ADVERTISEMENT

ಅನಿಲ ಸೋರಿಕೆ: ತಪ್ಪಿದ ಅನಾಹುತ

ಸಕಲೇಶಪುರದ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 8:20 IST
Last Updated 17 ಅಕ್ಟೋಬರ್ 2019, 8:20 IST

ಸಕಲೇಶಪುರ: ಟ್ಯಾಂಕರ್‌ನಲ್ಲಿ ಅನಿಲ ಸೋರಿಕೆಯಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತವನ್ನು ಸೆಸ್ಕ್‌ ಸಿಬ್ಬಂದಿ, ಪೊಲೀಸರು ಹಾಗೂ ಅಗ್ನಿಶಾಮಕ ದಳ ತುರ್ತು ಕಾರ್ಯಾಚರಣೆಯಿಂದ ತಪ್ಪಿಸಿದೆ.

ಪಟ್ಟಣದಲ್ಲಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಮಧ್ಯಾಹ್ನ 12.45ರ ಹೊತ್ತಿಗೆ ಮಂಗಳೂರು ಕಡೆಯಿಂದ ಹಾಸನ ಕಡೆಗೆ ಹೋಗುತ್ತಿದ್ದ ಇಂಡೆನ್‌ ಗ್ಯಾಸ್‌ ಟ್ಯಾಂಕರ್‌ ಕ್ಯಾಪ್‌ನ ಬೋಲ್ಟ್‌ವೊಂದು ತುಂಡಾದ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗತೊಡಗಿತು.

ಭಾರಿ ಶಬ್ದದೊಂದಿಗೆ ಅನಿಲ ಸೋರಿಕೆ ಆಗುತ್ತಿದ್ದರೂ ಚಾಲಕನ ಗಮನಕ್ಕೆ ಬಂದಿರಲಿಲ್ಲ. ಸೆಸ್ಕ್‌ ಕಚೇರಿ ಮುಂಭಾಗ ಇದ್ದ ಪವರ್‌ಮನ್‌ಗಳು ಗಮನಿಸಿ ವಾಹನ ನಿಲ್ಲಿಸಿ, ಸೋರಿಕೆ ಆಗುತ್ತಿರುವುದನ್ನು ಚಾಲಕನ ಗಮನಕ್ಕೆ ತಂದರು. ಅಲ್ಲದೇ, ಇಡೀ ಪಟ್ಟಣದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ, ಪೊಲೀಸರು ಹಾಗೂ ಅಗ್ನಿಶಾಮಕ ದಳ ಅಧಿಕಾರಿಗಳ ಗಮನಕ್ಕೆ ತಂದರು.

ADVERTISEMENT

ಪಟ್ಟಣ ಪೊಲೀಸ್‌ ಠಾಣೆ ಪಿಎಸ್ಐ ರಾಘವೇಂದ್ರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಘಟನೆ ನಡೆದ ಸ್ಥಳದ ಪಕ್ಕದಲ್ಲಿ ಇರುವ ಸರ್ಕಾರಿ ಯಂಗ್ಸ್ ಪದವಿ ಪೂರ್ವ ಕಾಲೇಜು, ಹಾಸ್ಟೆಲ್‌, ಕೃಷಿ, ತೋಟಗಾರಿಕೆ ಇಲಾಖೆ, ಹೋಟೆಲ್‌ಗಳಲ್ಲಿ ಇದ್ದವರನ್ನೆಲ್ಲ ಖಾಲಿ ಮಾಡಿಸಿದರು. ಹೆದ್ದಾರಿಯಲ್ಲಿ ಬರುತ್ತಿದ್ದ ಎಲ್ಲ ವಾಹನಗಳ ಸಂಚಾರವನ್ನು ತಕ್ಷಣ ನಿಲ್ಲಿಸಲಾಯಿತು. ಆಟೊದಲ್ಲಿ ಧ್ವನಿವರ್ಧಕದ ಮೂಲಕ ಘಟನೆ ನಡೆದ ಸ್ಥಳದಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ನಿವಾಸಿಗಳು ಬೆಂಕಿ ಕಡ್ಡಿ ಗೀರದಂತೆ, ಮೊಬೈಲ್‌ ಫೋನ್‌ಗಳನ್ನು ಬಳಸದಂತೆ ಎಚ್ಚರಿಕೆ ನೀಡಿದರು.

