು.

ಕಾರಿನಲ್ಲಿದ್ದ ವಿಟ್ಲ ನಿವಾಸಿ ಮೊಹಮ್ಮದ್ ಅನ್ವರ್ (33), ಬೋಳಾರ ರಮೀಝ್ (29) ಬಲ್ಮಠ ನಿವಾಸಿ ಹಫೀಝ್(23), ಉಡುಪಿ ನಿವಾಸಿ ಅನ್ಸಿಯಾ (25), ಬಂದರು ನಿವಾಸಿ ರಝಿಕ್ (21) ಎಂಬುವವರನ್ನು ಬಂಧಿಸಲಾಗಿದೆ. ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ADVERTISEMENT

ಬಂಧಿತರಿಗೆ ಬೆಂಗಳೂರಿನ ವ್ಯಕ್ತಿಯೊಬ್ಬ ಕೊಕೇನ್‌, ಎಂಡಿಎಂ, ಗಾಂಜಾ ಸರಬರಾಜು ಮಾಡುತ್ತಿರುವ ಮಾಹಿತಿ ಆರೋಪಿಗಳ ವಿಚಾರಣೆ ವೇಳೆ ಲಭಿಸಿದೆ. ಆತನ ಬಂಧನಕ್ಕೆ ವಿಶೇಷ ಪೊಲೀಸ್‌ ತಂಡವನ್ನು ರಚಿಸಿ, ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಲಾಡ್ಜ್‌ ವಿರುದ್ಧ ಕ್ರಮ: ಸುರತ್ಕಲ್‌ನ ಗೌರವ್‌ ಲಾಡ್ಜ್‌ನಲ್ಲಿ ಮೂವರು ಗಾಂಜಾ ನಶೆಯಲ್ಲಿ ಗಲಾಟೆ ಮಾಡುತ್ತಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಹೊಸಬೆಟ್ಟು ನಿವಾಸಿಗಳಾದ ಅರುಣ್, ಉತ್ತೇಜ್, ದಿಶನ್ ಎಂಬುವವರು ನಶೆಯಲ್ಲಿ ಗಲಾಟೆ ಮಾಡುತ್ತಿದ್ದರು.

ಮೂವರನ್ನೂ ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಆರೋಪಿಗಳು ಗಾಂಜಾ ಸೇವಿಸಲು ಕೊಠಡಿ ನೀಡಿರುವ ಕಾರಣದಿಂದ ಗೌರವ್‌ ಲಾಡ್ಜ್‌ನ ಪರವಾನಗಿಯನ್ನು ರದ್ದು ಮಾಡುವಂತೆ ಮಂಗಳೂರು ಮಹಾನಗರ ಪಾಲಿಕೆಗೆ ಶಿಫಾರಸು ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಎರಡೂ ಪ್ರಕರಣಗಳಲ್ಲಿ ಸುರತ್ಕಲ್‌ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಕೆ.ರಾಮಕೃಷ್ಣ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

160 ಗ್ರಾಂ. ಗಾಂಜಾ ವಶ: ನಗರದ ಬಂದರು ಮೈದಾನವೊಂದರಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಂದರು ನಿವಾಸಿ ರಝಿಕ್ (21) ಎಂಬಾತನನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಈತ ರಹೀಂ ಎಂಬಾತನಿಂದ ಗಾಂಜಾವನ್ನು ಖರೀದಿಸಿ ಬಂದರು ಸುತ್ತಮುತ್ತಲ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದ ಎಂಬ ಆರೋಪವಿದೆ. ಈ ಕುರಿತು ಮಾಹಿತಿ ಪಡೆದ ಬಂದರು ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ 160 ಗ್ರಾಂ. ಗಾಂಜಾ ಮತ್ತು ಸ್ಕೂಟರ್‍ ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.