ಪುತ್ತೂರು: ವಿದ್ಯಾರ್ಥಿಗಳ ಕೊರತೆಯಿಂದಾಗಿ ಬಾಗಿಲು ಮುಚ್ಚುವ ಹಂತಕ್ಕೆ ತಲುಪಿದ್ದ, ಶತಮಾನ ಕಂಡ ಪುತ್ತೂರು ತಾಲ್ಲೂಕಿನ ಕಾವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೀಗ ಮಕ್ಕಳ ಕಲರವ ಕೇಳಿಬರುತ್ತಿದೆ.
ಪ್ರಸ್ತುತ ಈ ಶಾಲೆ ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಯಾಗಿ ಪರಿವರ್ತನೆಯಾಗಿದ್ದು, ಪೋಷಕರ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಹಕಾರದಿಂದ ಸರ್ಕಾರಿ ಶಾಲೆ ಬದಲಾಗಿದೆ.
ಪುತ್ತೂರು, ಬೆಳ್ತಂಗಡಿ ತಾಲ್ಲೂಕಿಗೆ ತಲಾ ಒಂದು ಪ್ರೌಢಶಾಲೆಯನ್ನು ಈ ಬಾರಿ ಸರ್ಕಾರ ಮಂಜೂರು ಮಾಡಿದೆ. ರಾಜ್ಯದ 100 ಪ್ರಾಥಮಿಕ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಎಂಟನೇ ತರಗತಿ ಆರಂಭಗೊಳ್ಳಲಿದ್ದು, ಈ ಪಟ್ಟಿಯಲ್ಲಿ ಕಾವು ಶಾಲೆಯೂ ಸೇರಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಂಟನೇ ತರಗತಿಯನ್ನು ಪ್ರಾರಂಭಿಸುವ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಕಾವು ಸರ್ಕಾರಿ ಶಾಲೆಯಲ್ಲಿ 2005ರಲ್ಲಿ ಮಕ್ಕಳ ಸಂಖ್ಯೆ ಬಹಳ ಕಡಿಮೆ ಇತ್ತು. ಗ್ರಾಮೀಣ ಭಾಗದಲ್ಲಿ ಆರಂಭವಾದ ಖಾಸಗಿ ಶಾಲೆಗಳಿಂದ ಈ ಸ್ಥಿತಿ ಬಂದಿತ್ತು. ರಾಜಕೀಯ ಮತ್ತು ಸಾಮಾಜಿಕ ಮುಖಂಡ ಕಾವು ಹೇಮನಾಥ ಶೆಟ್ಟಿ ಅವರು, ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ ಎಂದು ಪಣತೊಟ್ಟು ಶಾಲೆಯನ್ನು ದತ್ತು ಪಡೆದು ಶಾಲೆಯ ಪುನಃಶ್ಚೇತನಕ್ಕೆ ಮುಂದಾಗಿದ್ದರು.
ಶಾಲೆಗೆ ಮೂಲ ಸವಲತ್ತು ತರಿಸಿದ ಹೇಮನಾಥ ಶೆಟ್ಟಿ, ಸರ್ಕಾರದ ಅನುಮತಿ ಇಲ್ಲದೆ ಮೊದಲ ಬಾರಿಗೆ ಪುತ್ತೂರು ತಾಲ್ಲೂಕಿನಲ್ಲಿ ಕಾವು ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಎಲ್‌ಕೆಜಿ, ಯುಕೆಜಿ ತರಗತಿ ಪ್ರಾರಂಭಿಸಿದ್ದರು. ಈಗ ಶಾಲೆಯಲ್ಲಿ ಎಲ್‌ಕೆಜಿಯಿಂದ 7ನೇ ತರಗತಿವರೆಗೆ ಆಂಗ್ಲ ಹಾಗೂ ಕನ್ನಡ ಮಾಧ್ಯಮ ತರಗತಿಗಳಿದ್ದು, 10 ವರ್ಷದ ಬಳಿಕ ಇದೀಗ ಶಾಲೆಯಲ್ಲಿ 450 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.
