ADVERTISEMENT

ಕುದ್ರೋಳಿ 25ನೇ ಗೂಡುದೀಪ ಸ್ಪರ್ಧೆ: ಬಣ್ಣ ಬಣ್ಣದ ಗೂಡುದೀಪಗಳ ಪ್ರಭಾವಳಿ

ಮುಸ್ಸಂಜೆಯಲ್ಲಿ ಸೃಷ್ಟಿಯಾದ ರಂಗಿನ ಲೋಕ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 5:41 IST
Last Updated 20 ಅಕ್ಟೋಬರ್ 2025, 5:41 IST
ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಗೂಡು ದೀಪಗಳು: ಪ್ರಜಾವಾಣಿ ಚಿತ್ರ
ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಗೂಡು ದೀಪಗಳು: ಪ್ರಜಾವಾಣಿ ಚಿತ್ರ   

ಮಂಗಳೂರು: ರಾಜ್ಮಾ ಕಾಳು, ತಿಂಗಳ ಅವರೆ, ಬೆಳ್ತಿಗೆ ಅಕ್ಕಿ, ನೆಲಗಡಲೆ, ಮಂಜೊಟ್ಟಿ, ಮಣಿಗಳನ್ನು ಪೋಣಿಸಿ ತಯಾರಿಸಿದ ಗೂಡುದೀಪ, ಬಣ್ಣ ಬಣ್ಣದ ಕಾಗದವನ್ನು ಕತ್ತರಿಸಿ ಅದರಲ್ಲಿ ಹಕ್ಕಿಯ ಚಿತ್ತಾರ ರಚಿಸಿ ತಯಾರಿಸಿದ ಗೂಡುದೀಪ, ಸಾಂಪ್ರದಾಯಿಕ ಅಷ್ಟಪಟ್ಟಿ ಗೂಡುದೀಪ, ಪೆಟ್ಟಿಗೆಯ ರಟ್ಟು ಬಳಸಿ ತಯಾರಿಸಿದ ಗೂಡುದೀಪ.... 

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಪ್ರಾಂಗಣವು ಭಾನುವಾರ ಮುಸ್ಸಂಜೆ ವೇಳೆ ಬಗೆ ಬಗೆಯ ಗೂಡುದೀಪಗಳಿಂದ ಕಂಗೊಳಿಸಿತು.

‘ನಮ್ಮಕುಡ್ಲ’ ಟಿ.ವಿ. ವಾಹಿನಿ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳುವ ಗೂಡುದೀಪ ಸ್ಪರ್ಧೆಗೆ ಈ ವರ್ಷ 25ರ ಸಂಭ್ರಮ. ಈ ಸಡಗರವನ್ನು ದುಪ್ಪಟ್ಟುಗೊಳಿಸುವ  ಚಿತ್ತಾಕರ್ಷಕ ಗೂಡುದೀಪಗಳು ಈ ವರ್ಷ ಸ್ಪರ್ಧೆಯಲ್ಲಿದ್ದವು. ಸ್ಪರ್ಧಿಗಳು  ಮನೆಗಳಲ್ಲಿ ತಯಾರಿಸಿ ತಂದು ಇಲ್ಲಿ ಪ್ರದರ್ಶನಕ್ಕಿಟ್ಟಿದ್ದ ವಿಭಿನ್ನ ವಿನ್ಯಾಸದ, ವರ್ಣರಂಜಿತ ಗೂಡುದೀಪಗಳು  ಮುಸ್ಸಂಜೆಯಲ್ಲಿ ರಂಗಿನ ಬೆಳಕಿನ ಲೋಕವನ್ನು ಸೃಷ್ಟಿಸಿದವು. ಈ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದರು.  

ADVERTISEMENT

ಉದ್ಯಮಿ ಕೃಷ್ಣ ಜೆ. ಪಾಲೇಮಾರ್ ಗೂಡು ದೀಪವನ್ನು ಆಗಸಕ್ಕೆ  ಏರಿಸುವ ಮೂಲಕ ಸ್ಪರ್ಧೆಯನ್ನು ಉದ್ಘಾಟಿಸಿದರು. ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿಯ ಉಪಾಧ್ಯಕ್ಷೆ ಊರ್ಮಿಳಾ ರಮೇಶ್‌ ದೀಪ ಬೆಳಗಿದರು.ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಮ್ ಅಧ್ಯಕ್ಷತೆ ವಹಿಸಿದ್ದರು.

 ಶ್ರೀನಿವಾಸ ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿ ಎ.ಶ್ರೀನಿವಾಸ ರಾವ್, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಕ್ಷೇತ್ರದ ಆಡಳಿತ ಮಂಡಳಿಯ ಕಾರ್ಯದರ್ಶಿ ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್ ಆರ್. ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾ. ಮೂರ್ತೆದಾರರ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ಕ್ಷೇತ್ರಾಭಿವೃದ್ಧಿ ಸಮಿತಿಯ ಕೃತಿನ್ ಅಮೀನ್, ಹರಿಕೃಷ್ಣ ಬಂಟ್ವಾಳ, ರಮಾನಂದ ಕಾರಂದೂರು, ‘ನಮ್ಮಕುಡ್ಲ’ ವಾಹಿನಿಯ ಹರೀಶ್ ಬಿ. ಕರ್ಕೇರ, ಸುರೇಶ್ ಬಿ. ಕರ್ಕೇರ, ಮೋಹನ್ ಬಿ. ಕರ್ಕೇರ, ಲೀಲಾಕ್ಷ ಬಿ. ಕರ್ಕೇರ, ಸಂತೋಷ ಬಿ. ಕರ್ಕೇರ ಭಾಗವಹಿಸಿದ್ದರು.
   
ಕದ್ರಿ ನವನೀತ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು. ಎಂ. ಎಸ್. ಕೋಟ್ಯಾನ್ ವಂದಿಸಿದರು.

ವಿಜೇತರಿಗೆ ಚಿನ್ನದ ಪದಕ

ಸಾಂಪ್ರದಾಯಿಕ ಆಧುನಿಕ ಹಾಗೂ ಪ್ರತಿಕೃತಿ  ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಪ್ರತಿ ವಿಭಾಗದಲ್ಲಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದ ಗೂಡುದೀಪಗಳಿಗೆ ‘ಚಿನ್ನದ ಪದಕ’ ತೃತೀಯ ಸ್ಥಾನ ಪಡೆದವರಿಗೆ ಬೆಳ್ಳಿಯ ಪದಕ ಮತ್ತು 50 ಮಂದಿಗೆ ಪ್ರೋತ್ಸಾಹಕ ಬಹುಮಾನ  ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.