ADVERTISEMENT

ಗೂಡ್ಸ್ ರೈಲು ಸಂಚಾರ ಆರಂಭ

ಪಡೀಲ್‌ ಬೈಪಾಸ್‌ ಮಾರ್ಗದ ಮಣ್ಣು ತೆರವು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 2:58 IST
Last Updated 27 ಸೆಪ್ಟೆಂಬರ್ 2020, 2:58 IST
ಪಡೀಲ್‌ ಬೈಪಾಸ್ ಮೂಲಕ ಶನಿವಾರ ಮಧ್ಯಾಹ್ನ ಗೂಡ್ಸ್ ರೈಲು ಸಂಚರಿಸಿತು.
ಪಡೀಲ್‌ ಬೈಪಾಸ್ ಮೂಲಕ ಶನಿವಾರ ಮಧ್ಯಾಹ್ನ ಗೂಡ್ಸ್ ರೈಲು ಸಂಚರಿಸಿತು.   

ಮಂಗಳೂರು: ಧಾರಾಕಾರ ಮಳೆಯಿಂದಾಗಿ ಇದೇ 20 ರಂದು ಇಲ್ಲಿನ ಪಡೀಲ್‌ ಬೈಪಾಸ್‌ ರೈಲು ಮಾರ್ಗದಲ್ಲಿ ಕುಸಿದಿದ್ದ ಮಣ್ಣು ತೆರವು ಕಾರ್ಯಾಚರಣೆ ಮುಂದುವರಿದಿದೆ. ಏಳು ದಿನಗಳ ಬಳಿಕ ಈ ಮಾರ್ಗದಲ್ಲಿ ಗೂಡ್ಸ್‌ ರೈಲು ಸಂಚಾರವನ್ನು ಶನಿವಾರ ಯಶಸ್ವಿಯಾಗಿ ನಡೆಸಲಾಯಿತು.

ದ್ವಿಪಥ ಮಾರ್ಗವಿರುವ ಈ ಸ್ಥಳದಲ್ಲಿ ಭಾರಿ ಪ್ರಮಾಣದ ಮಣ್ಣು ಕುಸಿದಿದ್ದರಿಂದ ಪ್ರಯಾಣಿಕ ರೈಲು ಹಾಗೂ ಗೂಡ್ಸ್‌ ರೈಲುಗಳ ಮಾರ್ಗವನ್ನು ಬದಲಿಸಲಾಗಿತ್ತು. ದಕ್ಷಿಣ ರೈಲ್ವೆ ಪಾಲ್ಘಾಟ್‌ ವಿಭಾಗದ ಅಧಿಕಾರಿಗಳ ನೇತೃತ್ವದಲ್ಲಿ ಸಿಬ್ಬಂದಿ, ಹಿಟಾಚಿ, ಜೆಸಿಬಿ ಬಳಸಿ 2–3 ದಿನಗಳಿಂದ ಮಣ್ಣು ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ.

ಸದ್ಯಕ್ಕೆ ಈ ಬೈಪಾಸ್‌ನ ಒಂದು ಬದಿಯ ಮಾರ್ಗದ ಮೇಲಿನ ಮಣ್ಣನ್ನು ಸಂಪೂರ್ಣ ತೆರವುಗೊಳಿಸಲಾಗಿದೆ. ಈ ಮಾರ್ಗದಲ್ಲಿ ಮಾತ್ರ ಗೂಡ್ಸ್‌ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಈ ಪ್ರದೇಶದಲ್ಲಿ 15 ಕಿ.ಮೀ. ವೇಗದಲ್ಲಿ ಸಂಚರಿಸಲು ಸೂಚನೆ ನೀಡಲಾಗಿದೆ.

ADVERTISEMENT

ಶನಿವಾರ ಮಧ್ಯಾಹ್ನ 3.45ಕ್ಕೆ ಸರಕು ಹೊತ್ತ ಗೂಡ್ಸ್‌ ರೈಲು ಈ ಮಾರ್ಗದ ಮೂಲಕ ಸಂಚರಿಸಿದೆ. ಆದರೆ, ಪ್ರಯಾಣಿಕ ರೈಲುಗಳ ಸಂಚಾರವನ್ನು ಇನ್ನೂ ಆರಂಭಿಸಿಲ್ಲ ಎಂದು ಪಾಲ್ಘಾಟ್‌ ವಿಭಾಗದ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಸಂಪೂರ್ಣ ಮಣ್ಣು ತೆರವು ಮಾಡಲು ಇನ್ನೂ ಎರಡು ದಿನಗಳ ಕಾಲಾವಕಾಶ ಅಗತ್ಯವಾಗಿದೆ. ಅಲ್ಲಿಯವರೆಗೆ ಕಾರವಾರ–ಕೆಎಸ್‌ಆರ್‌ ಮಂಗಳೂರು ರೈಲು ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದ ಮೂಲಕ ಸಂಚರಿಸಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.