ಮಕ್ಕಳನ್ನು ಶಾಲೆಯತ್ತ ಆಕರ್ಷಿಸಲು ಹಲವು ವ್ಯವಸ್ಥೆ ಮಾಡಲಾಗಿದೆ. ಎರಡು ವರ್ಷದಿಂದ ಶಾಲೆಗೆ ಬಸ್ ವ್ಯವಸ್ಥೆ ಮಾಡಲಾಗಿದೆ.
ಕೊಟ್ಟ ಮಾತಿನಂತೆ ಕಾವು ಸರ್ಕಾರಿ ಶಾಲೆಗೆ ಎಂಟನೇ ತರಗತಿಯನ್ನು ಮಂಜೂರು ಮಾಡಿದ್ದೇನೆ. ಶಾಲೆಯನ್ನು ಕಾವು ಹೇಮನಾಥ ಶೆಟ್ಟಿ ಅವರು ಹತ್ತು ವರ್ಷಗಳ ಹಿಂದೆ ದತ್ತುಪಡೆದುಕೊಂಡು, ಪೋಷಕರು ಹಾಗೂ ಯುವಕರ ತಂಡವನ್ನು ಸೇರಿಸಿ ಖಾಸಗಿ ಶಾಲೆಯ ಮಾದರಿಯಲ್ಲೇ ಅಭಿವೃದ್ಧಿ ಪಡಿಸಿದ್ದಾರೆ. ಇದೀಗ ಮಕ್ಕಳ ಸಂಖ್ಯೆಯೂ ಇದೆ. ಪೋಷಕರ ಸಂಪೂರ್ಣ ಸಹಕಾರ ಈ ಶಾಲೆಯ ಬೆಳವಣಿಗೆಯ ಹಿಂದೆ ಕೆಲಸ ಮಾಡಿದೆ ಎಂದು ಶಾಸಕ ಅಶೋಕ್‌ಕುಮಾರ್ ರೈ ತಿಳಿಸಿದರು.
ನಾನು ಶಾಲೆಯನ್ನು ದತ್ತು ಪಡೆದುಕೊಂಡ ಬಳಿಕ ಶಾಲೆಯ ಪೋಷಕರು, ಹಿರಿಯ ವಿದ್ಯಾರ್ಥಿಗಳು, ಸ್ಥಳೀಯ ಸಂಘ ಸಂಸ್ಥೆಗಳು, ದಾನಿಗಳು ಹಾಗೂ ಎಲ್ಲರ ಸಹಕಾರದಿಂದ ಅಭಿವೃದ್ದಿ ಕೆಲಸಗಳು ನಡೆದಿವೆ. ಶಾಲೆಯ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಬೇಕಾಗಿದೆ. ಶತಮಾನ ಕಂಡ ಈ ಶಾಲೆಗೆ ಶತಮಾನದ ಬಳಿಕ ಎಂಟನೇ ತರಗತಿ ಮಂಜೂರುಗೊಂಡಿರುವುದು ಗ್ರಾಮೀಣ ಭಾಗದ ಬಡವರ ಮಕ್ಕಳ ಪಾಲಿಗೆ ಸಹಕಾರಿಯಾಗಿದೆ. ಶಾಸಕ ಅಶೋಕ್‌ಕುಮಾರ್ ರೈ, ಶಿಕ್ಷಣ ಇಲಾಖೆ ಮತ್ತು ಎಲ್ಲರ ಸಹಕಾರದಿಂದ ಪ್ರೌಢ ಶಾಲೆ ಮಂಜೂರುಗೊಂಡಿದ್ದು, ಇದು ಸಂತಸದ ವಿಚಾರ ಎಂದು ಕಾವು ಹೇಮನಾಥ ಶೆಟ್ಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.