ನಂತರ ಅಗ್ನಿಶಾಮಕ ಠಾಣಾಧಿಕಾರಿ ರಂಗನಾಥ್‌ ಹಾಗೂ ಸಿಬ್ಬಂದಿ ಜೀವದ ಹಂಗು ತೊರೆದು ಟ್ಯಾಂಕರ್‌ ಏರಿದರು. ಸೋರಿಕೆ ಆಗುತ್ತಿದ್ದ ಅನಿಲದ ಜೊತೆ ನೀರು ಹರಿಸುವ ಮೂಲಕ ಯಾವುದೇ ದುರಂತ ಸಂಭವಿಸದಂತೆ ಎಚ್ಚರಿಕೆಯಿಂದ ಸಂಜೆ 4ರ ವರೆಗೆ ಕಾರ್ಯಾಚರಣೆ ನಡೆಸಿದರು. ಹಾಸನದಿಂದಲೂ ಅಗ್ನಿಶಾಮಕ ದಳದ ವಾಹನಗಳು ಬಂದಿದ್ದವು.

ಸ್ಥಳಕ್ಕೆ ಹಾಸನದ ಎಚ್‌ಪಿಸಿಎಲ್‌ ವ್ಯವಸ್ಥಾಪಕ ಬಿ.ಎಸ್‌.ನಾಯಕ್‌, ಎಲ್‌ಪಿಜಿ ಕ್ವಿಕ್‌ ರೆಸ್ಪಾನ್ಸ್‌ ವಾಹನ ಧಾವಿಸಿ ತಾತ್ಕಾಲಿಕವಾಗಿ ಸೋರಿಕೆ ನಿಲ್ಲಿಸುವಲ್ಲಿ ಯಶಸ್ವಿಯಾದರು. ನಂತರ ಟ್ಯಾಂಕರ್‌ ಅನ್ನು ತಾಲ್ಲೂಕಿನ ನಾಗರ ಗ್ರಾಮಕ್ಕೆ ಸಾಗಿಸಿ ಬೇರೆ ಟ್ಯಾಂಕರ್‌ಗೆ ಅನಿಲ ತುಂಬಿಸಲಾಯಿತು.

ಸಾರ್ವಜನಿಕರಲ್ಲಿ ಆತಂಕ: ಪಟ್ಟಣದ ಹೃದಯಭಾಗದಲ್ಲಿ ನಡೆದ ಈ ಘಟನೆಯಿಂದ ನಿವಾಸಿಗಳು ಇಡೀ ದಿನ ಆತಂಕದಲ್ಲಿ ಇದ್ದರು.

ಕೃಷಿ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ, ಸೆಸ್ಕ್ ಇಲಾಖೆ ಕಟ್ಟಡಗಳಿಂದ ಕೇವಲ 15 ಅಡಿ ದೂರದಲ್ಲೇ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗುತ್ತಿದ್ದ ಕಾರಣ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳು, ಸಿಬ್ಬಂದಿ ಮೊಬೈಲ್‌, ಬ್ಯಾಗ್ ಎಲ್ಲವನ್ನು ಅಲ್ಲಲ್ಲಿಯೇ ಬಿಟ್ಟು ಓಡಿ ಹೋದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣವೂ ಹತ್ತಿದ್ದರದಲ್ಲೇ ಇದ್ದ ಕಾರಣ ನಿಲ್ದಾಣದಲ್ಲಿ ಇದ್ದ ಎಲ್ಲ ಬಸ್ಸುಗಳನ್ನು ದೂರಕ್ಕೆ ಕಳಿಸಲಾಯಿತು.

ಹೆದ್ದಾರಿಯಲ್ಲಿ ಓಡಾಡುವ ವಾಹನಗಳನ್ನು ಟೋಲ್‌ಗೇಟ್‌ ಹಾಗೂ ತೇಜಸ್ವಿ ಚಿತ್ರಮಂದಿರ ಬಳಿಯೇ ಪೊಲೀಸರು ತಡೆದು ನಿಲ್ಲಿಸಿದ್ದರು. ಇದರಿಂದಾಗಿ ಸಂಜೆ 4 ರ ವರೆಗೆ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.