ADVERTISEMENT

ಆಗಸ್ಟ್‌ನಲ್ಲಿ ಮನೆ ಮನೆ ಭಗವಾಧ್ವಜ ಅಭಿಯಾನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:08 IST
Last Updated 7 ಜುಲೈ 2022, 4:08 IST

ಮಂಗಳೂರು: ಪ್ರತಿ ಮನೆಯ ಮೇಲೆ ಭಗವಾಧ್ವಜ ಹಾರಿಸುವ ‘ಘರ್‌ ಘರ್‌ ಭಾಗ್ವಾ‘ ಅಭಿಯಾನವನ್ನು ಆಗಸ್ಟ್ 14ರಂದು ನಡೆಸಲಾಗುವುದು ಎಂದು ಅಖಿಲ ಭಾರತ ಹಿಂದು ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರಾಜೇಶ್ ಪವಿತ್ರನ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಮತ್ತುಭಾರತದ ವಿಭಜನೆಯ ಕಹಿನೆನಪಿಗಾಗಿ ಆಗಸ್ಟ್‌ 14 ತಾರೀಕನ್ನು ‘ಸಂಕಟ್‌ ದಿವಸ್‘ ಆಗಿ ಆಚರಿಸಲು ನಿರ್ಧರಿಸಲಾಗಿದೆ. ಎಲ್ಲ 224 ವಿಧಾನಸಭಾ ಕ್ಷೇತ್ರಗಳ ಹಿಂದುಗಳ ಮನೆ ಮೇಲೆ ಅಂದು ಧ್ವಜ ಹಾರಿಸಲಾಗುವುದು ಎಂದು ವಿವರಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್‌, ತಾಲ್ಲೂಕು ಪಂಚಾಯತ್, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾರ್ಯಕಾರಿ ಸಮಿತಿಯಲ್ಲಿ ನಿರ್ಧರಿಸಲಾಗಿದೆ. ಬೂತ್ ಮಟ್ಟದಲ್ಲಿ ಮಹಾಸಭಾವನ್ನು ಬಲಪಡಿಸಲಾಗುವುದು. ಮುಂದಿನ ವಿಧಾನಸಭಾ ಚುನಾವಣೆ ಸಂಘಟನೆಗೆ ಮಹತ್ವದ್ದಾಗಲಿದೆ. ಜನರ ಬಳಿಗೆ ತಲುಪುವುದಕ್ಕಾಗಿ ಸಾಮಾಜಿಕ ತಾಣಗಳನ್ನು ಬಳಸಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕಾಗಿ ಕನ್ಹಯ್ಯ ಲಾಲ್ ಅವರನ್ನು ಕೊಲೆ ಮಾಡಿದ ಘಟನೆಯನ್ನು ಖಂಡಿಸಿದ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ‘ಹಿಂದುತ್ವವನ್ನು ಬಲಪಡಿಸುವ ಅಗತ್ಯವಿದೆ. ನೂಪುರ್ ಶರ್ಮಾ ಅವರ ಬೆಂಬಲಕ್ಕೆ ನಿಂತವರ ಮೇಲೆ ಆಕ್ರಮಣ ಆಗದಂತೆ ನೋಡಿಕೊಳ್ಳಬೇಕಾಗಿದೆ. ನೂಪುರ್ ಶರ್ಮಾ ಅವರನ್ನು ಬೆಂಬಲಿಸುವುದು ಬಿಟ್ಟು ಅಂತರ ಕಾಯ್ದುಕೊಳ್ಳುವುದು ಬಿಜೆಪಿಗೆ ಶೋಭೆ ತರುವುದಿಲ್ಲ‘ ಎಂದರು.

’ದೇಶದಲ್ಲಿ ಹಿಂದುಗಳ ಮೇಲೆ ನಿರಂತರ ಆಕ್ರಮಣ ನಡೆಯುತ್ತಿದೆ. ಕುಟುಂಬ ರಾಜಕಾರಣವನ್ನು ಕೊನೆಗಾಣಿಸಲಾಗುವುದು ಎಂದು ಪ್ರಧಾನಿಗಳು ಹೇಳುತ್ತಾರೆ. ಆದರೆ ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ಮತ್ತು ಕೆ.ಎಸ್‌.ಈಶ್ವರಪ್ಪ ಅವರ ಕುಟುಂಬದವರು ಆಧಿಪತ್ಯ ಸಾಧಿಸಿದ್ದಾರೆ. ಹಿಂದುತ್ವವನ್ನು ಉಳಿಸಲು ಬಿಜೆಪಿಯ ಅಗತ್ಯವೇನೂ ಇಲ್ಲ. ಬಿಜೆಪಿ ಅಧಿಕಾರ ದಾಹವಿರುವ ಪಕ್ಷ. ಎಸ್‌ಡಿಪಿಐ ಜೊತೆ ಅದು ಕೈಜೋಡಿಸಿದೆ’ ಎಂದರು.

ಪ್ರೇಂ ಶೆಟ್ಟಿ, ರಾಜೇಶ್ ಪೂಜಾರಿ, ಹರ್ಷ ನಾಯಕ್‌ ಮತ್ತು ಪುನೀತ್ ಬಂಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.