ADVERTISEMENT

ಧರ್ಮಸ್ಥಳದಲ್ಲಿ ವ್ಯಸನಮುಕ್ತರ ಸಮ್ಮಿಲನ: ವ್ಯಸನಮುಕ್ತರು ನರಕ ದಾಟಿ ಬಂದ ನಾಯಕರು

​ಪ್ರಜಾವಾಣಿ ವಾರ್ತೆ
Published 20 ಮೇ 2025, 12:19 IST
Last Updated 20 ಮೇ 2025, 12:19 IST
ವ್ಯಸನಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು
ವ್ಯಸನಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು   

ಉಜಿರೆ: ಮನುಷ್ಯರು ವ್ಯಸನಗಳ ದಾಸರಾಗಬಾರದು. ಚಟಗಳಿಂದಾಗಿ ಹಣ, ಆರೋಗ್ಯ, ಮರ್ಯಾದೆ, ಪ್ರೀತಿ-ವಿಶ್ವಾಸ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ವ್ಯಸನಮುಕ್ತರು ನರಕವನ್ನು ದಾಟಿ ಬಂದ ನಾಯಕರು ಎಂದು ಶಿರಹಟ್ಟಿ ಭಾವೈಕ್ಯ ಪೀಠದ ಮಹಾರಾಜ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಧರ್ಮಸ್ಥಳದಲ್ಲಿ ಮಂಗಳವಾರ ಆಯೋಜಿಸಿದ್ದ 2,900 ಮಂದಿ ವ್ಯಸನಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.

‘ಸರ್ಕಾರ ಮದ್ಯ ಕುಡಿಸಬೇಕು ಎಂದು ಹೇಳಿದರೆ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಮದ್ಯಪಾನ ಬಿಡಿಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಮದ್ಯದಂಗಡಿಗಳನ್ನು ಹೆಚ್ಚಿಸುವುದಲ್ಲದೆ ಮದ್ಯಪಾನ ನಿಯಂತ್ರಣ ಮಂಡಳಿಗೂ ಕೋಟಿಗಟ್ಟಲೆ ಹಣ ವೆಚ್ಚ ಮಾಡುತ್ತಿದೆ. ಆರೋಗ್ಯಪೂರ್ಣ ಸಭ್ಯ, ಸುಸಂಸ್ಕೃತ ಸಮಾಜ ರೂಪಿಸಲು ಹೆಗ್ಗಡೆ ಅವರು ಮಾಡುತ್ತಿರುವ ಸೇವೆ-ಸಾಧನೆಗಳ ಬಗ್ಗೆ ಶಾಲಾ-ಕಾಲೇಜುಗಳ ಪಠ್ಯದಲ್ಲಿ ಮಾಹಿತಿ ನೀಡಬೇಕು. ವಿಶ್ವವಿದ್ಯಾಲಯಗಳಲ್ಲೂ ಈ ಬಗ್ಗೆ ಸಂಶೋಧನಾತ್ಮಕ ಅಧ್ಯಯನ ನಡೆಸಬೇಕು’ ಎಂದು ಸ್ವಾಮೀಜಿ ಸಲಹೆ ನೀಡಿದರು.

ADVERTISEMENT

‘ಮದ್ಯಪಾನ ನಿಷೇಧ ಮಾಡುವ ಸರ್ಕಾರ ಬಂದರೆ ಮಾತ್ರ ರಾಜ್ಯದ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ. ವ್ಯಸನಗಳಿಂದಾಗಿ ಇಂದು ಪುರುಷರಲ್ಲಿ ಬಂಜೆತನವೂ ಹೆಚ್ಚಾಗುತ್ತಿದೆ. ವ್ಯಸನಮುಕ್ತರು ಮುಂದೆ ದೃಢಸಂಕಲ್ಪದೊಂದಿಗೆ ಸಾರ್ಥಕ ಜೀವನ ನಡೆಸಿ ಪರಿಸರದವರಿಗೂ ವ್ಯಸನಮುಕ್ತರಾಗುವ ಪ್ರೇರಣೆ ನೀಡಬೇಕು’ ಎಂದು ಸ್ವಾಮೀಜಿ ಸಲಹೆ ನೀಡಿದರು.

ಬೆಂಗಳೂರಿನ ಕ್ಷೇಮವನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾಅಮಿತ್ ಅವರು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಹೇಮಾವತಿ ವಿ.ಹೆಗ್ಗಡೆ ಮಾತನಾಡಿ, ಮದ್ಯವ್ಯಸನಿಗಳು ಅನ್ಯಾಯ ಮಾಡುತ್ತಾ ಸಂಸ್ಕಾರಕ್ಕೂ ಸಮಾಜಕ್ಕೂ ಹೊರೆಯಾಗುತ್ತಾರೆ. ವ್ಯಸನಮುಕ್ತರಾಗಿ ಹೊಸ ಬದುಕನ್ನು ಆರಂಭಿಸಿದವರು ಪಂಚೇಂದ್ರಿಯಗಳ ನಿಗ್ರಹದೊಂದಿಗೆ ಮಾನಸಿಕ ಮಾಲಿನ್ಯ ರಹಿತರಾಗಿ ಆದರ್ಶ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ವ್ಯಸನಮುಕ್ತರು ಕುಟುಂಬದ ಸದಸ್ಯರೊಂದಿಗೆ ಪ್ರೀತಿ-ವಿಶ್ವಾಸದಿಂದ ಮುಕ್ತವಾಗಿ ಬೆರೆಯಬೇಕು. ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಹೇಳಿದರು.

ವ್ಯಸನಮುಕ್ತರ ಪರವಾಗಿ ರಾಮದುರ್ಗದ ಶಂಕರಪ್ಪ, ಉಡುಪಿಯ ಶಶಿಕಲರಾಜು ಅನಿಸಿಕೆ ವ್ಯಕ್ತಪಡಿಸಿದರು.

ಮೂಡಬಿದಿರೆ ಡಾ.ವಿನಯ್ ಆಳ್ವ ಅವರು ಜಾಗೃತಿಅಣ್ಣ ಮತ್ತು ಜಾಗೃತಿಮಿತ್ರ ಪ್ರಶಸ್ತಿ ಪ್ರದಾನ ಮಾಡಿದರು.

ಡಾ.ಪಿ.ವಿ.ಭಂಡಾರಿ, ಡಾ.ಶ್ರೀನಿವಾಸ ಭಟ್, ವಿ.ರಾಮಸ್ವಾಮಿ, ಪದ್ಮನಾಭ ಶೆಟ್ಟಿ, ಕಾಸಿಂ, ಅನಿಲ್ ಕುಮಾರ್ ಭಾಗವಹಿಸಿದ್ದರು.

ವಿವೇಕ್ ವಿ. ಪಾಯಸ್‌ ಸ್ವಾಗತಿಸಿದರು. ನಟರಾಜ್ ಬಾದಾಮಿ ವಂದಿಸಿದರು. ಯೋಜನಾಧಿಕಾರಿಗಳಾದ ನಾಗರಾಜ್, ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು.

ಶಿರಹಟ್ಟಿ ಭಾವೈಕ್ಯ ಪೀಠದ ಮಹಾರಾಜ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು
ಮೂಡಬಿದಿರೆ ಡಾ.ವಿನಯ್ ಆಳ್ವ ಅವರು ಜಾಗೃತಿ ಅಣ್ಣ ಮತ್ತು ಜಾಗೃತಿ ಮಿತ್ರ ಪ್ರಶಸ್ತಿ ಪ್ರದಾನ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.