ADVERTISEMENT

ಬೆಳ್ತಂಗಡಿ | ‘ನಾಡಿಗೆ ಸಾಧಕರ ಪರಿಚಯಿಸಿದ ಸರ್ಕಾರಿ ಶಾಲೆ’

ಬಳಂಜ ಸರ್ಕಾರಿ ಶಾಲಾ ಅಮೃತ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 6:47 IST
Last Updated 15 ಡಿಸೆಂಬರ್ 2025, 6:47 IST
ಬಳಂಜ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಮೃತ ಮಹೋತ್ಸವದ ಸಭಾ ಕಾರ್ಯಕ್ರಮವನ್ನು ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ ಅಜಿಲ ಉದ್ಘಾಟಿಸಿದರು 
ಬಳಂಜ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಮೃತ ಮಹೋತ್ಸವದ ಸಭಾ ಕಾರ್ಯಕ್ರಮವನ್ನು ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ ಅಜಿಲ ಉದ್ಘಾಟಿಸಿದರು    

ಬೆಳ್ತಂಗಡಿ: ‘ಎಲ್ಲಾ ಕ್ಷೇತ್ರಗಳಲ್ಲಿ ವಿವಿಧ ಸಾಧಕರು, ದಾನಿಗಳು, ನಾಯಕರು, ಪ್ರತಿಭಾನ್ವಿತರನ್ನು ಬಳಂಜ ಗ್ರಾಮ ಕಂಡಿದೆ. ಅದಕ್ಕೆ ಇಲ್ಲಿರುವ ಸರ್ಕಾರಿ ಶಾಲೆಯೇ ಕಾರಣ’ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಬಳಂಜ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕೀರ್ತಿಶೇಷ ಪಟೇಲ್ ಕಿನ್ನಿಯಾನೆ ಕೋಟಿ ಪಡಿವಾಳ ಸಭಾ ಮಂದಿರದಲ್ಲಿ ನಡೆದ ಅಮೃತ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಳಂಜದ ಜನರ ಮನೋಭಾವ ವಿಶಾಲವಾದದ್ದು. ಇಲ್ಲಿನ ದೇವಾಲಯ ಮತ್ತು ಶಾಲೆ ಊರಿಗೆ ಧಾರ್ಮಿಕವಾಗಿ, ಸಾಮಾಜಿಕವಾಗಿ ಅಪೂರ್ವ ಶಕ್ತಿಯನ್ನು ನೀಡಿದೆ. ನನ್ನ ಸರ್ವತೋಮುಖ ಉನ್ನತಿಗಾಗಿ ಬಳಂಜವೇ ಪ್ರೇರಣೆ’ ಎಂದರು.

ADVERTISEMENT

‘ಇಲ್ಲಿನ ಹಿರಿಯರ ಕಾರ್ಯಕ್ಷಮತೆ, ಹಳೆ ವಿದ್ಯಾರ್ಥಿ ಸಂಘದ ಬಲ, ಶಾಲಾ ಶಿಕ್ಷಣ ಟ್ರಸ್ಟ್ ಹಾಗೂ ಉದ್ಯಮಿ ಅಶ್ವತ್ಥ್ ಹೆಗ್ಡೆಯವರ ಚಿಂತನೆಯ ಫಲವಾಗಿ ಶಾಲೆ ಅಭಿವೃದ್ಧಿಯೊಂದಿಗೆ ಅಭೂತಪೂರ್ವವಾದ ಅಮೃತಮಹೋತ್ಸವ ಕಾಣುವಂತಾಗಿದೆ. ಈಗಾಗಲೇ ಮೈದಾನದ ವಿಸ್ತರಣೆಗೆ ₹ 5 ಲಕ್ಷ ನೀಡಲಾಗಿದೆ. ಮುಂದಿನ ಕ್ರಿಯಾ ಯೋಜನೆಯಲ್ಲಿ ಬಳಂಜ ಶಾಲೆಗೆ ಮೊದಲ ಆದ್ಯತೆ ನೀಡುವೆ. ಅಲ್ಲದೇ ಸಿಎಸ್‌ಆರ್ ಅನುದಾನಗಳ ವ್ಯವಸ್ಥೆ ಮಾಡುವ ಭರವಸೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ ಅಜಿಲ, ‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಅಧಿಕವಾಗುವಲ್ಲಿ ಊರಿನವರ ಮತ್ತು ಶಿಕ್ಷಕರ ಜವಾಬ್ದಾರಿಯೂ ಮುಖ್ಯವಾಗುತ್ತದೆ. ಊರಿಗೊಂದು ಶಾಲೆ ಎಂಬ ಕಲ್ಪನೆಯಲ್ಲಿ ಕೋಟಿ ಪಡಿವಾಳರ ದೂರದೃಷ್ಟಿಯ ಫಲವಾಗಿ ಬಳಂಜದಲ್ಲಿ ಶಾಲೆ ಆರಂಭಗೊಂಡಿತು. ಕಳೆದ 75 ವರ್ಷಗಳಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಇಲ್ಲಿ ಕಲಿತು ಹಲವಾರು ಕ್ಷೇತ್ರಗಳಲ್ಲಿ ಪ್ರಸಿದ್ಧರಾಗಿದ್ದಾರೆ. ಹೀಗಾಗಿ ಇಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಅವು ಅಚ್ಚುಕಟ್ಟಾಗಿರುತ್ತದೆ ಮತ್ತು ವಿಜೃಂಭಣೆಯಿಂದ ಕೂಡಿರುತ್ತವೆ’ ಎಂದರು.

