ಮಂಗಳೂರು: ‘ಬಿಜೆಪಿ ವಿರುದ್ದ ಚುನಾವಣೆ ಗೆದ್ದು ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೊರಗರೂ ಸೇರಿದಂತೆ ಆದಿವಾಸಿಗಳ ಉದ್ಧಾರಕ್ಕಾಗಿ ಏನನ್ನೂ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರಸ್ಪರ ಜಗಳವಾಡಲು ತಮ್ಮ ಶಕ್ತಿಯನ್ನು ವ್ಯಯಿಸುತ್ತಿದ್ದಾರೆ. ಕುರ್ಚಿಗಾಗಿ ಕುಸ್ತಿ ಮಾಡುವುದನ್ನು ಬಿಟ್ಟು ಕೊರಗರ ಅಭಿವೃದ್ಧಿಗೆ ಅವರು ಕ್ರಮವಹಿಸಬೇಕು’ ಎಂದು ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್‌ನ ರಾಷ್ಟ್ರೀಯ ಉಪಾಧ್ಯಕ್ಷರಾದ ಬೃಂದಾ ಕಾರಟ್ ಹೇಳಿದರು.
ಆದಿವಾಸಿ ಕೊರಗ ಸಮುದಾಯದ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಇಲ್ಲಿ ಗುರುವಾರ ಏರ್ಪಡಿಸಿದ್ದ ಆದಿವಾಸ್ ಆಕ್ರೋಶ್ ರ‍್ಯಾಲಿಯಲ್ಲಿ ಅವರು ಮಾತನಾಡಿದರು.
‘ಆದಿವಾಸಿಗಳಲ್ಲೇ ಕೊರಗರು ಹಾಗೂ ಜೇನು ಕುರುಬರು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳು. ಸರ್ಕಾರಿ ಅಂಕಿಅಂಶಗಳ ಪ್ರಕಾರ ಕೊರಗರ ಸಂಖ್ಯೆ 16 ಸಾವಿರಕ್ಕೆ ಇಳಿದಿದೆ. ಆದರೆ ವಾಸ್ತವದಲ್ಲಿ ಅವರ ಸಂಖ್ಯೆ 12 ಸಾವಿರದಷ್ಟೂ ಇಲ್ಲ. ಶಿಶುಮರಣ ದರ ಹಾಗೂ ಬಾಣಂತಿ ಸಾವು ಈ ಸಮುದಾಯದವರಲ್ಲಿ ಜಾಸ್ತಿ ಇದೆ. ಫಲವಂತಿಕೆ ದರವೂ ಕುಸಿದಿದೆ. ಬಂಡವಾಳಶಾಹಿ ವ್ಯವಸ್ಥೆಯ ಶೋಷಣೆ ಅವರ ಬದುಕನ್ನೇ ನಾಶಪಡಿಸುತ್ತಿದ್ದು ಈ ಸಮುದಾಯವನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ’ ಎಂದರು.
‘ಅಸ್ಪೃಶ್ಯತೆಯನ್ನು ನಿಷೇಧಿಸಿದ್ದರೂ ಈ ಆದಿವಾಸಿಗಳು ಶೋಷಣೆಮುಕ್ತರಾಗಿಲ್ಲ. ಬೇರೆಯವರ ಉಗುರು, ಕೂದಲುಗಳನ್ನು ಆಹಾರದಲ್ಲಿ ಬೆರೆಸಿ ಉಣ್ಣುವಂತೆ ಮಾಡುವ ಅಜಲು ಪದ್ಧತಿಯಂತೂ ನಾಚಿಕೆಗೇಡಿನ ವಿಷಯ. ನಿಷೇಧ ಹೇರಿದ ಬಳಿಕವೂ ಈ ಪದ್ಧತಿ ಕೆಲವೆಡೆ ಆಚರಣೆಯಲ್ಲಿದೆ’ ಎಂದರು.
‘ಸಂಪ್ರದಾಯ ಹಾಗೂ ಕಟ್ಟುಪಾಡುಗಳ ಸಂರಕ್ಷಣೆಯ ಹೆಸರಿನಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಇಂತಹ ಆಚರಣೆಗಳನ್ನು ಉತ್ತೇಜಿಸುತ್ತಿದೆ. ಲಜ್ಜೆಬಿಟ್ಟ ಪಾಳೇಯಗಾರ ವರ್ಗ ಕೊರಗರ ದೈವವಾದ ಕೊರಗಜ್ಜನ ಹೆಸರಿನಲ್ಲೂ ಕೊಳ್ಳೆ ಹೊಡೆಯುತ್ತಿವೆ. ಕೊರಗಜ್ಜನಿಗೆ ಅಡ್ಡ ಬಿದ್ದು ಆಶೀರ್ವಾದ ಕೇಳುವ ಮಂದಿಯೇ, ಕೊರಗರನ್ನು ತುಳಿಯುತ್ತಿದ್ದಾರೆ. ಕೋಣಗಳನ್ನು ಓಡಿಸಿದಂತೆ ಅವರನ್ನೂ ಕೆಸರಿನಲ್ಲಿ ಓಡಿಸುತ್ತಾರೆ. ಪಾಳೇಯಗಾರರ ಮನೆಗಳ ಗೋಡೆಗಳಲ್ಲಿ ಕೊರಗಜ್ಜನ ಚಿತ್ರಗಳಿವೆ. ಆದರೆ, ಕೊರಗರು ಅಂತಹ ಚಿತ್ರ ಹಾಕಲು ಅವರ ಮನೆಗಳಿಗೆ ಗೋಡೆಗಳೇ ಇಲ್ಲ’ ಎಂದರು.
