ADVERTISEMENT

13 ರಂದು ವಿಡಿಯೊ ಸಾಕ್ಷ್ಯ ಸಂಗ್ರಹ

ಗೋಲಿಬಾರ್: ಮ್ಯಾಜಿಸ್ಟೀರಿಯಲ್‌ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 13:49 IST
Last Updated 6 ಫೆಬ್ರುವರಿ 2020, 13:49 IST

ಮಂಗಳೂರು: ನಗರದಲ್ಲಿ ಡಿಸೆಂಬರ್ 19 ರಂದು ನಡೆದ ಗೋಲಿಬಾರ್ ಪ್ರಕರಣದ ಕುರಿತು ಮ್ಯಾಜಿಸ್ಟೀರಿಯಲ್‌ ವಿಚಾರಣೆ ನಡೆಸುತ್ತಿರುವ ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ಗುರುವಾರ ಇಲ್ಲಿನ ಉಪ ವಿಭಾಗಾಧಿಕಾರಿ ಕೋರ್ಟ್‌ ಸಭಾಂಗಣದಲ್ಲಿ ಸಾರ್ವಜನಿಕರಿಂದ ಸಾಕ್ಷಿ ಸಂಗ್ರಹಿಸಿದರು.

ಬೆಳಿಗ್ಗೆ 11 ಗಂಟೆಗೆ ವಿಚಾರಣೆ ಆರಂಭಿಸಿದ ಜಗದೀಶ್‌, ಸುಮಾರು 75 ಜನರಿಂದ ಹೇಳಿಕೆ ಹಾಗೂ ಸಾಕ್ಷ್ಯಗಳನ್ನು ದಾಖಲಿಸಿಕೊಂಡರು. ಹಲವಾರು ಜನರು ಅಂದು ನಡೆದ ಘಟನೆಗಳ ಬಗ್ಗೆ ತಮ್ಮ ಹೇಳಿಕೆಗಳನ್ನು ದಾಖಲೆಗಳೊಂದಿಗೆ ಸಲ್ಲಿಸಿದರು. ವಕೀಲರ ಮೂಲಕ ಹೇಳಿಕೆ ದಾಖಲಿಸಲು ಅವಕಾಶ ಇಲ್ಲದೇ ಇದ್ದುದರಿಂದ ಸಾರ್ವಜನಿರು ಖುದ್ದು ವಿಚಾರಣೆ ಹಾಜರಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜಗದೀಶ್‌, ‘ಸರ್ಕಾರದ ಸೂಚನೆಯಂತೆ ತನಿಖೆ ನಡೆಸಲಾಗುತ್ತಿದೆ. 75 ಜನರ ಹಾಜರಾಗಿದ್ದು, ಹೇಳಿಕೆ ಹಾಗೂ ಸಾಕ್ಷ್ಯಗಳನ್ನು ದಾಖಲಿಸಿಕೊಳ್ಳಲಾಗಿದೆ. ಇನ್ನೂ 8 ಜನರು ಬಾಕಿ ಇದ್ದು, ಅವರಿಗೆ ಇದೇ 13 ರಂದು ಹಾಜರಾಗಲು ತಿಳಿಸಲಾಗಿದೆ’ ಎಂದರು

ADVERTISEMENT

‘ಹೈಕೋರ್ಟ್‌ ಸೂಚನೆಯಂತೆ ಘಟನೆಯ ಕುರಿತಾದ ವಿಡಿಯೊ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಇದಕ್ಕಾಗಿ ಸಾರ್ವಜನಿಕರಿಗೆ ನೋಟಿಸ್‌ ನೀಡಲಾಗುವುದು. ಇದೇ 13 ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ವಿಚಾರಣೆಯ ಸಂದರ್ಭದಲ್ಲಿ ಸಾರ್ವಜನಿಕರು, ಮಾಧ್ಯಮದವರು ಸೇರಿದಂತೆ ವಿಡಿಯೊ ದೃಶ್ಯಾವಳಿ ಇರುವವರು, ಅವುಗಳನ್ನು ಹಾಜರು ಪಡಿಸಬೇಕು’ ಎಂದು ಹೇಳಿದರು.

‘ಈ ಕುರಿತು ಈಗಾಗಲೇ ಪೊಲೀಸ್‌ ಆಯುಕ್ತರಿಗೆ ತಿಳಿವಳಿಕೆ ಪತ್ರ ಬರೆದಿದ್ದು, ಪೊಲೀಸರ ಬಳಿ ಇರುವ ವಿಡಿಯೊ ದೃಶ್ಯಾವಳಿಗಳನ್ನು ಅದೇ ದಿನ ಹಾಜರು ಪಡಿಸುವಂತೆ ತಿಳಿಸಲಾಗಿದೆ’ ಎಂದ ಅವರು, ಪೊಲೀಸರ ವಿಚಾರಣೆಗೆ ಪ್ರತ್ಯೇಕ ದಿನವನ್ನು ನಿಗದಿಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.