ಮಂಗಳೂರು: ನಗರದ ಪಾಂಡೇಶ್ವರದ ಶ್ರೀನಿವಾಸ ಕಾಲೇಜಿನ ಪಕ್ಕದಲ್ಲಿರುವ ಶ್ರೀರಾಂ ಗ್ಯಾರೇಜ್ ಬಳಿ ಸೋಮವಾರ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಕುಖ್ಯಾತ ಗಾಂಜಾ ಪೂರೈಕೆದಾರ ರಹೀಂ ಅಲಿಯಾಸ್ ಕಂಡಿ ರಹೀಂ ಅಲಿಯಾಸ್ ಗೂಡ್ಸ್ ರಹೀಂ (44) ಎಂಬಾತನನ್ನು ಬಂಧಿಸಿರುವ ಆರ್ಥಿಕ ಅಪರಾಧ ಮತ್ತು ಮಾದಕವಸ್ತು ಅಪರಾಧ ನಿಯಂತ್ರಣ ಠಾಣೆ ಪೊಲೀಸರು, 1.1 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಮೊದಲು ನಗರದ ಬಂದರು ಪ್ರದೇಶದಲ್ಲಿ ವಾಸವಾಗಿದ್ದ ಆರೋಪಿ ಈಗ ಅಡ್ಡೂರು ನೂಯಿಯಲ್ಲಿ ವಾಸವಾಗಿದ್ದಾನೆ. ಈತನ ವಿರುದ್ಧ ಗಾಂಜಾ ಮಾರಾಟಕ್ಕೆ ಸಂಬಂಧಿಸಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 11 ಪ್ರಕರಣಗಳಿವೆ. ಆರೋಪಿಯಿಂದ ಗಾಂಜಾ, ದ್ವಿಚಕ್ರ ವಾಹನ, ಮೊಬೈಲ್ ಫೋನ್ ಮತ್ತು ಡಿಜಿಟಲ್ ತೂಕದ ಯಂತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್, ಡಿಸಿಪಿಗಳಾದ ಹನುಮಂತರಾಯ , ಲಕ್ಷ್ಮೀಗಣೇಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಲ್ಲಿ ಇ ಅಂಡ್ ಎನ್ ಠಾಣೆಯ ಇನ್‌ಸ್ಪೆಕ್ಟರ್ ಕೆ.ಕೆ.ರಾಮಕೃಷ್ಣ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.