ಸಮಿತಿಯ ರಾಜ್ಯ ಘಟಕದ ಸಂಚಾಲಕ ಎಸ್.ವೈ.ಗುರುಶಾಂತ್, ‘ಆದಿವಾಸಿಗಳ ಮೇಲೆ, ಸಂವಿಧಾನದ ಮೇಲೆ ಮುಖ್ಯಮಂತ್ರಿಯವರಿಗೆ ಗೌರವ ಇದ್ದರೆ ತಕ್ಷಣ ಸಭೆ ಕರೆದು ಆದಿವಾಸಿಗಳ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮವಹಿಸಬೇಕು. ಇಲ್ಲದಿದ್ದರೆ ಅವರ ಮನೆಮುಂದೆ ಧರಣಿ ನಡೆಸಲಿದ್ದೇವೆ’ ಎಂದರು.
ಸಮಿತಿಯ ರಾಜ್ಯ ಘಟಕದ ಸಹಸಂಚಾಲಕ ಶ್ರೀಧರ ನಾಡ ‘ಹಿಂದಿನ ಸರ್ಕಾರ ಕೊರಗರ ಅಭಿವೃದ್ಧಿಗೆ ಮೀಸಲಿಟ್ಟ ಬಜೆಟ್ ಅನುದಾನವನ್ನು ಕಡಿತಗೊಳಿಸಿತ್ತು. ಅನುದಾನ ಹೆಚ್ಚಿಸಲು ಈಗಿನ ಸರ್ಕಾರವೂ ಕ್ರಮವಹಿಸಿಲ್ಲ’ ಎಂದರು
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ‘ಕಂಬಳ ನಡೆಸುವವರು ಕಟ್ಟುವ ಮುಂಡಾಸು ಹಾಗೂ ಕೈಯಲ್ಲಿ ಹಿಡಿಯುವ ಬೆತ್ತ ದೌರ್ಜನ್ಯದ ಸಂಕೇತ. ಈಚೆಗೆ ಕಂಬಳದ ಉದ್ಘಾಟನೆಗೆ ವಿಮಾನದಲ್ಲಿ ಜಿಲ್ಲೆಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕಂಬಳ ಆಯೋಜಕರು ಮುಂಡಾಸು ಕಟ್ಟಿ, ಕೈಯಲ್ಲಿ ಬೆತ್ತ ನೀಡಿದ್ದಾರೆ. ಆಧುನಿಕ ಕಾಲಘಟ್ಟದ ಆರ್ಥಿಕ ನೀತಿಗಳು ಬೆತ್ತದೇಟು ಬಾರಿಸಲು ಸಜ್ಜಾಗಿವೆ. ಮುಂಡಾಸು ಮತ್ತು ಬೆತ್ತದ ಬೆದರಿಕೆಗೆ ಸೆಡ್ಡು ಹೊಡೆದು ತಲೆ ಎತ್ತಿ ನಿಲ್ಲುವ ಸಂಕಲ್ಪವನ್ನು ಕೊರಗರು ಮಾಡಿದ್ದಾರೆ’ ಎಂದರು.
‘ಕೊರಗರು 40 ವರ್ಷಕ್ಕೇ ವೃದ್ಧರಂತೆ ಆಗುತ್ತಿರುವುದು, ಅವರ ಮಕ್ಕಳು ಹುಟ್ಟುವಾಗಲೇ ಸಾಯುತ್ತಿರುವುದು, ಹಸಿವಿನಿಂದ ಬಳಲುತ್ತಿರುವುದು ಮುಂಡಾಸು ಕಟ್ಟಿದವರಿಗೆ ಅರ್ಥವಾಗುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳಬೇಕಾದ ಜಿಲ್ಲಾಡಳಿತ ಕರಾವಳಿ ಉತ್ಸವ, ಬೀಚ್ ಉತ್ಸವಗಳಲ್ಲಿ ತಲ್ಲೀನವಾಗಿದೆ. ಇಲ್ಲಿನ ಬಿಜೆಪಿ ಶಾಸಕರು ಆಹಾರ ಮೇಳ ನಡೆಸುವುದರಲ್ಲಿ, ಕಾಂಗ್ರೆಸ್ ಶಾಸಕರು ಕಂಬಳ ಆಯೋಜಿಸುವುದರಲ್ಲಿ ನಿರತರಾಗಿದ್ದಾರೆ. ತುಳಿತಕ್ಕೊಳಗಾದ ಕೊರಗರು ಇದಕ್ಕೆ ವಿರುದ್ದ ದಿಕ್ಕಿನಲ್ಲಿ ಭೂಮಿ ಪಡೆಯಲು, ತಮ್ಮ ಹಸಿವು ನೀಗಿಸಲು ಮೆರವಣಿಗೆ ಹೊರಟಿದ್ದಾರೆ’ ಎಂದರು.