ವೇದಿಕೆಯಲ್ಲಿ ಬಳಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಕುಲಾಲ್, ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಉಪನಿರ್ದೇಶಕ ಜಿ.ಎಸ್.ಶಶಿಧರ್, ಶಿಕ್ಷಣ ಸಂಯೋಜಕ ಸಿದ್ಧಲಿಂಗ ಸ್ವಾಮಿ, ಸಂಯೋಜಕಿ ಚೇತನಾಕ್ಷಿ, ಅಳದಂಗಡಿಯ ಡಾ.ಎನ್.ಎಂ.ತುಳಪುಳೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರತ್ನಾಕರ ಪೂಜಾರಿ, ಪ್ರೌಢಶಾಲಾ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ. ವಸಂತ ಸಾಲಿಯಾನ್, ಅಳದಂಗಡಿ ಸಿ.ಎ.ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ, ಶಾಲಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ ಬಳಂಜ, ಹಿರಿಯರಾದ ಯುವರಾಜ ಪಡಿವಾಳ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್, ಅಮೃತೋತ್ಸವ ಸಮಿತಿ ಗೌರವಾಧ್ಯಕ್ಷ ಸುರೇಶ್ ಶೆಟ್ಟಿ, ಯುವಕ ಮಂಡಲ ಅಧ್ಯಕ್ಷ ಸುಕೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಸುಚಿತ್ರ, ಯಕ್ಷಿತಾ, ಶಾಲಾ ವಿದ್ಯಾರ್ಥಿ ನಾಯಕಿರಾದ ಜೊವಿಟಾ ಮತ್ತು ಅನ್ವಿತಾ ಹಾಜರಿದ್ದರು.

ಅಮೃತ ಮಹೋತ್ಸವ ಸಮಿತಿ ಸಂಚಾಲಕ ಅಶ್ವತ್ ಹೆಗ್ಡೆ ಸ್ವಾಗತಿಸಿದರು. ಅಧ್ಯಕ್ಷ ಪಿ.ಕೆ.ಚಂದ್ರಶೇಖರ್ ಪ್ರಸ್ತಾವಿಸಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರಂಗಸ್ವಾಮಿ ಸಿ.ಆರ್. ವರದಿ ಮಂಡಿಸಿದರು. ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಲೋಚನಾ ವಂದಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಕಳೆದ 75 ವರ್ಷಗಳಲ್ಲಿ ಶಾಲಾ ಉನ್ನತಿಗೆ ಸಹಕರಿಸಿದವರಿಗೆ, ಅಕ್ಷರ ದಾಸೋಹದ ಸಿಬ್ಬಂದಿ, ಶಿಕ್ಷಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಶೈಕ್ಷಣಿಕ ಪರಿಕರಗಳಿಂದ ವೇದಿಕೆ ಸಿಂಗಾರ ಪುಸ್ತಕ ಪೆನ್ಸಿಲ್ ಮೊದಲಾದ ಶೈಕ್ಷಣಿಕ ಪರಿಕರಗಳ ಚಟುವಟಿಕೆಗಳ ಬೃಹತ್ ಪ್ರತಿಕೃತಿಗಳೊಂದಿಗೆ ಮತ್ತು ಆಕರ್ಷಕ ರಂಗೋಲಿ ಕಲಾತ್ಮಕತೆಯೊಂದಿಗೆ ಸಭಾ ವೇದಿಕೆಯನ್ನು ಸಿಂಗರಿಸಲಾಗಿತ್ತು. ಬಳಂಜ ಕೊಡಮಣಿತ್ತಾಯ ಕಟ್ಟೆ ಬಳಿಯಿಂದ ವೈಭವದ ವಿವಿಧ ಕಲಾ ತಂಡ ಸಾಂಸ್ಕೃತಿಕ ವೈವಿಧ್ಯಮಯ ಮೆರವಣಿಗೆ ನಡೆಯಿತು. ಅಮೃತ ಸಿಂಧು ಸ್ಮರಣ ಸಂಚಿಕೆಯ ಲಾಂಛನವನ್ನು ಡಾ. ಪದ್ಮಪ್ರಸಾದ ಅಜಿಲ ಬಿಡುಗಡೆ ಮಾಡಿದರು. ಕಾರ್ಯಕ್ರಮದ ಮೊದಲು ಶಾಲಾ ಪ್ರವೇಶದಲ್ಲಿನ ತಂಗುದಾಣವನ್ನು ಶಾಸಕರು ಉದ್ಘಾಟಿಸಿದರು. ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಸಂಸದ ಬ್ರಿಜೇಶ್ ಚೌಟ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರ ಸಂದೇಶಗಳನ್ನು ವಾಚಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.