ADVERTISEMENT

ಮಂಗಳೂರು: ಆಟೊರಿಕ್ಷಾದಲ್ಲಿ ಬೆಂಕಿ– ಚಾಲಕ, ಪ್ರಯಾಣಿಕನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 15:12 IST
Last Updated 19 ನವೆಂಬರ್ 2022, 15:12 IST

ಮಂಗಳೂರು: ನಗರದ ಗರೋಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಶನಿವಾರ ಸಂಜೆ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಹಾಗೂ ಅದರ ಪ್ರಯಾಣಿಕರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಟೊ ಯಾರಿಗೆ ಸೇರಿದ್ದು, ಅದರಲ್ಲಿ ಯಾರು ಪ್ರಯಾಣಿಸುತ್ತಿದ್ದರು, ಬೆಂಕಿ ಕಾಣಿಸಿಕೊಳ್ಳುವುದಕ್ಕೆ ಕಾರಣವೇನೆಂಬುದು ತಿಳಿದುಬಂದಿಲ್ಲ. ಈ ಬಗ್ಗೆ ಇನ್ನಷ್ಟೇ ಮಾಹಿತಿ ಕಲೆ ಹಾಕಬೇಕಿದೆ ಎಂದು ಪೊಲೀಸರು ತಿಳಿಸಿದರು.

‘ಸಂಜೆ 5.30ರ ಸುಮಾರಿಗೆ ಸ್ಪೋಟದ ಸದ್ದು ಕೇಳಿಸಿತು. ರಿಕ್ಷಾದಲ್ಲಿ ಹೊಗೆಯಾಡುತ್ತಿರುವುದು ಕಂಡು ಬಂತು. ಕ್ಷಣಾರ್ಧದಲ್ಲಿ ರಸ್ತೆ ತುಂಬೆಲ್ಲ ದಟ್ಟ ಹೊಗೆ ಆವರಿಸಿಕೊಂಡಿತು. ಅದರಲ್ಲಿದ್ದ ಚಾಲಕ ಹಾಗೂ ಪ್ರಯಾಣಿಕ ಕೂಡಾ ಗಾಯಗೊಂಡಿದ್ದರು’ ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌, ‘ಪ್ರಯಾಣಿಕನ ಬ್ಯಾಗಿನಲ್ಲಿ ವಸ್ತುವಿನಿಂದ ಬೆಂಕಿ ಕಾಣಿಸಿಕೊಂಡಿತ್ತು ಎಂದು ಚಾಲಕ ತಿಳಿಸಿದ್ದರು. ಆಟೊ ಚಾಲಕ ಹಾಗೂ ಪ್ರಯಾಣಿಕರಿಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಬ್ಬರೂ ಚಿಕಿತ್ಸೆ ಪಡೆಯುತ್ತಿದ್ದು, ಅವರಿಂದ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ. ಹಾಗಾಗಿ ಬೆಂಕಿ ಕಾಣಿಸಿಕೊಂಡಿದ್ದು ಹೇಗೆ ಎಂಬ ಬಗ್ಗೆ ನಿಖರವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ’ ಎಂದು ತಿಳಿಸಿದರು.

‘ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳಕ್ಕ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನೆಂಬ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ’ ಎಂದೂ ಅವರು ತಿಳಿಸಿದರು.

‘ಈ ಘಟನೆ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವಂತಹ ಸಂದೇಶವನ್ನು ಯಾರೂ ಹರಡಬಾರದು. ವದಂತಿ ಹಬ್ಬಿಸಬಾರದು‘ ಎಂದು ಅವರು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.