ಪತ್ರಕರ್ತ ನವೀನ್ ಸೂರಿಂಜೆ ರಚಿಸಿರುವ ‘ಕೊರಗರು– ತುಳುನಾಡಿನ ಮಾತೃ ಸಮುದಾಯ’ ಕೃತಿಯನ್ನು ಬೃಂದಾ ಕಾರಟ್ ಬಿಡುಗಡೆ ಮಾಡಿದರು.
ಸಮಿತಿಯ ರಾಜ್ಯ ಸಹಸಂಚಾಲಕ ಕೃಷ್ಣಪ್ಪ ಕೊಂಚಾಡಿ, ಶೇಖರ ವಾಮಂಜೂರು, ಕೃಷ್ಣಾ ಇನ್ನಾ, ರಶ್ಮಿ, ವಿಕಾಸ್, ರವೀಂದ್ರ ವಾಮಂಜೂರು, ತುಳಸಿ ಬೆಳ್ಮಣ್ಣು, ಶಶಿಧರ್ ಕೆರೆಕಾಡು, ನಿತೇಶ್ ಗುಂಡಾವುಪದವು, ಜಯ ಮಧ್ಯ, ಕೇಶವ ಕೆರೆಕಾರು, ಅಭಿಜಿತ್, ಕಿರಣ್ ಕತ್ತಲ ಸಾರ್, ಭಾಗೇಶ್ ಮೆಣ್ಣಬೆಟ್ಟು, ಆಶಿಕ್ ಮೆಣ್ಣಬೆಟ್ಟು, ಪ್ರಶಾಂತ್ ಕಂಕನಾಡಿ, ಪದ್ಮನಾಭ ಮಧ್ಯ ಹಾಗೂ ಜ್ಯೋತಿ ಮಧ್ಯ ಭಾಗವಹಿಸಿದರು.
ಗಮನ ಸೆಳೆದ ಕೊರಗರ ರ‍್ಯಾಲಿ
ನಗರದ ಬಾವುಟಗುಡ್ಡೆಯಿಂದ ಗಡಿಯಾರ ಗೋಪುರದವರೆಗೆ ನಡೆದ ಆದಿವಾಸ್ ಆಕ್ರೋಶ್ ರ‍್ಯಾಲಿಯಲ್ಲಿ ದಕ್ಷಿಣ ಕನ್ನಡ ಉಡುಪಿ ಹಾಗೂ ಆಸುಪಾಸಿನ ಜಿಲ್ಲೆಗಳ ಕೊರಗ ಸಮುದಾಯದವರು ಭಾಗವಹಿಸಿದರು. ಕೈಯಲ್ಲಿ ತಮ್ಮ ಮನೆಯ ಪೋಟೊಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕುವ ಮೂಲಕ ಯಾವ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ ಎಂದು ತೋರಿಸಿದರು. ಟರ್ಪಾಲು ಹೊದಿಸಿದ ಬೀಳುವ ಸ್ಥಿತಿಯಲ್ಲಿದ್ದ ಮನೆಯ ಚಿತ್ರಗಳು ಅವರ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟವು. ಕೆಲವರು ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ ಭಾಗವಹಿಸಿದರು. ಡೊಳ್ಳು ಈಟಿ ಭರ್ಜಿ ಬೆತ್ತದಿಂದ ತಯಾರಿಸುವ ಕೃಷಿ ಹಾಗೂ ಗೃಹೋಪಯೋಗಿ ಪರಿಕರಗಳನ್ನೂ ರ‍್ಯಾಲಿಯಲ್ಲಿ ಪ್ರದರ್ಶಿಸಿದರು.
‘ಮಹಮ್ಮದ್ ಪೀರ್ ವರದಿ ಜಾರಿಗೊಳಿಸಿ’
‘ಕೊರಗರ ಸಮಸ್ಯೆಗಳನ್ನು ಅಧ್ಯಯನ ಮಾಡಿ ಮಹಮ್ಮದ್ ಪೀರ್ 30 ವರ್ಷ ಹಿಂದೆ ಸಲ್ಲಿಸಿದ್ದ ವರದಿಯತ್ತ ಯಾವ ಸರ್ಕಾರವೂ ಗಮನಹರಿಸಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವಾದರೂ ಮಹಮ್ಮದ್ ಪೀರ್ ವರದಿಯ ಶಿಫಾರಸು ಜಾರಿ ಮಾಡಲಿ’ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮುದಾಯದ ಮುಖಂಡ ಕರಿಯ ಕೆ. ಆಗ್ರಹಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.